ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ಹೈಕೋರ್ಟ್‌: ಶಾಸಕರಿಗೆ ಬಂಧನ ಭೀತಿ

Update: 2023-03-27 13:28 GMT

ಬೆಂಗಳೂರು, ಮಾ.27: ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಇದರಿಂದ, ವಿರೂಪಾಕ್ಷಪ್ಪಗೆ ಮತ್ತೆ ಬಂಧನ ಭೀತಿ ಎದುರಾಗಿದೆ. 

ನಿರೀಕ್ಷಣಾ ಜಾಮೀನು ಕೋರಿ ಮಾಡಾಳ್ ವಿರೂಪಾಕ್ಷಪ್ಪ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠವು ಸೋಮವಾರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಅಂತಿಮ ಆದೇಶ ಹೊರಡಿಸಿದೆ. ಈ ಹಿಂದೆ ನ್ಯಾಯಪೀಠವು ಅರ್ಜಿದಾರರ ಮತ್ತು ಪ್ರತಿವಾದಿಗಳ ಪರ ವಕೀಲರ ವಾದವನ್ನು ಆಲಿಸಿ, ಅಂತಿಮ ಆದೇಶವನ್ನು ಕಾಯ್ದಿರಿಸಿತ್ತು. 

ತಮ್ಮ ವಿರುದ್ಧ ಕಾನೂನು ಬಾಹಿರವಾಗಿ ಮತ್ತು ಕಿರುಕುಳ ಕೊಡುವ ದುರುದ್ದೇಶದಿಂದ ಎಫ್‍ಐಆರ್ ದಾಖಲು ಮಾಡಲಾಗಿದೆ. ನಾನು ಲಂಚವನ್ನು ಕೇಳಿಯೂ ಇಲ್ಲ ಮತ್ತು ಪಡೆದೂ ಇಲ್ಲ. ಪ್ರಕರಣದಲ್ಲಿ ನನ್ನನ್ನು ಮೊದಲ ಆರೋಪಿಯನ್ನಾಗಿ ಹೆಸರಿಸಲಾಗಿದ್ದು, ವಿಚಾರಣೆ ವೇಳೆ ಪೊಲೀಸರು ನನ್ನನ್ನು ಬಂಧಿಸುವ ಭೀತಿ ಇದೆ. ಆದುದರಿಂದ, ನನಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಮಾಡಾಳ್ ವಿರೂಪಾಕ್ಷಪ್ಪ ಅರ್ಜಿಯಲ್ಲಿ ಮನವಿ ಮಾಡಿದ್ದರು. 

ಪ್ರಕರಣದ ಹಿನ್ನೆಲೆ?: ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರರೂ ಆದ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತಕ್ಕೆ (ಕೆಎಸ್‍ಡಿಎಲ್) ಕಚ್ಚಾ ತೈಲ ಪೂರೈಸುವ ಗುತ್ತಿಗೆಯ  ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಈ ನಡುವೆ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಮೊದಲ ಆರೋಪಿಯನ್ನಾಗಿಸಿ ಎಫ್‍ಐಆರ್ ದಾಖಲಿಸಿದ್ದರು. ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 7 (ಎ) ಮತ್ತು (ಬಿ), 7 ಎ, 8, 9 ಮತ್ತು 10ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.  

Similar News