ಮತ್ತೊಮ್ಮೆ ಎರಡು ದೋಣಿಗಳಲ್ಲಿ ಸಿದ್ದರಾಮಯ್ಯ ಚುನಾವಣಾ ಪಯಣ!

Update: 2023-03-29 04:14 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ವರುಣಾ ಕ್ಷೇತ್ರದಲ್ಲಿ ಟಿಕೆಟ್ ಜೇಬಿಗಿಳಿಸಿದ ಬೆನ್ನಿಗೇ ‘‘ಕೋಲಾರದಲ್ಲೂ ಸ್ಪರ್ಧಿಸುತ್ತೇನೆ’’ ಎನ್ನುವ ಹೇಳಿಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹೊರ ಬಿದ್ದಿದೆ. ‘‘ಕೋಲಾರದ ಜನರಿಗೆ ಆ ಮೂಲಕ ಮಹದುಪಕಾರ’’ ಮಾಡುತ್ತಿದ್ದೇನೆ ಎಂಬ ಧ್ವನಿ ಅವರ ಆ ಹೇಳಿಕೆಯಲ್ಲಿದೆ. ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ಗೆದ್ದು ಏಕ ಕಾಲದಲ್ಲಿ ಜನಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವುದಕ್ಕೆ ಅವಕಾಶವಿಲ್ಲ ಎನ್ನುವುದು ಗೊತ್ತಿದ್ದೂ ಅವರು ಮತ್ತೆ ಈ ಬಾರಿಯೂ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಕೋಲಾರದ ತಮ್ಮ ಅಭಿಮಾನಿಗಳನ್ನು ಸಂತೃಪ್ತಿ ಪಡಿಸುವ ನೆಪದಲ್ಲಿ ಒಂದು ಕ್ಷೇತ್ರದ ಮತದಾರರ ಮೇಲೆ ಎರಡೆರಡು ಬಾರಿ ಚುನಾವಣೆಯನ್ನು ಹೇರುವುದು ಎಷ್ಟರಮಟ್ಟಿಗೆ ಸರಿ? ಈ ಪ್ರಶ್ನೆಗೆ ಸಮಾಜವಾದದ ಹಿನ್ನೆಲೆಯಿರುವ ನಾಯಕರೆಂದು ಗುರುತಿಸಿಕೊಂಡಿರುವ, ‘ಜನಪರ ಮುಖ್ಯಮಂತ್ರಿ’ ಎಂಬ ‘ಹೆಗ್ಗಳಿಕೆ’ಗೆ ಪಾತ್ರರಾಗಿರುವ ಸಿದ್ದರಾಮಯ್ಯ ಉತ್ತರಿಸಬೇಕಾಗಿದೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅನಿವಾರ್ಯತೆ ಸಿದ್ದರಾಮಯ್ಯ ಅವರಿಗೆ ಯಾಕೆ ಎದುರಾಗಿದೆ? ಇದು ಕ್ಷೇತ್ರದ ಮತದಾರರ ಅಗತ್ಯವೋ ಅಥವಾ ಸಿದ್ದರಾಮಯ್ಯ ಅವರ ಖಾಸಗಿ ಅಗತ್ಯವೋ ಎನ್ನುವುದು ಕೂಡ ಸ್ಪಷ್ಟವಾಗಬೇಕಾಗಿದೆ.

