ಒಮ್ಮಿಂದೊಮ್ಮೆಲೆ ಉಕ್ಕೇರಿ ಹರಿಯುತ್ತಿರುವ ಜನಪ್ರೇಮ

Update: 2023-03-28 04:45 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಕೆಂಡದಂಥ ಬೇಸಿಗೆಯ ಬಿಸಿಲಿನ ಜೊತೆಗೆ ಕರ್ನಾಟಕದ ವಿಧಾನಸಭಾ ಚುನಾವಣೆಯೂ ಬಂದಿದೆ. ಸಾಮಾನ್ಯವಾಗಿ ಧಗೆಯಲ್ಲಿ ಎಸಿ ಬಂಗಲೆಗಳನ್ನು ಬಿಟ್ಟು ಹೊರಗೆ ಬಾರದ ರಾಜಕಾರಣಿಗಳು ಬಿಸಿಲಲ್ಲಿ ಬೀದಿಗೆ ಬಂದಿದ್ದಾರೆ. ಮತ್ತೆ ಐದು ವರ್ಷ ತಂಪು ಲೋಕದಲ್ಲಿ ವಿಶ್ರಮಿಸಲು ಈಗ ಬಯಲಿಗೆ ಬರುವುದು ಅನಿವಾರ್ಯವಾಗಿದೆ. ನೆರೆ ಬಂದಾಗ, ಬರ ಬಂದಾಗ ಕರ್ನಾಟಕದತ್ತ ಹೊರಳಿಯೂ ನೋಡದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತು ಅವರ ಅಚ್ಚುಮೆಚ್ಚಿನ ಗೃಹ ಸಚಿವ ಅಮಿತ್ ಶಾ ಅವರು ಒಂದೇ ತಿಂಗಳಲ್ಲಿ 3-4 ಸಲ ಕರ್ನಾಟಕಕ್ಕೆ ಬಂದು ಪೂರ್ತಿಯಾಗದ ಯೋಜನೆಗಳನ್ನು ಉದ್ಘಾಟಿಸುತ್ತಾ, ಅವುಗಳ ಜಾಹೀರಾತು ಕೊಡುತ್ತ ಸಂಭ್ರಮಿಸುತ್ತಿದ್ದಾರೆ. ಹೇಗಾದರೂ ಮಾಡಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ದಕ್ಷಿಣ ಭಾರತದಲ್ಲಿ ನೆಲೆಯೂರಲು ಆತುರರಾಗಿರುವ ಮೋದಿ, ಅಮಿತ್ ಶಾ ಮತ್ತು ಅವರ ನಾಗಪುರದ ಗುರುಗಳ ಮೇಲೆ ಭಾರ ಹಾಕಿ ಮತ್ತೆ ವಿಧಾನಸಭೆ ಪ್ರವೇಶಿಸುವ ಕನಸು ಕಾಣುತ್ತಿರುವ ಕರ್ನಾಟಕದ ಬಿಜೆಪಿ ನಾಯಕರು ನಿತ್ಯವೂ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್‌ರ ವರೆಗೆ ಯಾವ ಪ್ರಧಾನಿಯೂ ಮಾಡುವ ಕೆಲಸ ಬಿಟ್ಟು ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಹೋಗುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ, ನಮ್ಮ ಈಗಿನ ಪ್ರಧಾನ ಸೇವಕರು ಗ್ರಾಮ ಪಂಚಾಯತ್ ಚುನಾವಣೆಗೂ ಬಂದರೆ ಅಚ್ಚರಿ ಪಡಬೇಕಾಗಿಲ್ಲ. ವಾರಕ್ಕೊಮ್ಮೆ ಬರುತ್ತಾರೆ. ಹೇಳಿದ್ದನ್ನೇ ಹೇಳುತ್ತಾರೆ. ಶಿಲಾನ್ಯಾಸ ಮಾಡಿದಲ್ಲೇ ಮತ್ತೆ ಮಾಡುತ್ತಾರೆ. ಕಳೆದ ವಾರ ಮೋದಿಯವರು ಕರ್ನಾಟಕಕ್ಕೆ ಬಂದಾಗ ದಾವಣಗೆರೆಯ ಬಹಿರಂಗ ಸಭೆಯಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ತವರು ಭೂಮಿ ಕಲಬುರಗಿಯ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದಕ್ಕೆ ಸಂಭ್ರಮ ಪಟ್ಟರು, ಶುಭ ಸೂಚನೆ ಎಂದು ಹೇಳಿದರು. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಹೇಗೆ ಗೆಲುವು ಸಾಧಿಸಿತು ಎಂಬುದನ್ನು ಹೇಳಲಿಲ್ಲ. ವಾಸ್ತವವಾಗಿ ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿಗೆ ಬಹುಮತ ಇರಲಿಲ್ಲ. ಬೇರೆ ಜಿಲ್ಲೆಗಳ ವಿಧಾನ ಪರಿಷತ್ ಸದಸ್ಯರನ್ನು ಕಲಬುರಗಿಗೆ ತಂದು ಇಲ್ಲಿಯ ವಿಳಾಸ ನೀಡಿ ಅವರಿಂದ ಬಹುಮತ ಮಾಡಿಕೊಂಡರು. ಒಂದು ಮತದ ಅಂತರದಿಂದ ಬಿಜೆಪಿ ಗೆಲುವು ಸಾಧಿಸಿತು. ಆಪರೇಷನ್ ಕಮಲದ ಪ್ರವೀಣರಿಗೆ ಇಂಥ ಗೆಲುವಿನ ನೈತಿಕತೆ ಮುಖ್ಯವಾಗುವುದಿಲ್ಲ.

ಕರ್ನಾಟಕ ವಿಧಾನಸಭಾ ಚುನಾವಣೆಯ ಇನ್ನೊಂದು ವಿಶೇಷವೆಂದರೆ ಮೂರ್ತಿಗಳ ಅನಾವರಣ. ಇಷ್ಟು ದಿನ ನೆನಪಿಗೆ ಬಾರದ ಬಸವಣ್ಣನವರು, ಕೆಂಪೇಗೌಡರು, ಸಂಗೊಳ್ಳಿ ರಾಯಣ್ಣ ಮುಂತಾದ ಮಹಾಪುರುಷರ ಪ್ರತಿಮೆಗಳನ್ನು ಅನಾವರಣಗೊಳಿಸುತ್ತಾ, ನಾನಾ ಹೆಸರಿನ ಥೀಮ್ ಪಾರ್ಕ್‌ಗಳನ್ನು ಮಾಡುತ್ತಾ ಮಹಾಪುರುಷರನ್ನು ಜಾತಿಗೆ ಸೀಮಿತಗೊಳಿಸಿ ಆ ಸಮುದಾಯಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಏಳಿಗೆಗೆ ಏನನ್ನೂ ಮಾಡದೆ ಮೂರ್ತಿ ತೋರಿಸಿ ಮತ ಬಾಚಿಕೊಳ್ಳುವ ಹಂತಕ್ಕೆ ಕರ್ನಾಟಕದ ಚುನಾವಣೆ ಬಂದಿದೆ. ಈ ಮೂರ್ತಿಗಳ ಅನಾವರಣಕ್ಕಾಗಿ ಪ್ರಧಾನಿ, ಗೃಹಸಚಿವರು ದಿಲ್ಲಿಯಿಂದ ಇಲ್ಲಿಗೆ ವಿಶೇಷ ವಿಮಾನದಲ್ಲಿ ಬರುತ್ತಿದ್ದಾರೆ. ಕರ್ನಾಟಕದ ಜನಸಾಮಾನ್ಯರ ಬದುಕಿನ ಸ್ಥಿತಿ ಗತಿಗಳ ಬಗ್ಗೆ ಒಂದೇ ಒಂದು ಮಾತನ್ನೂ ಆಡದ ಇವರು ಮುಸ್ಲಿಮರ ಮೀಸಲನ್ನು ಕಿತ್ತುಕೊಂಡು ಲಿಂಗಾಯತರಿಗೆ, ಒಕ್ಕಲಿಗರಿಗೆ ಹಂಚಿದ್ದನ್ನು ಸಮರ್ಥಿಸಿಕೊಂಡು ಐತಿಹಾಸಿಕ ಕ್ರಮ ಎಂದು ಹೊಗಳುತ್ತಿದ್ದಾರೆ. ಅಮಿತ್ ಶಾ ಅವರು ಬೀದರ್‌ಜಿಲ್ಲೆಯ ಹುಲಸೂರ್ ತಾಲೂಕಿನ ಗೊರಟಾ(ಬಿ) ಗ್ರಾಮಕ್ಕೆ ಹೋಗಿ ಅಲ್ಲಿ ವಲ್ಲಭಭಾಯ್ ಪಟೇಲರ ಬೃಹತ್ ಪ್ರತಿಮೆಯನ್ನು ಅನಾವರಣಗೊಳಿಸಿ ರಜಾಕಾರರ ವಿರುದ್ಧ ಹೋರಾಡಿದ ಹುತಾತ್ಮರ ತ್ಯಾಗ, ಬಲಿದಾನವನ್ನು ತಮ್ಮ ಪಕ್ಷದ ವೋಟಿನ ರಾಜಕಾರಣಕ್ಕೆ ಬಳಸಿಕೊಳ್ಳಲು ಮುಂದಾದರು. ಐದು ವರ್ಷ ಸುಮ್ಮನಿದ್ದು ಒಮ್ಮಿಂದೊಮ್ಮೆಲೇ ಕಾಣಿಸಿಕೊಳ್ಳುತ್ತಿರುವ ಈ ಉದ್ಭವ ಮೂರ್ತಿಗಳ ಬಗ್ಗೆ ಕರ್ನಾಟಕದ ಜನ ಅಚ್ಚರಿಗೊಂಡಿದ್ದಾರೆ.

ಪ್ರಧಾನ ಮಂತ್ರಿಗಳು ಮತ್ತು ಗೃಹ ಮಂತ್ರಿಗಳು ಕರ್ನಾಟಕದ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬರಲು ಯಾರ ಆಕ್ಷೇಪವೂ ಇಲ್ಲ. ಪ್ರಧಾನಿಯಾಗಿರುವುದರಿಂದ ಮತ್ತು ಅಮಿತ್ ಶಾ ಗೃಹ ಮಂತ್ರಿಯಾಗಿರುವುದರಿಂದ ವಿಶೇಷ ವಿಮಾನ ಮತ್ತು ಭದ್ರತಾ ವ್ಯವಸ್ಥೆಯ ಸೌಕರ್ಯ ಪಡೆಯಲೂ ತಕರಾರಿಲ್ಲ.ಆದರೆ ಚುನಾವಣಾ ಪ್ರಚಾರಕ್ಕೆ ಬಂದವರು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯನವರನ್ನು ಭಾಷಣದುದ್ದಕ್ಕೂ ಬೈಯುವ ಬದಲಾಗಿ ತಮ್ಮ ಡಬಲ್ ಇಂಜಿನ್ ಸರಕಾರದ ಸಾಧನೆಗಳನ್ನು ಹೇಳಿಕೊಳ್ಳಬೇಕಾಗಿತ್ತು. ಕರ್ನಾಟಕದ ಬಿಜೆಪಿ ಸರಕಾರದಲ್ಲಿ ಲೋಕೋಪಯೋಗಿ ಇಲಾಖೆಯ ಒಂದು ಬಿಲ್ ಮಂಜೂರಾಗಬೇಕಾದರೆ ಶೇ. 40 ಕಮಿಶನ್ ಕೊಡಬೇಕಾಗುತ್ತದೆ ಎಂದು ಕರ್ನಾಟಕದ ಗುತ್ತಿಗೆದಾರರ ಸಂಘ ತಮಗೆ ಬರೆದ ಪತ್ರದ ಬಗ್ಗೆ ಬಹಿರಂಗವಾಗಿ ಸ್ಪಷ್ಟೀಕರಣ ನೀಡಿ ಈ ಬಗೆಗಿನ ಗೊಂದಲವನ್ನು ನಿವಾರಿಸಬೇಕಾಗಿತ್ತು. ಮಂತ್ರಿಗಳ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಸಂತಾಪ ಸೂಚಿಸಬೇಕಾಗಿತ್ತು. ಪಿಎಸ್ಸೈ ಇತ್ಯಾದಿ ಹಗರಣಗಳ ಬಗ್ಗೆ ಬಂದ ಆರೋಪಗಳಿಗೆ ಉತ್ತರಿಸಬೇಕಾಗಿತ್ತು. ಆರೋಪಗಳು ಸುಳ್ಳಾಗಿದ್ದರೆ ಸಾಬೀತು ಪಡಿಸುವಂತೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಗೆ ಸವಾಲು ಹಾಕಬೇಕಾಗಿತ್ತು. ಯಾಕೋ ಪ್ರಧಾನಿ ಮತ್ತು ಗೃಹ ಸಚಿವರು ಅಂತಹ ವಿಷಯ ಬಿಟ್ಟು ಏನೇನೋ ಮಾತಾಡಿದರು.

