ಪಕ್ಷಿಯೊಂದಿಗೆ ವ್ಯಕ್ತಿಯ ಸ್ನೇಹ ಆತನ ವಿರುದ್ಧ ಪ್ರಕರಣದಲ್ಲಿ ಅಂತ್ಯ!

Update: 2023-03-26 12:30 GMT

ಅಮೇಥಿ.ಮಾ.26: ಕಳೆದ ವರ್ಷದ ಫೆಬ್ರವರಿಯಲ್ಲಿ ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಮಂಧ್ಕಾ ಗ್ರಾಮದ ನಿವಾಸಿ ಮುಹಮ್ಮದ್ ಆರಿಫ್(35) ಗಾಯಗೊಂಡಿದ್ದ ಸಾರಸ್ ಕ್ರೇನ್ (ಒಂದು ಜಾತಿಯ ಕೊಕ್ಕರೆ) ಅನ್ನು ಮನೆಗೆ ತಂದಿದ್ದರು. ಮುಂದಿನ 13 ತಿಂಗಳುಗಳ ಕಾಲ ಅವರು ಪಕ್ಷಿಯನ್ನು ಕಾಳಜಿಯಿಂದ ಮತ್ತು ಅಷ್ಟೇ ಪ್ರೀತಿಯಿಂದ ಸಾಕಿದ್ದರು. ತನ್ನ ವಿರುದ್ಧ ವನ್ಯಜೀವಿ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎನ್ನುವುದು ಅವರಿಗೆ ಶನಿವಾರ ಗೊತ್ತಾಗಿದೆ.

ವನ್ಯಜೀವಿ ಅಧಿಕಾರಿಗಳು ಕೊಕ್ಕರೆಯನ್ನು ಆರಿಫ್ ನಿವಾಸದಿಂದ ರಾಯಬರೇಲಿ ಅಭಯಾರಣ್ಯಕ್ಕೆ ಸಾಗಿಸಿದ್ದರು. ಆದರೆ ಮನುಷ್ಯರ ಪಾಲನೆಯಲ್ಲಿ ಮನೆಯಲ್ಲಿ ಬೆಳೆದಿದ್ದ ಪ್ರಾಣಿಗಳಿಗೆ ಅರಣ್ಯವು ಸೂಕ್ತವಾದ ವಾಸಸ್ಥಳವಲ್ಲ ಎನ್ನುವುದು ಅರಿವಿಗೆ ಬಂದ ನಂತರ ಕೊಕ್ಕರೆಯನ್ನು ಕಾನ್ಪುರ ಮೃಗಾಲಯಕ್ಕೆ ಸ್ಥಳಾಂತರಿಸಿದ್ದಾರೆ.
ಸಾಮಾನ್ಯವಾಗಿ ಜೌಗು ಪ್ರದೇಶಗಳಲ್ಲಿ ಕಂಡು ಬರುವ ಸಾರಸ್ ಕೊಕ್ಕರೆ ಉತ್ತರ ಪ್ರದೇಶದ ರಾಜ್ಯಪಕ್ಷಿಯಾಗಿದೆ ಮತ್ತು 1972ರ ವನ್ಯಜೀವಿ ರಕ್ಷಣೆ ಕಾಯ್ದೆಯ ಅನುಸೂಚಿ 3ರಡಿ ಸಂರಕ್ಷಿತವಾಗಿದೆ. ಸುಮಾರು 150 ಸೆಂ.ಮೀ.ಎತ್ತರ ಬೆಳೆಯುವ ಇದು ವಿಶ್ವದಲ್ಲಿ ಅತ್ಯಂತ ಎತ್ತರದ ಪಕ್ಷಿಯಾಗಿದೆ.

