ಕುಂದಾಪುರದಲ್ಲಿ ’ರೈತರ ತರಕಾರಿ ಮಾರುಕಟ್ಟೆ’ ಉದ್ಘಾಟನೆ

Update: 2023-03-27 15:18 GMT

ಕುಂದಾಪುರ, ಮಾ.27: ಬೆಳೆಯುತ್ತಿರುವ ಕುಂದಾಪುರ ನಗರದಲ್ಲಿ ’ರೈತರ ತರಕಾರಿ ಮಾರುಕಟ್ಟೆ’ ನಿರ್ಮಾಣದ ಮೂಲಕ ರೈತರು ತಾವು ಬೆಳೆದ ಬೆಳೆಯನ್ನು ಯಾವುದೇ ಮದ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಸಹಕಾರಿಯಾಗಿದೆ. ಮಾತ್ರವಲ್ಲದೆ ಗ್ರಾಹಕರಿಗೂ ಕೂಡ ಒಂದೇ ಸೂರಿನಡಿಯಲ್ಲಿ ಗ್ರಾಮೀಣ ಭಾಗದಲ್ಲಿ ಬೆಳೆದ ತರಕಾರಿ ಹಾಗೂ ಹಣ್ಣು-ಹಂಪಲು ಸಿಗಲಿದೆ ಎಂದು ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಹೇಳಿದ್ದಾರೆ.

ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ (ಟಿಎಪಿಸಿಎಂಎಸ್) ವತಿಯಿಂದ ಕುಂದಾಪುರದ ಸಂಗಮ್ ಸರ್ಕಲ್, ಆನಗಳ್ಳಿ ರಸ್ತೆ ಬಳಿ ನಿರ್ಮಿಸಿದ ’ರೈತರ ತರಕಾರಿ ಮಾರುಕಟ್ಟೆ’ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕುಂದಾಪುರ ಟಿಎಪಿಸಿಎಂಎಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿ, ರೈತರ ಕೃಷಿಗೆ ಪೂರಕವಾದ ಸಹಕಾರ ನೀಡುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘವು 60 ವರ್ಷಗಳನ್ನು ಪೂರೈಸುತ್ತಿದ್ದು, ಆಡಳಿತ ಮಂಡಳಿಯ ಒಕ್ಕೋರಲ ತೀರ್ಮಾನದಂತೆ ಸಂಗಮ್ ಜಂಕ್ಷನ್‌ನಲ್ಲಿರುವ ಸ್ವಂತ ನಿವೇಶದಲ್ಲಿ ರೈತರ ತರಕಾರಿ ಮಾರುಕಟ್ಟೆ ನಿರ್ಮಿಸಿದೆ. ಇದರಿಂದಾಗಿ ಬೈಂದೂರು ಹಾಗೂ ಕುಂದಾ ಪುರ ಭಾಗದ ರೈತರು ಬೆಳೆದ ಬೆಳೆಗಳನ್ನು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಮಾರುಕಟ್ಟೆಗೆ ಆಗಮಿಸಿ ಮಾರಾಟ ಮಾಡಬಹುದು ಎಂದರು.

ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ವಿ.ಅರುಣ್ ಕುಮಾರ್ ಶುಭಹಾರೈಸಿದರು. ಟಿಎಪಿಸಿಎಂಎಸ್ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಮೊಳಹಳ್ಳಿ ಮಹೇಶ್ ಹೆಗ್ಡೆ, ಎಸ್.ರಾಜು ಪೂಜಾರಿ ಎಸ್, ಟಿಎಪಿಸಿಎಂಎಸ್ ನಿರ್ದೇಶಕ ಮಲ್ಯಾಡಿ ಮೋಹನದಾಸ ಶೆಟ್ಟಿ, ಕೆ.ಸುಧಾಕರ ಶೆಟ್ಟಿ ಬಾಂಡ್ಯ, ಆನಂದ ಬಿಲ್ಲವ ಉಪ್ಪಿನಕುದ್ರು, ಕೆ.ಭುಜಂಗ ಶೆಟ್ಟಿ ಕೆರಾಡಿ, ಕೆ.ಮೋಹನ ಪೂಜಾರಿ ಉಪ್ಪುಂದ, ಪ್ರಭಾಕರ ಶೆಟ್ಟಿ ಜಡ್ಕಲ್, ರವಿ ಗಾಣಿಗ ಆಜ್ರಿ, ಎಚ್.ದೀನಪಾಲ ಶೆಟ್ಟಿ ಮೊಳಹಳ್ಳಿ, ಎಚ್.ಚಂದ್ರಶೇಖರ್ ಶೆಟ್ಟಿ ಚಿತ್ತೂರು, ಎಸ್.ಜಯರಾಮ ಶೆಟ್ಟಿ ಬೆಳ್ವೆ, ಪುರಸಭಾ ಸದಸ್ಯ ಕೆ.ಜಿ.ನಿತ್ಯಾನಂದ, ಕುಂದಾಪುರ ವಿ.ಎಸ್.ಎಸ್. ಅಧ್ಯಕ್ಷ ಕೃಷ್ಣಮೂರ್ತಿ, ರೋಜರಿ ಸೊಸೈಟಿ ನಿರ್ದೇಶಕ ವಿನೋದ್ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.

ಟಿಎಪಿಸಿಎಂಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಶೋಭಾಕೃಷ್ಣ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.

Similar News