 ಪಕ್ಷದ ನಾಯಕರೆಂದು ಗುರುತಿಸಲ್ಪಟ್ಟವರು ತಮ್ಮ ‘ಸ್ಥಾನ’ ಉಳಿಸುವುದಕ್ಕಾಗಿ ಎರಡೆರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರವೃತ್ತಿ ನಿಲ್ಲಬೇಕು ಎನ್ನುವ ಕೂಗು ಇಂದು ನಿನ್ನೆಯದಲ್ಲ. ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ಒಂದು ಕ್ಷೇತ್ರವನ್ನು ಆತ ತ್ಯಜಿಸಲೇ ಬೇಕಾಗುತ್ತದೆ. ಆಗ, ತಮ್ಮ ಕ್ಷೇತ್ರದಿಂದ ಆಯ್ಕೆಯಾಗಿ ಕ್ಷೇತ್ರಕ್ಕೆ ನ್ಯಾಯ ನೀಡುತ್ತಾರೆ ಎಂದು ನಂಬಿ ಚುನಾಯಿಸುವ ಮತದಾರರ ನಂಬಿಕೆಗೆ ವಂಚನೆಯಾಗುತ್ತದೆ ಮಾತ್ರವಲ್ಲ, ದೇಶದ ಪ್ರಧಾನಿ ಅಭ್ಯರ್ಥಿಯೆಂದೋ, ನಾಡಿನ ಮುಖ್ಯಮಂತ್ರಿ ಅಭ್ಯರ್ಥಿಯೆಂದೋ ನಂಬಿ ಕ್ಷೇತ್ರದ ಪ್ರತಿನಿಧಿಯಾಗಿ ಚುನಾಯಿಸಿದ ತಪ್ಪಿಗೆ ಮತದಾರರ ಮೇಲೆ ಎರಡನೆಯ ಬಾರಿಗೆ ಚುನಾವಣೆ ಹೇರಿಕೆಯಾಗುತ್ತದೆ. ಅಭ್ಯರ್ಥಿಯ ರಾಜಕೀಯ ಸ್ವಾರ್ಥಕ್ಕಾಗಿ ಸೃಷ್ಟಿಯಾಗಿರುವ ಎರಡನೆಯ ಚುನಾವಣೆಗಾಗಿ ಮತದಾರರ ಹಣವನ್ನು ಯಾಕೆ ವೆಚ್ಚ ಮಾಡಬೇಕು? ಎರಡೂ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸುವುದೇ ಆಗಿದ್ದಲ್ಲಿ, ಗೆದ್ದ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಯುವ ಎಲ್ಲ ವೆಚ್ಚವನ್ನು ಸ್ಪರ್ಧಿಸಿದ ಅಭ್ಯರ್ಥಿಯೇ ಪಾವತಿಸುವಂತಾಗಬೇಕು. ನಾಳೆ, ಎರಡೂ ಕ್ಷೇತ್ರಗಳಲ್ಲಿ ಗೆದ್ದು ಒಂದನ್ನು ತ್ಯಜಿಸುವ ಸಂದರ್ಭ ಎದುರಾದರೆ, ಆ ಕ್ಷೇತ್ರದ ಚುನಾವಣೆಯ ವೆಚ್ಚವನ್ನು ಹೊರಲು ಸಿದ್ದರಾಮಯ್ಯ ಸಿದ್ಧರಿದ್ದಾರೆಯೆ?

ಸಿದ್ದರಾಮಯ್ಯ ಅವರ ಇಂತಹ ಬೇಜವಾಬ್ದಾರಿ ನಿರ್ಧಾರದಿಂದಲೇ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಲು ಕಾರಣವಾಯಿತು ಎನ್ನುವ ಆರೋಪಗಳಿವೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿಯೂ ಎರಡೆರಡು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವ ಸ್ಥಿತಿ ನಿರ್ಮಾಣವಾಯಿತು. ಎರಡೂ ದೋಣಿ ಗಳಲ್ಲಿ ಕಾಲಿಟ್ಟು ಎರಡೂ ಕ್ಷೇತ್ರಗಳಿಗೂ ಸಲ್ಲದಂತಾದರು. ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ತನ್ನ ಜನಪರ ಆಡಳಿತಕ್ಕಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು, ಬಾದಾಮಿಯಲ್ಲಿ ಕೂದಲೆಳೆಯ ಅಂತರದಲ್ಲಿ ಸೋಲಿನಿಂದ ಪಾರಾದರು. ಇದೊಂದು ರೀತಿ, ಗೆದ್ದೂ ಸೋತಂತೆ. ಆ ಸೋಲುಗಳಿಂದ ಸಿದ್ದರಾಮಯ್ಯ ಅವರು ಇನ್ನೂ ಪಾಠ ಕಲಿತಿಲ್ಲ ಎನ್ನುವುದು ಅವರ ಇತ್ತೀಚಿನ ಹೇಳಿಕೆಗಳಿಂದ ಬಹಿರಂಗವಾಗುತ್ತಿದೆ. ಅಂದಿನ ಅವರ ಪುತ್ರ ವ್ಯಾಮೋಹಕ್ಕೆ ಕಾಂಗ್ರೆಸ್ ಭಾರೀ ಬೆಲೆಯನ್ನು ತೆರಬೇಕಾಯಿತು. ವರುಣಾ ಕ್ಷೇತ್ರವನ್ನು ಪುತ್ರನಿಗೆ ಒಪ್ಪಿಸಿ, ತಾನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರ್ಧಾರ ತಳೆಯುವ ಮೂಲಕ ಚುನಾವಣೆಯ ಕಾವು ತಾರಕಕ್ಕೇರಿದ ಹೊತ್ತಿನಲ್ಲಿ ಕಾಂಗ್ರೆಸನ್ನು ಗೊಂದಲಗಳಿಗೆ ತಳ್ಳಿದರು. ಆ ಗೊಂದಲಗಳನ್ನು ಅಂದಿನ ಅವರ ರಾಜಕೀಯ ವಿರೋಧಿಗಳು ಪರಿಣಾಮಕಾರಿಯಾಗಿ ಬಳಸಿಕೊಂಡರು. ಚುನಾವಣೆಯಲ್ಲಿ ಅವರ ಪುತ್ರರೇನೋ ಗೆದ್ದರು. ಆದರೆ ಅದಕ್ಕಾಗಿ ಸಿದ್ದರಾಮಯ್ಯ ಮತ್ತು ಅವರ ಕಾಂಗ್ರೆಸ್ ಕಳೆದುಕೊಂಡದ್ದು ಬಹಳ.

