ಸ್ವಾಭಿಮಾನದ ಬದುಕಿಗಾಗಿ ಸ್ವ ಉದ್ಯೋಗ ಸಹಕಾರಿ: ಸಚಿವ ಎಸ್.ಅಂಗಾರ

ಮತ್ಸ್ಯವಾಹಿನಿ ತ್ರಿಚಕ್ರ ವಾಹನಗಳ ಲೋಕಾರ್ಪಣೆ

Update: 2023-03-26 16:44 GMT

ಸುಳ್ಯ: ಮೀನುಗಾರಿಕಾ ಕ್ಷೇತ್ರದಲ್ಲಿ ಸ್ವ ಉದ್ಯೋಗವನ್ನು ಹೆಚ್ಚಿಸಿ ಜನರಿಗೆ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ಮತ್ಸ್ಯವಾಹಿನಿ ತ್ರಿಚಕ್ರ ವಾಹನಗಳನ್ನು ನೀಡಲಾಗಿದೆ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ.

ಕೇಂದ್ರ ಸರಕಾರ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ’ಸ್ವಾವಲಂಬಿ ಬದುಕಿಗಾಗಿ ಸ್ವ ಉದ್ಯೋಗ’ – ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಮತ್ಸ್ಯವಾಹಿನಿ ತ್ರಿಚಕ್ರ ವಾಹನಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಮೀನುಗಾರಿಕಾ ಕ್ಷೇತ್ರದಲ್ಲಿ ಸ್ವ ಉದ್ಯೋಗ ನೀಡುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಉತ್ಪಾದನೆ ಹೆಚ್ಚಿಸಬೇಕು, ಅದಕ್ಕೆ ಉತ್ತಮ ಮಾರುಕಟ್ಟೆ ಹಾಗು ಜನರಿಗೆ ತಾಜಾ ಮೀನು ಕೂಡ ದೊರೆಯಬೇಕು ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂಬ ನೆಲೆಯಲ್ಲಿ ಯೋಜನೆ ರೂಪಿಸಲಾಗಿದೆ. ಸ್ವಾಭಿಮಾನದ ಬದುಕಿಗಾಗಿ ಜನರು ಸ್ವ ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮೀನುಗಾರಿಕಾ ಇಲಾಖೆಯ ನಿರ್ದೇಶಕರಾದ ರಾಮಾಚಾರ್ಯ ಪುರಾಣಿಕ್ ಮಾತನಾಡಿ ‘ಎಲ್ಲಾ ಗ್ರಾಮಗಳಿಗೆ ತಾಜಾ ಮೀನುಗಳನ್ನು ತಲುಪಿಸಬೇಕೆಂಬ ಉದ್ದೇಶದಿಂದ ಮತ್ಸ್ಯವಾಹಿನಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರಥಮ ಹಂತದಲ್ಲಿ 300 ತ್ರಿಚಕ್ರ ವಾಹನವನ್ನು ಮಂಜೂರಾಗಿದೆ ಎಂದರು.

ರಾಜ್ಯದಲ್ಲಿ 60 ಕೋಟಿ ಮೀನಿನ ಮರಿಗಳ ಬೇಡಿಕೆ ಇದೆ, ಈಗ 40 ಕೋಟಿ ಮೀನುಮರಿಗಳ ಉತ್ಪಾದನೆಯಾ ಗುತ್ತಿದೆ. ಅದೇ ರೀತಿ 2020-21ರಲ್ಲಿ 6 ಲಕ್ಷ ಟನ್ ಮೀನು ಉತ್ಪಾದನೆ ಇತ್ತು 2021-22ರಲ್ಲಿ 10 ಲಕ್ಷ ಟನ್‍ಗೆ ಏರಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ ಮಾತನಾಡಿ’ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಮೀನುಗಾರಿಕಾ ಇಲಾಖೆಯನ್ನು ಹೇಗೆ ಮುನ್ನಡೆಸಬಹುದು ಎಂಬುದನ್ನು ಸಚಿವ ಅಂಗಾರ ತೋರಿಸಿದ್ದಾರೆ. ಟೀಕೆ ಮಾಡಿದವರನ್ನೂ ಮೂಗಿನ ಮೇಲೆ ಕೈಯಿಡುವಂತೆ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ ಕಂದಡ್ಕ, ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಆಂಜನಪ್ಪ, ಮೀನುಗಾರಿಕಾ ನಿರ್ದೇಶನಲಾಯದ ಅಪರ ನಿರ್ದೇಶಕರಾದ ತಿಪ್ಪೇಸ್ವಾಮಿ, ದಿನೇಶ್ ಕುಮಾರ್, ಮೀನುಗಾರಿಕಾ ಜಂಟಿ ನಿರ್ದೇಶಕರಾದ ಹರೀಶ್ ಕುಮಾರ್, ಕರ್ನಾಟಕ. ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಗಣೇಶ್, ಮೀನುಗಾರಿಕಾ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಮಲ್ಲಿಕಾರ್ಜುನ, ಸುಳ್ಯ ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರ್ ಶೇಠ್, ಸುಳ್ಯ ತಹಶಿಲ್ದಾರ್ ಮಂಜುನಾಥ್ ಉಪಸ್ಥಿತರಿದ್ದರು. ಮೀನುಗಾರಿಕಾ ನಿರ್ದೇಶನಲಾಯದ ಅಪರ ನಿರ್ದೇಶಕರಾದ ದಿನೇಶ್ ಕುಮಾರ್ ಸ್ವಾಗತಿಸಿ, ತಿಪ್ಪೇಸ್ವಾಮಿ ವಂದಿಸಿದರು. ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.

ಹೊಸ ಮೀನು ಪಾಲನಾ ಕೊಳ ನಿರ್ಮಾಣ, ಮತ್ಸ್ಯಾಶ್ರಮ ಯೋಜನೆ ಸೇರಿ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.

Similar News