ಪುತ್ತೂರು ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು, ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹ

ಮಾ.30ರಂದು ಕಾಲ್ನಡಿಗೆ ಜಾಥಾ - ಸಮಾವೇಶ

Update: 2023-03-25 18:29 GMT

ಮಂಗಳೂರು,ಮಾ.25: ಪುತ್ತೂರು ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಹಾಗೂ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಮಾ.30ರಂದು ಬೃಹತ್ ಕಾಲ್ನಡಿಗೆ ಜಾಥಾ, 'ಜನಾರೋಗ್ಯಕ್ಕಾಗಿ ನಾವು ಸಮಾವೇಶ' ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯ ಗೌರವಾಧ್ಯಕ್ಷ, ವಿಧಾನ  ಪರಿಷತ್ ನ ಮಾಜಿ ಸದಸ್ಯ ಅಣ್ಣ ವಿನಯಚಂದ್ರ ಹೇಳಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾ.30ರಂದು ಬೆಳಗ್ಗೆ 10 ಗಂಟೆಗೆ ದರ್ಬೆ ವೃತ್ತದಿಂದ ಜಾಥಾ ಹೊರಟು ಕಿಲ್ಲೆ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ ಎಂದರು.

ಉಡುಪಿ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಮತ್ತು ದ.ಕ. ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಪುತ್ತೂರು ಈ ಸಮಿತಿಗಳು ಜಂಟಿಯಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಆಗ್ರಹಿಸಲಿದ್ದು, ಎಪ್ರಿಲ್ 1ರಂದು ‘‘ನಾವು ಇನ್ನೂ ಕೂಡ ಮೂರ್ಖರೆ’’ ಎಂಬ ಪ್ರತಿಭಟನಾ ಮೆರವಣಿಗೆ ಉಡುಪಿಯ ಮಲ್ಪೆಯ ಗಾಂಧಿ ಪ್ರತಿಮೆಯ ಬಳಿ ನಡೆಯಲಿದೆ ಎಂದು ಉಡುಪಿ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.

ಈ ಎರಡು ಸಂಘಟನೆಗಳು, ಉಡುಪಿ ಮತ್ತು ದಕ್ಷಿಣ ಕನ್ನಡದ ಜನರಿಗೆ ಗುಣಮಟ್ಟದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಪುತ್ತೂರಿನಲ್ಲಿ ನಡೆಯಲಿರುವ ಜನ ಆರೋಗ್ಯಕ್ಕಾಗಿ ನಾವು ಸಮಾವೇಶದಲ್ಲಿ ಭಾಗವಹಿಸಲು ಎಲ್ಲ ರಾಜಕೀಯ ಪಕ್ಷಗಳನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದೇವೆ. ಅವರಿಗೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಲಾಗುವುದು. ರಾಜಕೀಯ ಪಕ್ಷಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನಮ್ಮ ಆಹ್ವಾನವನ್ನು ಸ್ವೀಕರಿಸಿವೆ, ಅದೇ ರೀತಿ ರಾಜಕೀಯ ಪಕ್ಷಗಳನ್ನು ನಮ್ಮ ಉಡುಪಿ ಪ್ರತಿಭಟನಾ ಮೆರವಣಿಗೆಗೆ ಆಗಮಿಸಿ ನಮ್ಮ ಜಿಲ್ಲೆಯ ಜನತೆಯನ್ನು ಉದ್ದೇಶಿಸಿ ಮಾತನಾಡಲು ಆಹ್ವಾನಿಸುತ್ತೇವೆ ಎಂದು ಪಿ.ವಿ.ಭಂಡಾರಿ ಹೇಳಿದ್ದಾರೆ.

ಎಲ್ಲ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಈ ಬೇಡಿಕೆಯನ್ನು ಸೇರಿಸುವ ಮೂಲಕ ಬದ್ಧರಾಗಬೇಕೆಂದು ಕೂಡ ನಮ್ಮ ಬೇಡಿಕೆಯಾಗಿದೆ. ಈ ಬೇಡಿಕೆಯ ಮಹತ್ವವನ್ನು ಗುರುತಿಸಲು ಮತ್ತು ಅಧಿಕಾರಕ್ಕೆ ಆಯ್ಕೆಯಾದರೆ ಇದನ್ನು ಈಡೇರಿಸಲು ಇದು ನಿರ್ಣಾಯಕವಾಗುತ್ತದೆ ಎಂಬುದು ನಮ್ಮ ಅನಿಸಿಕೆಯಾಗಿದೆ ಎಂದು ವಿನಯಚಂದ್ರ ಮತ್ತು ಪಿ.ವಿ. ಭಂಡಾರಿ ತಿಳಿಸಿದರು.

ಪುತ್ತೂರಿನಲ್ಲಿ ಸಮಾವೇಶ ಮತ್ತು ಉಡುಪಿಯಲ್ಲಿ ಪ್ರತಿಭಟನಾ ಮೆರವಣಿಗೆಯು ಎರಡೂ ಜಿಲ್ಲೆಗಳಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಸಂವಾದ ಮತ್ತು ಸಹಯೋಗಕ್ಕೆ ರಚನಾತ್ಮಕ ವೇದಿಕೆಯಾಗಲಿದೆ. ಈ ಬೇಡಿಕೆಯನ್ನು ಸಮಯೋಚಿತ ಮತ್ತು ಪರಿಣಾಮಕಾರಿ ರೀತಿಯಲ್ಲಿ ಪರಿಹರಿಸಲು ಈ ಅಂದೋಲನ ಮುಂದುವರಿಸುತ್ತೇವೆ ಎಂದರು.

Similar News