‘ಗಂಡು ಕೊಕ್ಕರೆ ಮುರಿದ ಕಾಲಿನೊಂದಿಗೆ ಹೊಲದಲ್ಲಿ ಬಿದ್ದುಕೊಂಡಿತ್ತು. ನಾನು ಅದನ್ನು ಮನೆಗೆ ತಂದು ಅರಿಷಿಣ ಮತ್ತು ಸಾಸಿವೆ ಎಣ್ಣೆಯ ಪೇಸ್ಟನ್ನು ಗಾಯಕ್ಕೆ ಹಚ್ಚಿ,ಆಧಾರಕ್ಕಾಗಿ ಕಾಲಿಗೆ ಕೋಲೊಂದನ್ನು ಕಟ್ಟಿದ್ದೆ. ಕೋಳಿಗಳಿಗೂ ನಾವು ಹೀಗೆಯೇ ಮಾಡುತ್ತೇವೆ ’ಎಂದು ಆರಿಫ್ ಹೇಳಿದರು.

ತಾನೆಂದೂ ಅದನ್ನು ಬಂಧನದಲ್ಲಿ ಇಟ್ಟಿರಲಿಲ್ಲ. ಕೆಲವೇ ವಾರಗಳಲ್ಲಿ ಅದು ಚೇತರಿಸಿಕೊಂಡು ಹಾರತೊಡಗಿತ್ತು, ಅದು ದಿನವಿಡೀ ಮನೆಯ ಹೊರಗೆ ಅಂಗಳದಲ್ಲಿ ಇರುತ್ತಿತ್ತು,ಅದು ಎಂದಿಗೂ ಕಾಡಿಗೆ ವಾಪಸಾಗಿರಲಿಲ್ಲ ಎಂದರು.

ಆರಿಫ್ರನ್ನು ತುಂಬ ಹಚ್ಚಿಕೊಂಡಿದ್ದ ಕೊಕ್ಕರೆ ಅವರು ಬೈಕ್ನಲ್ಲಿ ಸುತ್ತಾಡಲು ತೆರಳಿದರೆ ಅವರನ್ನು ಹಿಂಬಾಲಿಸುತ್ತಿತ್ತು. ತನಗೆ ಬೇಕಾದಾಗ ಕಾಡಿಗೆ ತೆರಳುತ್ತಿದ್ದ ಅದು ಸಾಯಂಕಾಲ ಮನೆಗೆ ಮರಳುತ್ತಿತ್ತು ಮತ್ತು ಆರಿಫ್ ಜೊತೆಯಲ್ಲಿಯೇ ಆಹಾರ ಸೇವಿಸುತ್ತಿತ್ತು.

ಮಾ.9ರಂದು ಆರಿಫ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಎ.2ರಂದು ಕಚೇರಿಗೆ ಹಾಜರಾಗಿ ಹೇಳಿಕೆಯನ್ನು ಸಲ್ಲಿಸುವಂತೆ ಅವರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.
 ಕೊಕ್ಕರೆಯೊಂದಿಗಿನ ಸ್ನೇಹ ಆರಿಫ್ಗೆ ಖ್ಯಾತಿಯನ್ನೂ ತಂದಿದೆ. ಯಾರೋ ವೀಡಿಯೊವೊಂದನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿದ್ದರು. ಆಗಿನಿಂದ ಪತ್ರಕರ್ತರು,ಸ್ಥಳೀಯರು ಮತ್ತು ಇತರರ ದಂಡೇ ಆರಿಫ್ ಮನೆಗೆ ಭೇಟಿ ನೀಡುತ್ತಿತ್ತು. ಆರಿಫ್ ಮತ್ತು ಕೊಕ್ಕರೆ ಸ್ಥಳೀಯ ಸೆಲೆಬ್ರಿಟಿಗಳಾಗಿಬಿಟ್ಟಿದ್ದರು. ಮಾ.5ರಂದು ಮಾಜಿ ಉಪಮುಖ್ಯಮಂತ್ರಿ ಅಖಿಲೇಶ ಯಾದವ ಕೂಡ ಆರಿಫ್ ಮನೆಗೆ ಭೇಟಿ ನೀಡಿದ್ದರು.

Similar News