ಅಪೂರ್ಣ ಯೋಜನೆಗಳಿಗೆ ಚಾಲನೆ ನೀಡುವುದು ಸರಿಯಲ್ಲ ಎಂಬುದು ಪ್ರಧಾನ ಮಂತ್ರಿಗಳಿಗೆ ಗೊತ್ತಿಲ್ಲವೇ? ಉದಾಹರಣೆಗೆ ಕಳೆದ ನವೆಂಬರಿನಲ್ಲಿ ಪ್ರಧಾನಿ ಮೋದಿಯವರು ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಉದ್ಘಾಟಿಸಿದರು. ಆ ಟರ್ಮಿನಲ್‌ಗೆ ಅಂತರ್‌ರಾಷ್ಟ್ರೀಯ ವಿಮಾನಗಳು ಸ್ಥಳಾಂತರವಾಗುವುದಕ್ಕೆ ಕನಿಷ್ಠ ಎರಡು ವರ್ಷಗಳಾದರೂ ಬೇಕು. ಪ್ರಾದೇಶಿಕ ವಿಮಾನಗಳ ಕಾರ್ಯಾಚರಣೆಗೆ ಜೂನ್ ತಿಂಗಳ ವರೆಗೆ ಕಾಯಬೇಕು.ಇನ್ನು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಇನ್ನೂ ಪೂರ್ಣಗೊಳ್ಳದೆ ಅಲ್ಲಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಬೈಯಪ್ಪನಹಳ್ಳಿ-ವೈಟ್ ಫೀಲ್ಡ್ ಮಾರ್ಗ ಪೂರ್ಣಗೊಳ್ಳಲು ಮೂರು ವರ್ಷ ಬೇಕಾಗಬಹುದು. ಮೆಟ್ರೊ ರೈಲು ಸುರಕ್ಷತಾ ಆಯುಕ್ತರು ಈ ಮಾರ್ಗದಲ್ಲಿ 58 ಲೋಪಗಳನ್ನು ಪಟ್ಟಿ ಮಾಡಿದ್ದಾರೆ.ಇವುಗಳನ್ನೆಲ್ಲ ಕಡೆಗಣಿಸಿ ತರಾತುರಿಯಲ್ಲಿ ಉದ್ಘಾಟನೆ ಮಾಡುವ ಅವಸರವೇನಿತ್ತು. ಇಂಥ ಅಪೂರ್ಣ ಯೋಜನೆಗಳಿಗೆ ಚಾಲನೆ ನೀಡುವುದರಿಂದ ಜನರಿಗೆ ತೊಂದರೆ ಯಾಗುವುದಿಲ್ಲವೇ? ಇದು ಅಧಿಕಾರದ ದುರ್ಬಳಕೆಯಲ್ಲವೇ?

