2ಬಿ ಮೀಸಲಾತಿ ರದ್ದು: ಕಾನೂನು ಹೋರಾಟ ನಡೆಸಲು ಮುಸ್ಲಿಮ್ ನಾಯಕರ ನಿರ್ಧಾರ

Update: 2023-03-25 16:10 GMT

ಬೆಂಗಳೂರು, ಮಾ.25: ರಾಜ್ಯ ಸರಕಾರವು ಮುಸ್ಲಿಮರಿಗೆ ಹಿಂದುಳಿದ ವರ್ಗಗಳ 2ಬಿ ಅಡಿಯಲ್ಲಿ ನೀಡುತ್ತಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿರುವುದನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲು ಮುಸ್ಲಿಮ್ ನಾಯಕರು ನಿರ್ಧರಿಸಿದ್ದಾರೆ.

ಶನಿವಾರ ನಗರದಲ್ಲಿ ರಾಜ್ಯಸಭೆಯ ಮಾಜಿ ಉಪ ಸಭಾಪತಿ ಡಾ.ಕೆ.ರಹ್ಮಾನ್ ಖಾನ್ ಅಧ್ಯಕ್ಷತೆಯಲ್ಲಿ ನಡೆದ ಮುಸ್ಲಿಮ್ ಸಮುದಾಯದ ನಾಯಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೆಹ್ರೋಝ್ ಖಾನ್ ತಿಳಿಸಿದರು.

ಈ ಸಂಬಂಧ ‘ವಾರ್ತಾ ಭಾರತಿ’ಯೊಂದಿಗೆ ಮಾತನಾಡಿದ ಅವರು, ಸಂವಿಧಾನ ಹಾಗೂ ಮುಸ್ಲಿಮ್ ವಿರೋಧಿ ನೀತಿ ಅನುಸರಿಸಿರುವ ರಾಜ್ಯ ಬಿಜೆಪಿ ಸರಕಾರದ ನಡೆಯನ್ನು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ನಾಯಕರು ಒಕ್ಕೊರಲಿನಿಂದ ತೀವ್ರವಾಗಿ ಖಂಡಿಸಿದ್ದಾರೆ ಎಂದರು.

ಕಾನೂನು ಹೋರಾಟದ ಬಗ್ಗೆ ಪ್ರೊ.ರವಿವರ್ಮಕುಮಾರ್ ಅವರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲು ನಿರ್ಧರಿಸಲಾಗಿದೆ. ಅದಕ್ಕೂ ಮುನ್ನ ಉಲಮಾಗಳ ಜೊತೆಗೂ ನಾಯಕರು ಸಮಾಲೋಚನೆ ನಡೆಸಲಿದ್ದಾರೆ. ರವಿವಾರ ಮತ್ತೊಂದು ಸುತ್ತಿನ ಸಭೆಯನ್ನು ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ಮೆಹ್ರೋಝ್ ಖಾನ್ ತಿಳಿಸಿದರು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಅಬ್ದುಲ್ ಜಬ್ಬಾರ್, ಸಲೀಮ್ ಅಹ್ಮದ್, ಶಾಸಕರಾದ ಝಮೀರ್ ಅಹ್ಮದ್ ಖಾನ್, ರಿಝ್ವಾನ್ ಅರ್ಶದ್, ಎನ್.ಎ.ಹಾರಿಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್, ಜಿ.ಎ.ಬಾವ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ವೈ.ಸಯೀದ್ ಅಹ್ಮದ್, ಮಾಜಿ ಶಾಸಕ ಶಫಿ ಅಹ್ಮದ್ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ: ಖಾದರ್, ರೈ ಸೇರಿದಂತೆ ದ.ಕ ಜಿಲ್ಲೆಯ 5 ಅಭ್ಯರ್ಥಿಗಳ ಹೆಸರು ಘೋಷಣೆ

Similar News