ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳು ಸೂಕ್ಷ್ಮ: ಚುನಾವಣಾಧಿಕಾರಿ

Update: 2023-03-29 14:48 GMT

ಬೆಂಗಳೂರು, ಮಾ.29: ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಬೆಂಗಳೂರು ನಗರದ 28 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳನ್ನು ಸೂಕ್ಷ್ಮ ಕ್ಷೇತ್ರಗಳೆಂದು ಗುರುತಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ, ಆನೇಕಲ್, ಕೆ.ಆರ್. ಪುರ, ಮಲ್ಲೇಶ್ವರ, ಹೆಬ್ಬಾಳ, ಸರ್ವಜ್ಞನಗರ, ಸಿ.ವಿ.ರಾಮನ್ ನಗರ, ರಾಜರಾಜೇಶ್ವರಿನಗರ, ಶಿವಾಜಿನಗರ, ಶಾಂತಿ ನಗರ, ಚಾಮರಾಜನಗರ, ಚಿಕ್ಕಪೇಟೆ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ ಹಾಗೂ ಬೊಮ್ಮನಹಳ್ಳಿ ಕ್ಷೇತ್ರಗಳು ಸೇರಿ 19 ಕ್ಷೇಗಳು ಸೂಕ್ಷ್ಮ ವಿಧಾನಸಭಾ ಕ್ಷೇತ್ರಗಳಾಗಿವೆ ಎಂದು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯನ್ನು ನಾಲ್ಕು ವಲಯಗಳಾಗಿ ವಿಂಗಡನೆ ಮಾಡಲಾಗಿದ್ದು, ಚುನಾವಣಾ ಮೇಲುಸ್ತುವಾರಿಗೆ ನಾಲ್ಕು ಅಪರ ಜಿಲ್ಲಾ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬಿಬಿಎಂಪಿ ಕೇಂದ್ರಕ್ಕೆ ಡಾ.ಹರೀಶ್ ಕುಮಾರ್, ಬಿಬಿಎಂಪಿ ಉತ್ತರಕ್ಕೆ ಲಿಂಗಮೂರ್ತಿ, ಬಿಬಿಎಂಪಿ ದಕ್ಷಿಣಕ್ಕೆ ಜಗದೀಶ್ ಕೆ.ನಾಯಕ್ ಮತ್ತು ಬೆಂಗಳೂರು ನಗರಕ್ಕೆ ಕೆ.ಎ.ದಯಾನಂದ್ ಅವರನ್ನು ಅಪರ ಜಿಲ್ಲಾ ಚುನಾವಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

ನಗರ ವ್ಯಾಪ್ತಿಯಲ್ಲಿ 8,615 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 2,217ಸೂಕ್ಷ್ಮ ಮತಗಟ್ಟೆಗಳನ್ನು ಗುರುತು ಮಾಡಲಾಗಿದೆ. ಎಲ್ಲ ಮತಗಟ್ಟೆಗಳಿಗೂ ಕುಡಿಯುವ ನೀರು, ವಿದ್ಯುತ್, ಪೀಠೋಪಕರಣ, ಶೌಚಾಲಯ ಸೇರಿ ಇನ್ನಿತರ ಅಗತ್ಯತೆಗಳನ್ನು ಸಕಾಲದಲ್ಲಿ ಪೂರೈಸಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲಾ ವ್ಯಾಪ್ತಿಯಲ್ಲಿ 95,13,830 ಮತದಾರರಿದ್ದಾರೆ. ಇದರಲ್ಲಿ 49,26,270 ಪುರುಷ ಮತದಾರರಾಗಿದ್ದು, 45,85,824 ಮಹಿಳಾ ಮತದಾರರು ಇದ್ದಾರೆ. 18 ರಿಂದ 19 ವಯಸ್ಸಿನ 1,08,494 ಮಾತದಾರರು ಸೇರ್ಪಡೆಯಾಗಿದ್ದಾರೆ. 80 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ 2,36,719 ಇದೆ ಎಂದು ಅವರು ಮಾಹಿತಿ ನೀಡಿದರು.

ನಗರದಲ್ಲಿ ಮತದಾರರ ಒಲೈಕೆಗಾಗಿ ಪ್ರಯತ್ನಿಸುತ್ತಿದ್ದದನ್ನು ಗುರುತಿಸಿ ಹಲವು ಕಡೆಗಳಲ್ಲಿ ನಗದು, ಮಧ್ಯೆ ಸೇರಿ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಇದುವರೆಗೂ ನಗರದ 99 ಕಡೆಗಳಲ್ಲಿ ಸುಮಾರು 2,76,67,291 ಕೋಟಿ ರೂ.ಮೌಲ್ಯದ ಸರಕು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಇದುವರೆಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಅನಧಿಕೃತ ಬ್ಯಾನರ್‍ಗಳನ್ನು ತೆಗೆಯಲಾಗಿದೆ. ಸುಳ್ಳು ಸುದ್ದಿ ಹಾಗೂ ಸುಳ್ಳು ಜಾಹೀರಾತುಗಳ ಮೇಲೆ ನಿಗಾ ವಹಿಸಲಾಗುವುದು ಎಂದು ಅವರು ತಿಳಿಸಿದರು.

ಅಕ್ರಮ ತಡೆಯಲು ಚೆಕ್ ಪೋಸ್ಟ್: ಜಿಲ್ಲಾ ಗಡಿಯಲ್ಲಿ ಒಳ ಹೋಗುವ ಹೋರ ಬರುವ ವಾಹನಗಳ ಮೇಲೆ ನಿಗಾ ಇಡಲು 11 ಚೆಕ್ ಪೋಸ್ಟ್ ವ್ಯವಸ್ಥೆ ಮಾಡಲಾಗಿದೆ. ನಗರದ ವ್ಯಾಪ್ತಿಯಲ್ಲಿ 15 ಕಡೆ, ತಮಿಳುನಾಡು ಗಡಿಯಲ್ಲಿ 8 ಚೆಕ್‍ ಪೋಸ್ಟ್ ಇರಲಿದೆ. ಉಸ್ತುವಾರಿಯನ್ನು ಆಯಾ ವ್ಯಾಪ್ತಿಯ ಡಿಸಿಪಿಗಳಿಗೆ ನೀಡಲಾಗಿದೆ. ಬೊಮ್ಮನಹಳ್ಳಿ ಕ್ಷೇತ್ರ ಸೇರಿದಂತೆ ವಿವಿಧೆಡೆ ರ್ಯಾಂಡಮ್ ಚೆಕ್ ಅಪ್ ನಡೆಯಲಿದೆ.

Similar News