ನಾವೆಲ್ಲರೂ ಹುಟ್ಟಿದ್ದು, ಇರುವುದು ಹಿಂದೂ ರಾಷ್ಟ್ರದಲ್ಲಿ: ಮಿಥುನ್ ರೈ ವಿವಾದಾತ್ಮಕ ಹೇಳಿಕೆ ವೈರಲ್

Update: 2023-03-27 12:54 GMT

ಮಂಗಳೂರು , ಮಾ. 27 : " ನಾವೆಲ್ಲರೂ ಹುಟ್ಟಿದ್ದು, ನಾವೆಲ್ಲರೂ ಇರುವುದು ಹಿಂದೂ ರಾಷ್ಟ್ರದಲ್ಲಿ, ಅದನ್ನು ಎದೆತಟ್ಟಿ ಹೇಳ್ತೇವೆ ನಾವು " ಎಂದು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಹೇಳಿರುವ ವೀಡಿಯೊವೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. 

ಟಿವಿ ವಾಹಿನಿಯೊಂದರ ಚುನಾವಣಾ ಚರ್ಚಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಿಥುನ್ ರೈ  " ನಾವೆಲ್ಲರೂ ಹುಟ್ಟಿದ್ದು, ನಾವೆಲ್ಲರೂ ಇರುವುದು ಹಿಂದೂ ರಾಷ್ಟ್ರದಲ್ಲಿ, ಅದನ್ನು ಎದೆತಟ್ಟಿ ಹೇಳ್ತೇನೆ ನಾನು " ಎಂದು ಹೇಳಿರುವುದು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 

ಕಾಂಗ್ರೆಸ್ ಪಕ್ಷದ ವಿಧಾನಸಭಾ ಅಭ್ಯರ್ಥಿಯಾಗಿ ಈ ಹಿಂದೆ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಭಾರತ ಜಾತ್ಯತೀತ ರಾಷ್ಟ್ರವೆಂಬ ಸಾಮಾನ್ಯ ಜ್ಞಾನ ಗೊತ್ತಿಲ್ಲದಂತೆ ಹಾಗು ಸಂಘ ಪರಿವಾರದ ಮುಖಂಡರು ಮಾತಾಡಿದಂತೆ ಮಿಥುನ್ ರೈ ಮಾತಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತವಾಗಿದೆ. 

ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂದು ಸಂಘ ಪರಿವಾರ, ಹಿಂದುತ್ವ ಸಂಘಟನೆಗಳು ಬಯಸುತ್ತವೆ. ಈಗ ನೋಡಿದರೆ ಕಾಂಗ್ರೆಸ್ ಅಭ್ಯರ್ಥಿಯಾದವರೇ ಜಾತ್ಯತೀತ ತತ್ವಕ್ಕೆ, ಸಿದ್ಧಾಂತಕ್ಕೆ ವಿರುದ್ಧವಾಗಿ ಭಾರತ ಹಿಂದೂ ರಾಷ್ಟ್ರ ಎಂಬಂತೆ ಬಿಂಬಿಸಿ ಮಾತಾಡುತ್ತಿದ್ದಾರೆ. ಇವರು ಜಾತ್ಯತೀತ ಕಾಂಗ್ರೆಸ್ ನ ತತ್ವ ಸಿದ್ಧಾಂತವನ್ನೇ ತಿಳಿದುಕೊಂಡಿಲ್ಲ ಎಂದು ಮಿಥುನ್ ರೈ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. 

"ಇಂತಹ ಹೇಳಿಕೆ ನೀಡುವ ಮೂಲಕ ಮಿಥುನ್ ರೈ ಮೃದು ಹಿಂದುತ್ವ ನೀತಿ ಅನುಸರಿಸುತ್ತಿದ್ದಾರೆ. ಅಲ್ಲಿ ರಾಹುಲ್ ಗಾಂಧಿ ಸಂಘ ಪರಿವಾರದ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ಅವರ ಪಕ್ಷದ ಸ್ಥಳೀಯ ನಾಯಕರು ಸಂಘ ಪರಿವಾರದ ಬೆಂಬಲಿಗರನ್ನು ಓಲೈಸುವ ರಾಜಕಾರಣ ಮಾಡುತ್ತಿದ್ದಾರೆ " ಎಂದು ಫೇಸ್ ಬುಕ್ ಹಾಗು ವಾಟ್ಸ್ ಆಪ್ ಗಳಲ್ಲಿ ಮಿಥುನ್ ರೈ ವಿರುದ್ಧ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಿಥುನ್ ರೈ ಹೇಳಿದ್ದೇನು? 

ಚರ್ಚಾ ಕಾರ್ಯಕ್ರಮದಲ್ಲಿ ಮಿಥುನ್ ರೈ ಮಾತನಾಡುತ್ತಾ 'ನಾವೆಲ್ಲರೂ ಹುಟ್ಟಿದ್ದು, ನಾವೆಲ್ಲರೂ ಇರುವುದು ಹಿಂದೂ ರಾಷ್ಟ್ರದಲ್ಲಿ, ಅದನ್ನು ಎದೆತಟ್ಟಿ ಹೇಳ್ತೇವೆ ನಾವು. ಆದರೆ ನನ್ನ ಹಿಂದುತ್ವ ಮತ್ತು ಅನ್ಯ ಪಕ್ಷದವರ ಹಿಂದುತ್ವಕ್ಕೆ ವ್ಯತ್ಯಾಸ ಇದೆ. ''ನನ್ನ ಹಿಂದುತ್ವ ಎದೆ ತಟ್ಟಿ ಹೇಳು ನೀ ಹಿಂದು, ಅನ್ಯ ಸಮುದಾಯದವರ ಮನಸ್ಸನ್ನು ಗೆದ್ದು  ಹೇಳು ನೀ ಹಿಂದು'' ನನ್ನ ಕೇಸರಿಯಲ್ಲಿ ಬೇರೆ ಸಮುದಾಯದವರಿಗೆ ರಕ್ಷಣೆ ಸಿಗಬೇಕು. ನನ್ನ ಕೇಸರಿಯಿಂದ ಬೇರೆ ಸಮುದಾಯದವರಿಗೆ ಭಯದ ವಾತಾವರಣ ಸೃಷ್ಟಿಯಾಗಬಾರದು' ಎಂದು ಹೇಳಿದ್ದಾರೆ. 

ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ಪೇಜಾವರ ಶ್ರೀಗಳ ಮಾಜಿ ಕಾರು ಚಾಲಕ ಆರಿಫ್ ಭಾಗವಹಿಸಿದ್ದರು.

Similar News