‘ರಂಗ್‌ ದೇ ಬರ್ಸಾ’ ಕಾರ್ಯಕ್ರಮಕ್ಕೆ ನುಗ್ಗಿ ಸಂಘಪರಿವಾರ ಕಾರ್ಯಕರ್ತರಿಂದ ದಾಂಧಲೆ: 6 ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2023-03-26 14:17 GMT

ಮಂಗಳೂರು, ಮಾ.26: ನಗರದ ಮರೋಳಿಯ ಮೈದಾನವೊಂದರ ತೆರೆದ ವೇದಿಕೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದಕ್ಕೆ ಬಜರಂಗದಳ ಕಾರ್ಯಕರ್ತರು ನುಗ್ಗಿ ದಾಂಧಲೆ ನಡೆಸಿದ ಘಟನೆ  ರವಿವಾರ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಗಣೇಶ್ ಅತ್ತಾವರ, ಜೈ ಪ್ರಶಾಂತ್, ಬಾಲಚಂದ್ರ, ಅಕ್ಷಯ್, ಚಿರಾಗ್, ಮಿಥುನ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತೆರೆದ ವೇದಿಕೆಯಲ್ಲಿ ‘ರಂಗ್ ದೆ ಬರ್ಸಾ’ ಎಂಬ ಹೆಸರಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಧ್ಯಾಹ್ನ 2ರಿಂದ ರಾತ್ರಿ 7ರವರೆಗೆ ಕಾರ್ಯಕ್ರಮ ನಡೆಸಲು ಸಮಯ ನಿಗದಿಪಡಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಸಂಘಪರಿವಾರದ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಕಾರ್ಯಕ್ರಮ ಆಯೋಜಕರನ್ನು ತರಾಟೆಗೆ ತೆಗೆದುಕೊಂಡು ಬಳಿಕ ಬ್ಯಾನರ್‌ಗಳನ್ನು ಹರಿದು ಹಾಕಿದರಲ್ಲದೆ ವೇದಿಕೆಯಲ್ಲಿದ್ದ ಇತರ ಕೆಲವು ವಸ್ತುಗಳಿಗೂ ಹಾನಿಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಕಾರ್ಯಕರ್ತರು ಮತ್ತು ಆಯೋಜಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ.

ಈ ಕಾರ್ಯಕ್ರಮದ ‘ಡಿಜೆ ಪಾರ್ಟಿ’ ಜೊತೆಗೆ ಯುವಕ ಯುವತಿಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸುತ್ತಿದ್ದರು ಎನ್ನಲಾಗಿದೆ. ಇದನ್ನು ಆಕ್ಷೇಪಿಸಿದ ಸಂಘಪರಿವಾರದ ಕಾರ್ಯಕರ್ತರು ದಾಂಧಲೆ ನಡೆಸಿ ಕಾನೂನನ್ನು ಕೈಗೆತ್ತಿಕೊಂಡರು ಎಂದು ಸಾರ್ವಜನಿಕರು ದೂರಿದ್ದಾರೆ. ದಾಂಧಲೆ ನಡೆಸುತ್ತಿರುವಾಗಲೇ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ 6 ಮಂದಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ತಿಳಿಸಿದ್ದಾರೆ. 

Similar News