ಇದೀಗ ವರುಣಾದಲ್ಲಿ ಟಿಕೆಟ್ ಅಧಿಕೃತವಾಗಿಸಿಕೊಂಡ ಬಳಿಕವೂ ಸಿದ್ದರಾಮಯ್ಯ ಅವರು ಯಾಕೆ ಇನ್ನೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ? ಅವರ ಈ ನಿರ್ಧಾರದಿಂದ ವರುಣಾ ಅಥವಾ ಕೋಲಾರ ಉಭಯ ಕ್ಷೇತ್ರಗಳ ಜನರಿಗೆ ಯಾವುದೇ ಲಾಭವಿಲ್ಲ. ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ಸಿದ್ದರಾಮಯ್ಯ ಯಾವ ಕ್ಷೇತ್ರವನ್ನು ಆರಿಸಿಕೊಳ್ಳಲಿದ್ದಾರೆ? ತಮ್ಮ ಕ್ಷೇತ್ರವನ್ನು ಸಿದ್ದರಾಮಯ್ಯ ಆರಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಮತದಾರರಲ್ಲಿ ಶಂಕೆ ಸೃಷ್ಟಿಯಾದರೆ ಎರಡೂ ಕ್ಷೇತ್ರಗಳನ್ನೂ ಸಿದ್ದರಾಮಯ್ಯ ಕಳೆದುಕೊಳ್ಳಬೇಕಾಗಬಹುದು. ವರುಣಾದಲ್ಲಿ ಗೆಲ್ಲುವ ಭರವಸೆ ಇದೆ ಎಂದಾದರೆ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವ ಅಗತ್ಯವಾದರೂ ಏನಿದೆ? ಕಾಂಗ್ರೆಸ್‌ನ ಒಂದು ದೊಡ್ಡ ಗುಂಪು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿಕೊಳ್ಳುತ್ತಿದೆ. ಅವರನ್ನು ಪ್ರಗತಿ ಪರ, ಜನಪರ ನಾಯಕ ಎಂದೂ ಕರೆಯುತ್ತಿದೆ. ಇಷ್ಟೆಲ್ಲ ಹೆಗ್ಗಳಿಕೆಯಿರುವ ನಾಯಕರೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸುವ ಸಂದರ್ಭದಲ್ಲಿ ಸೋಲಿನ ಭಯದಿಂದ ಎರಡೆರಡು ಕ್ಷೇತ್ರಗಳನ್ನು ಆಯ್ಕೆ ಮಾಡುವುದು ಅವರ ವರ್ಚಸ್ಸಿಗೆ ಕುಂದುಂಟು ಮಾಡುವುದಿಲ್ಲವೆ? ಒಂದು ಮೂಲದ ಪ್ರಕಾರ, ಕ್ಷೇತ್ರದ ಜನರ ಮೇಲಿನ ಪ್ರೇಮಕ್ಕಿಂತ ತನ್ನ ಪುತ್ರನ ಮೇಲಿರುವ ಪ್ರೀತಿಯೇ ಅವರನ್ನು ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅನಿವಾರ್ಯತೆಯನ್ನು ಅವರಿಗೆ ಸೃಷ್ಟಿಸಿದೆ. ತಾನು ಗೆದ್ದು ತ್ಯಜಿಸಿದ ಕ್ಷೇತ್ರದಿಂದ ತನ್ನ ಪುತ್ರನನ್ನು ಕಣಕ್ಕಿಳಿಸುವ ದೂರದ ಉದ್ದೇಶವನ್ನು ಅವರು ಹೊಂದಿದ್ದಾರೆ ಎನ್ನಲಾಗುತ್ತಿದೆ. ಅದು ನಿಜವೇ ಆಗಿದ್ದರೆ, ಕಾಂಗ್ರೆಸ್‌ನಲ್ಲಿ ಇತಿಹಾಸ ಪುನರಾವರ್ತನೆಯಾಗಲಿದೆ.