ಕರ್ನಾಟಕದ ಬಿಜೆಪಿ ಆಡಳಿತದ ಪ್ರಗತಿಯ ಸಾಧನೆಗಳ ಬಗ್ಗೆ ಜಾಹೀರಾತುಗಳು ನಿತ್ಯವೂ ಬರುತ್ತಲೇ ಇವೆ. ಆದರೆ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಕಡು ಬಡತನ ಮತ್ತು ಪೌಷ್ಟಿಕಾಂಶದ ಕೊರತೆಯಿಂದಾಗಿ ಸಾವಿರಾರು ಮಕ್ಕಳು ಬಳಲುತ್ತಿದ್ದಾರೆ. ಮುಖ್ಯಮಂತ್ರಿಯವರ ಹಾವೇರಿ ಜಿಲ್ಲೆ ಸೇರಿದಂತೆ ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಬಳ್ಳಾರಿ, ಬೀದರ್, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳು ಪೌಷ್ಟಿಕಾಂಶ ಕೊರತೆಯನ್ನು ಅನುಭವಿಸುತ್ತಿವೆ ಎಂದು ಕರ್ನಾಟಕ ಮಾನವಾಭಿವೃದ್ಧಿಯ ಕುರಿತು 2022ನೇ ವರ್ಷದ ವರದಿ ಹೇಳುತ್ತದೆ. ಈ ಬಗ್ಗೆ ಮತದಾರರಿಗೆ ಪ್ರಧಾನ ಮಂತ್ರಿ ಮತ್ತು ರಾಜ್ಯದ ಮುಖ್ಯಮಂತ್ರಿಗಳು ವಿವರಣೆ ನೀಡುವುದು ಅವಶ್ಯವಾಗಿದೆ.

ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಬರುತ್ತವೆ, ಹೋಗುತ್ತವೆ. ತಮ್ಮನ್ನು ಚುನಾಯಿಸಿದ ಜನರಿಗೆ ತಾವು ನೀಡಿದ್ದೇನು ಎಂಬ ಬಗ್ಗೆ ರಾಜಕಾರಣಿಗಳು ಆತ್ಮಾವಲೋಕನ ಮಾಡಿಕೊಳ್ಳ ಬೇಕಾಗಿದೆ. ಆಡಳಿತ ಪಕ್ಷದವರು ತಾವು ಹಿಂದಿನ ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆ ಯಲ್ಲಿ ಜನರಿಗೆ ನೀಡಿರುವ ಯಾವ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ ಎಂಬುದನ್ನು ವಿವರಿಸ ಬೇಕು. ಪ್ರತಿಪಕ್ಷ ಗಳು ಸರಕಾರದ ಲೋಪದೋಷಗಳ ಮೇಲೆ ಬೆಳಕು ಚೆಲ್ಲಿ ಟೀಕಿಸಬೇಕು. ಆದರೆ ಇತ್ತೀಚೆಗೆ ಎಲ್ಲವೂ ಉಲ್ಟಾಪಲ್ಟಾ ಆಗಿದೆ.

ಜನತಂತ್ರದಲ್ಲಿ ಚುನಾವಣೆಗಳನ್ನು ಗೆಲ್ಲಲು ಹಣ ಬಲ, ತೋಳ್ಬಲಗಳ ಪ್ರದರ್ಶನ ಮಾಡುವುದು ಸರಿಯಲ್ಲ. ಸಮುದಾಯಗಳ ನಡುವೆ ದ್ವೇಷದ ದಳ್ಳುರಿ ಎಬ್ಬಿಸಿ ಬಹು ಸಂಖ್ಯಾತರ ವೋಟ್ ಬ್ಯಾಂಕ್ ಸೃಷ್ಟಿಸುವ ದುಸ್ಸಾಹಸಕ್ಕೆ ಕೈ ಹಾಕುವುದು ಅಸಹ್ಯದ ಪರಮಾವಧಿ. ಇದರ ಬದಲಾಗಿ ಜಾತಿ ಮತವೆನ್ನದೇ ಎಲ್ಲ ಮತದಾರರನ್ನು ಪ್ರೀತಿಸುವ, ಗೌರವದಿಂದ ಕಾಣುವ ಜನಪರ ಕಾಳಜಿ ಇಂದಿನ ರಾಜಕಾರಣಿಗಳಿಗೆ ತುರ್ತಾಗಿ ಬೇಕಾಗಿದೆ.

Similar News