ಸಂವಿಧಾನದಲ್ಲಿ ನಂಬಿಕೆ ಇಲ್ಲದ ವ್ಯಕ್ತಿಗಳಿಂದ ರಾಹುಲ್ ಗಾಂಧಿ ಸದಸ್ಯತ್ವ ರದ್ದು: ಬಿ.ಕೆ.ಹರಿಪ್ರಸಾದ್

Update: 2023-03-25 10:37 GMT

ಮಂಗಳೂರು,ಮಾ.25: ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಕೃತ್ಯ ದೇಶದಲ್ಲಿ ನಡೆಯುತ್ತಿದ್ದು, ಸಂವಿಧಾನದಲ್ಲಿ ನಂಬಿಕೆ ಇಲ್ಲದ ವ್ಯಕ್ತಿಗಳು ರಾಹುಲ್ ಗಾಂಧಿ ಸದಸ್ಯತ್ವ ರದ್ದು ಮಾಡಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಂಸದ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಹುಲ್ ಗಾಂಧಿಯ ಬಗ್ಗೆ ಭಯದಿಂದ ಈ ಕೆಲಸ ಮಾಡಿದ್ದಾರೆ. ಲೋಕಸಭೆಯಲ್ಲಿ ಅವರ ಸದಸ್ಯತ್ವವನ್ನು 24 ಗಂಟೆಗಳ ಒಳಗೆ ಜಾರಿ ಮಾಡುವ ಮೂಲಕ ಹೇಡಿಗಳ ರೀತಿಯಲ್ಲಿ ಆಡಳಿತ ಪಕ್ಷ ಕಾರ್ಯ ನಿರ್ವಹಿಸುತ್ತಿದೆ. ದೇಶದಲ್ಲಿ ನಿರಂಕುಶ ಪ್ರಭುತ್ವದ ರೀತಿಯಲ್ಲಿ ಸರಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ.

ದೇಶದಲ್ಲಿ ಕಾನೂನು ಅನುಷ್ಠಾನದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಗುಜರಾತ್ ನಲ್ಲಿ ಬಿಲ್ಕೀಸ್ ಬಾನು ಪ್ರಕರಣದಲ್ಲಿ ಸಂತೃಸ್ತರಿಗೆ ಇನ್ನೂ ನ್ಯಾಯ ದೊರೆತ್ತಿಲ್ಲ. ಹಿಂಸೆಗೆ ಪ್ರಚೋದನೆ ನೀಡುವ ವ್ಯಕ್ತಿಗಳ ವಿರುದ್ಧ ಯಾವುದೇ ಸ್ವಯಂ ಪ್ರೇರಿತ ದೂರು ದಾಖಲಿಸುವ ಕೆಲಸ ಸರಕಾರದಿಂದ ನಡೆಯುತ್ತಿಲ್ಲ. ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಯ ಬಗ್ಗೆ ನಂಬಿಕೆ ಇಲ್ಲದ ವ್ಯಕ್ತಿ ಗಳಿಂದ ರಾಹುಲ್ ಗಾಂಧಿಯವರ ಸದಸ್ಯತ್ವ ರದ್ದು ಮಾಡುವ ಕೃತ್ಯ ನಡೆಯುತ್ತಿದೆ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ.

ಬೊಮ್ಮಾಯಿ ಸರಕಾರ ರಾಜ್ಯದಲ್ಲಿ ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದು ಗೊಳಿಸುವ ನೀತಿಯನ್ನು ಹೊಂದಿದೆ. ಇದರ ಅಂಗವಾಗಿ ಮುಸ್ಲಿಂ ಸಮುದಾಯವನ್ನು 2 ಬಿ ಯಿಂದ ಹೊರಗಿಡುವ ತುರ್ತು ತೀರ್ಮಾನ ವನ್ನು ಮಾಡಿದ್ದಾರೆ. ಈ ಹಿಂದೆ ಸಂಘ ಪರಿವಾರದ ಮುಖಂಡರು ಮೀಸಲಾತಿ ಯನ್ನು ದೇಶದಲ್ಲಿ ರದ್ದುಗೊಳಿಸುವ ಮಾತನಾಡಿದ್ದಾರೆ. ಬೊಮ್ಮಾಯಿ ಅದನ್ನು ಹಂತ ಹಂತವಾಗಿ  ಅನುಷ್ಠಾನ ಮಾಡಲು ಹೊರಟಿದ್ದಾರೆ ಎಂದರು.

ಕರಾವಳಿಯಲ್ಲಿ ಒಂದು ತಿಂಗಳ ಕಾಲ ನಡೆದ  ಪ್ರಜಾಧ್ವನಿ ಯಾತ್ರೆ ಶನಿವಾರ ಬಂಟ್ವಾಳ ದಲ್ಲಿ ಸಮಾರೋಪ ಗೊಳ್ಳಲಿದೆ. ಈ ಯಾತ್ರೆ ಯಾದ್ಯಂತ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶಾಸಕ ಡಾ.ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್.ಲೋಬೊ, ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ಸಂತೋಷ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Similar News