ಬಾದಾಮಿ, ಕೋಲಾರ, ವರುಣಾ ಹೀಗೆ....ಒಂದೇ ಬಾರಿ ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಸಿ ಒಬ್ಬ ನಾಯಕನನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್‌ಗಿದೆಯೆಂದಾದರೆ ಅದು ಹೊಸತೊಂದು ಪರಂಪರೆಯನ್ನು ಆರಂಭಿಸಬೇಕು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಎಲ್ಲ ಕ್ಷೇತ್ರಗಳಲ್ಲೂ ಸಿದ್ದರಾಮಯ್ಯ ಒಬ್ಬರೇ ಕಣಕ್ಕಿಳಿಯಲಿ. ಸಿದ್ದರಾಮಯ್ಯ ಅವರ ಗೆಲುವು ಅಧಿಕೃತವಾಗಿ ಘೋಷಣೆಯಾದ ಬಳಿಕ, ಒಂದು ಕ್ಷೇತ್ರವನ್ನು ಅವರು ಉಳಿಸಿಕೊಂಡು ಗೆದ್ದ ಉಳಿದೆಲ್ಲ ಕ್ಷೇತ್ರಗಳಲ್ಲಿ ಅವರ ಪುತ್ರ ಸ್ಪರ್ಧಿಸಲಿ. ಅವರ ಪುತ್ರ ಗೆದ್ದು ಒಂದು ಕ್ಷೇತ್ರವನ್ನು ಉಳಿಸಿಕೊಂಡು, ಉಳಿದ ಕ್ಷೇತ್ರಗಳಲ್ಲಿ ಇತರ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸುವಂತಾಗಲಿ. ಇಂತಹ ತಮಾಷೆಯ ಮಾತುಗಳು ಕಾಂಗ್ರೆಸ್‌ನ ಒಳಗೆ ಸೃಷ್ಟಿಯಾಗಬಾರದು ಎಂದಾದರೆ, ಸಿದ್ದರಾಮಯ್ಯ ಪ್ರಜಾಸತ್ತೆಯ ಆಶಯಕ್ಕೆ ಬದ್ಧರಾಗಿ, ತನ್ನ ಸಿದ್ಧಾಂತ, ಜನಪರ ಕಾಳಜಿಯ ಮೇಲೆ ಭರವಸೆಯಿಟ್ಟುಕೊಂಡು ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಆತ್ಮವಿಶ್ವಾಸವನ್ನು ಪ್ರದರ್ಶಿಸಲಿ. ಕಳೆದ ಬಾರಿ ತನ್ನ ಪುತ್ರ ಪ್ರೇಮದಿಂದ ಕಾಂಗ್ರೆಸ್‌ನೊಳಗೆ ಸೃಷ್ಟಿಸಿದ ಗೊಂದಲಗಳು ಈ ಬಾರಿ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಕಾಂಗ್ರೆಸ್‌ನ ಚುಕ್ಕಾಣಿಯನ್ನು ಕೈಗೆತ್ತಿಕೊಂಡಿರುವ ಸಿದ್ದರಾಮಯ್ಯ ಅವರ ಮೇಲಿದೆ. ಸಿದ್ದರಾಮಯ್ಯ ಅವರ ದೌರ್ಬಲ್ಯಗಳನ್ನು ಅವರ ವಿರುದ್ಧವೇ ಬಳಸಲು ವಿರೋಧಿ ಪಕ್ಷದ ನಾಯಕರು ಮಾತ್ರವಲ್ಲ, ಕಾಂಗ್ರೆಸ್‌ನೊಳಗಿರುವ ಪ್ರತಿಸ್ಪರ್ಧಿಗಳೂ ಹೊಂಚಿ ಹಾಕಿ ಕುಳಿತಿದ್ದಾರೆ ಎನ್ನುವ ಎಚ್ಚರಿಕೆ ಅವರಿಗಿರಬೇಕು.

Similar News