ದೇಶದ ಕಾನೂನಿನ ಮುಂದೆ ಎಲ್ಲರೂ ಸಮಾನರು: ಕೇಂದ್ರ ಸಚಿವೆ ಸ್ಮೃತಿ ಇರಾನಿ

Update: 2023-03-27 15:08 GMT

ಬೆಂಗಳೂರು, ಮಾ.27: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿರವರ ಸಂಸದ ಸ್ಥಾನದ ಅನರ್ಹತೆ ನ್ಯಾಯಾಲಯದ ಕ್ರಮವೇ ಹೊರತು, ಬಿಜೆಪಿ ಪಕ್ಷದ ಕ್ರಮವಲ್ಲ, ಈ ದೇಶದ ಜನಸಾಮಾನ್ಯರಿಗೆ ಅನ್ವಯವಾಗುವ ಕಾನೂನು ರಾಹುಲ್ ಗಾಂಧಿಗೂ ಅನ್ವಯವಾಗುತ್ತದೆ’ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಸ್ಮೃತಿ ಇರಾನಿ ತಿಳಿಸಿದರು.

ಸೋಮವಾರ ನಗರದ ಪಿಇಎಸ್ ಕಾಲೇಜಿನಲ್ಲಿ ಯುವ ಮತದಾರರು, ಕಾಲೇಜು ವಿದ್ಯಾರ್ಥಿಗಳೊಂದಿಗೆ, ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ‘ಯುವ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿಯ ವೈಯುಕ್ತಿಕ ನಿಂದನೆಯಾಗಿದ್ದರೆ ಕೋರ್ಟ್ ಕ್ಷಮಿಸುವ ಪ್ರಶ್ನೆ ಉದ್ಭವಿಸಬಹುದು. ಆದರೆ, ಒಂದು ಸಮುದಾಯಕ್ಕೆ ಮಾಡುವ ಅವಮಾನ ಹಾಗೂ ಕಾನೂನಿನ ಮುಂದೆ ಕ್ಷಮೆ ಕೇಳುವ ಔದರ್ಯತೆ ಇಲ್ಲದ ವ್ಯಕ್ತಿಗೆ ಸಾಕ್ಷಿ, ಆಧಾರಗಳ ಮೇಲೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ ಎಂದು ಹೇಳಿದರು.

ರಾಹುಲ್ ಗಾಂಧಿ, ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸರಿ ಇಲ್ಲ ಎಂದು ಸಿಕ್ಕ ಪ್ರತಿಯೊಂದು ವೇದಿಕೆಯಲ್ಲಿ ತಿಳಿಸುತ್ತಾರೆ. ಆದರೆ, ಅವರ ಯಾವುದಾದರೂ ಕಾರ್ಯಕ್ರಮಕ್ಕೆ, ಸಂವಾದಕ್ಕೆ ಇದುವರೆಗೆ ಮೋದಿ ಸರಕಾರ ತಡೆಯೊಡ್ಡಿದೆಯೇ? ವಿದೇಶದ ನೆಲದಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಅವಮಾನಕರ ಮಾತಾಡುವುದು ಎಷ್ಟೊಂದು ಸರಿ? ಎಂದು ಸ್ಮೃತಿ ಇರಾನಿ ಪ್ರಶ್ನಿಸಿದರು.

ಮಹಿಳಾ ಸುರಕ್ಷತೆಗೆಂದು ಮೀಸಲಾಗಿದ್ದ ನಿರ್ಭಯಾ ನಿಧಿಯಲ್ಲಿನ ಮೊತ್ತವನ್ನು ಕಾಂಗ್ರೆಸ್ ಸರಕಾರ ಮೊದಲ ಎರಡು ವರ್ಷಗಳ ಕಾಲ ಉಪಯೋಗಿಸಿಯೆ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ 9 ಸಾವಿರ ಕೋಟಿ ರೂ.ಗಳನ್ನು ಇಡೀ ದೇಶಾದ್ಯಂತ ವಿನಿಯೋಗಿಸಿದೆ. ದೇಶದ ಪ್ರತಿ ಜಿಲ್ಲೆಯಲ್ಲಿಯೂ ಮಾನವ ಕಳ್ಳ ಸಾಗಣೆ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಪ್ರತಿ ಜಿಲ್ಲೆಯಲ್ಲಿಯೂ ಕಾನೂನು, ವೈದ್ಯಕೀಯ ಸೇವೆಯೊಂದಿಗೆ ಇತರ ಸೌಲಭ್ಯಗಳನ್ನು ಒಂದೇ ವೇದಿಕೆ ಅಡಿ ಒದಗಿಸುವ ಯೂನಿಟ್, ಮಹಿಳೆಯರಿಗೆ ಪ್ರತಿ ಪೊಲೀಸ್ ಠಾಣೆ ಯಲ್ಲಿ ಪ್ರತ್ಯೇಕ ಸಹಾಯ ಕೇಂದ್ರ, ಮಹಿಳೆಯರ ಮತ್ತು ಮಕ್ಕಳ ಕಾನೂನು ಸೇವೆಗೆಂದು ದೇಶಾದ್ಯಂತ 1,063ಫಾಸ್ಟ್ ಟ್ರಾಕ್ ಕೋರ್ಟ್‍ಗಳನ್ನು ಸ್ಥಾಪಿಸಲಾಗಿದ್ದು, ಉಚಿತ ಸಹಾಯವಾಣಿ ಆರಂಭಿಸಲಾಗಿದೆ ಎಂದು ಸ್ಮøತಿ ಇರಾನಿ ವಿವರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ, ಪಿಇಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಎಂ.ಆರ್.ದೊರೆಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Similar News