ಆಫ್ರಿಕನ್‌ ಚಿರತೆ ಸಾವಿನ ಬೆನ್ನಲ್ಲೇ ಚೀತಾ ಕಾರ್ಯಪಡೆಯ ತಜ್ಞ ಸಮಿತಿಯ ಸದಸ್ಯರ ಪರಿಣತಿ ಕುರಿತು ಮಾಹಿತಿ ಕೇಳಿದ ಸುಪ್ರೀಂ

Update: 2023-03-29 09:37 GMT

ಹೊಸದಿಲ್ಲಿ: ಮಧ್ಯಪ್ರದೇಶದಲ್ಲಿನ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ ಚೀತಾ ಸಾವಿಗೀಡಾದ ಒಂದು ದಿನದ ನಂತರ  ಚೀತಾ ಕಾರ್ಯಪಡೆ ತಜ್ಞರ ವಿದ್ಯಾರ್ಹತೆ ಹಾಗೂ ಅನುಭವದ ಕುರಿತು ವಿಸ್ತೃತ ವರದಿ ನೀಡುವಂತೆ ಮಂಗಳವಾರ ಸುಪ್ರೀಂಕೋರ್ಟ್ ಸೂಚಿಸಿದೆ ಎಂದು ndtv.com ವರದಿ ಮಾಡಿದೆ.

ಇತರ ಏಳು ಚೀತಾಗಳೊಂದಿಗೆ ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದ್ದ ಸಶಾ ಎಂಬ ನಾಲ್ಕೂವರೆ ವರ್ಷದ ಹೆಣ್ಣು ಚೀತಾವು ಮೂತ್ರಪಿಂಡ ಸಮಸ್ಯೆಯಿಂದ ಆರು ತಿಂಗಳ ನಂತರ ಸಾವಿಗೀಡಾಗಿತ್ತು.

ಇದರ ಬೆನ್ನಿಗೇ ನ್ಯಾ. ಬಿ.ಆರ್.ಗವಾಯಿ ಹಾಗೂ ನ್ಯಾ. ವಿಕ್ರಂ ನಾಥ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಕಾರ್ಯಪಡೆಯಲ್ಲಿರುವ ಚೀತಾ ನಿರ್ವಹಣೆಯಲ್ಲಿ ತಜ್ಞರಾಗಿರುವವರ ವಿದ್ಯಾರ್ಹತೆ ಮತ್ತು ಅನುಭವದ ಕುರಿತು ಇನ್ನೆರಡು ವಾರಗಳಲ್ಲಿ ವಿವರ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ತಜ್ಞರ ಸಮಿತಿಯಿಂದ ಮಾರ್ಗದರ್ಶನ ಹಾಗೂ ಸಲಹೆ ಪಡೆಯುವುದನ್ನು ಮುಂದುವರಿಸಬೇಕು ಎಂದು ಜನವರಿ 28, 2020ರಂದು ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನ ಪಾಲಿಸುವುದು ಇನ್ನು ಮುಂದೆ ಅನಗತ್ಯ ಮತ್ತು ಕಡ್ಡಾಯವಲ್ಲ ಎಂದು ಸೂಚಿಸಬೇಕು ಎಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಪೀಠವು ಮೇಲಿನಂತೆ ಆದೇಶಿಸಿದೆ.

ಆ ಸಂದರ್ಭದಲ್ಲಿ ವನ್ಯಜೀವಿ ರಕ್ಷಣಾ ಇಲಾಖೆಯ ಮಾಜಿ ನಿರ್ದೇಶಕ ಎಂ.ಕೆ.ರಂಜಿತ್ ಸಿನ್ಹಾ, ಉತ್ತರಾಖಂಡದ ವನ್ಯಜೀವಿ ಆಡಳಿತ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಧನಂಜಯ್ ಮೋಹನ್ ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವನ್ಯಜೀವಿ ಮಹಾ ನಿರೀಕ್ಷಕರನ್ನೊಳಗೊಂಡ ತ್ರಿಸದಸ್ಯ ಸಮಿತಿಯು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಆಫ್ರಿಕಾದ ಚೀತಾಗಳನ್ನು ಭಾರತಕ್ಕೆ ಪರಿಚಯಿಸುವ ಕುರಿತು ಮಾರ್ಗದರ್ಶನ ನೀಡಲಿದೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು.

ವಿಚಾರಣೆಯ ಸಂದರ್ಭದಲ್ಲಿ ಪರಿಸರಕ್ಕಾಗಿ ವಿಶ್ವಾದ್ಯಂತ ವನ್ಯಜೀವಿ ನಿಧಿಯ ಪರಿಸರ ಕಾನೂನು ಎಂಬ ಸರ್ಕಾರೇತರ ಸಂಸ್ಥೆಯ ಕೇಂದ್ರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಪ್ರಶಾಂತೊ ಚಂದ್ರ ಸೇನ್ ಅವರು ಚೀತಾ ಕಾರ್ಯಪಡೆಯ ಸಮಿತಿಯಲ್ಲಿ ಯಾವುದೇ ಚೀತಾ ತಜ್ಞರಿಲ್ಲ ಎಂಬ ಸಂಗತಿಯನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಚೀತಾವನ್ನು ಹೊರ ದೇಶದಿಂದ ತಂದಿರುವುದರಿಂದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಕನಿಷ್ಠ ಪಕ್ಷ ಪ್ರಾಥಮಿಕ ಹಂತದವರೆಗಾದರೂ ಸುಪ್ರೀಂಕೋರ್ಟ್ ರಚಿಸಿರುವ ತಜ್ಞರ ಸಮಿತಿಯೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಬೇಕು ಎಂದು ಅವರು ವಾದಿಸಿದರು.

"ಹೊರದೇಶದಿಂದ ಚೀತಾಗಳು ಬಂದಿದ್ದು, ಈ ಪೈಕಿ ಒಂದನ್ನು ಈಗಾಗಲೇ ಕಳೆದುಕೊಂಡಿದ್ದೇವೆ. ಆದ್ದರಿಂದ ಚೀತಾ ನಿರ್ವಹಣೆಯ ಅರಿವು ಮತ್ತು ತಜ್ಞತೆ ಹೊಂದಿರುವವರು ಸಮಿತಿಯಲ್ಲಿರಬೇಕಾಗಿದೆ" ಎಂದು ಅವರು ಪ್ರತಿಪಾದಿಸಿದರು.

ಅದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಭಾರತದಲ್ಲಿ ಚೀತಾವನ್ನು ಪರಿಚಯಿಸಲು ಸರ್ಕಾರವು ವೈಜ್ಞಾನಿಕ ಯೋಜನೆಯನ್ನು ಸಿದ್ಧಪಡಿಸಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ಸರ್ಕಾರ ಅಪಾರ ಮುತುವರ್ಜಿ ವಹಿಸುತ್ತಿರುವುದನ್ನು ನ್ಯಾ. ವಿಕ್ರಂ ನಾಥ್ ಗಮನಕ್ಕೆ ತೆಗೆದುಕೊಂಡರು. ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದ ನ್ಯಾಯಪೀಠವು, ಚೀತಾ ಕಾರ್ಯಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞರ ಕುರಿತು ವಿವರ ಒದಗಿಸುವಂತೆ ಐಶ್ವರ್ಯ ಭಾಟಿ ಅವರಿಗೆ ಸೂಚಿಸಿತು.

Similar News