ಚುನಾವಣೆಯಲ್ಲಿ ಕೋಮುದ್ವೇಷದ ಅಜೆಂಡಾಗಳು ಬೇಡ: ಮುನೀರ್ ಕಾಟಿಪಳ್ಳ

"ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದ ಜನಪರ ರಾಜಕಾರಣ ಚರ್ಚೆಯಾಗಲಿ"

Update: 2023-03-29 16:52 GMT

ಸುಳ್ಯ: ಈ ಬಾರಿಯ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷದ ಅಜೆಂಡಾಗಳನ್ನು ಬಿಟ್ಟು  ಶಿಕ್ಷಣ, ಉದ್ಯೋಗ, ಆರೋಗ್ಯ, ಅಭಿವೃದ್ಧಿ ಸೇರಿದಂತೆ ಜನಪರ ರಾಜಕೀಯದ ಬಗ್ಗೆ ಚರ್ಚೆಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜನಜಾಗೃತಿ ನಡೆಸಲಾಗುವುದು ಎಂದು ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಆರೋಗ್ಯ ಕ್ಷೇತ್ರ ಬಹಳ ಹಿಂದೆ ಬಿದ್ದಿದೆ. ಜಿಲ್ಲೆಯಲ್ಲಿ ಎಂಟು ಖಾಸಗೀ ಮೆಡಿಕಲ್ ಕಾಲೇಜುಗಳು ಇದ್ದರೂ ಒಂದೇ ಒಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಿಲ್ಲ. ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿರುವ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ವೆನ್‍ಲಾಕ್ ಜಿಲ್ಲಾಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ಆಗಿಲ್ಲ. ಜಿಲ್ಲೆಯ ತಾಲೂಕು, ಸಮುದಾಯ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ನೇಮಕಾತಿ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತಹ ಕನಿಷ್ಟ ಕೆಲಸಗಳೂ ನಡೆಯಲಿಲ್ಲ. ನಾಲ್ಕು ಹೊಸ ತಾಲೂಕುಗಳು ಘೋಷಣೆಯಾದರೂ ಹೊಸ ತಾಲೂಕುಗಳಿಗೆ ತಾಲೂಕು ಆಸ್ಪತ್ರೆಗಳು ಮಂಜೂರಾಗಲಿಲ್ಲ. ಒಂದು ಹೊಸ ಸಮುದಾಯ ಆಸ್ಪತ್ರೆಯು ಜಿಲ್ಲೆಗೆ ದೊರಕಲಿಲ್ಲ ಎಂದರು.

ಜಿಲ್ಲೆಯಲ್ಲಿ ಸರಕಾರ ಯಾವುದೇ ವೃತ್ತಿಪರ ಹಾಗು ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿಲ್ಲ. ಇದರಿಂದ ಜನ ಸಾಮಾನ್ಯರ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಕೈಗೆಟಕುತ್ತಿಲ್ಲ. ಬಹುತೇಕ ಪೊಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲಾಗದ ಸ್ಥಿತಿ ನಿರ್ಮಾಣಗೊಂಡಿದೆ. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಠಿಯಾಗುತ್ತಿಲ್ಲ ಮಾತ್ರವಲ್ಲ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತಿಲ್ಲ. ಜಿಲ್ಲೆಯ ಯುವಕರು ಉದ್ಯೋಗಕ್ಕಾಗಿ ಬೇರೆ ಜಿಲ್ಲೆ, ರಾಜ್ಯ ವಿದೇಶ ಗಳಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಅಲ್ಲಿ ತಮ್ಮ ಶೈಕ್ಷಣಿಕ ಅರ್ಹತೆಗೆ ತಕ್ಕುದಲ್ಲದ ಕಡಿಮೆ ದರ್ಜೆಯ ಉದ್ಯೋಗಗಳನ್ನು ಮಾಡುವ ಸ್ಥಿತಿ ಉಂಟಾಗಿದೆ. ಬೃಹತ್ ಉದ್ಯಮಗಳು ಸ್ಥಾಪನೆಗೊಂಡಿದ್ದರೂ ಉದ್ಯೋಗವಕಾಶಗಳು ಅತ್ಯಂತ ಕಡಿಮೆ ಇದೆ. ಜಿಲ್ಲೆಯ ಎಲ್ಲಡೆ ನಿರುದ್ಯೋಗಿಗಳ ದಂಡು ಕಂಡುಬರುತ್ತಿದೆ ಎಂದರು.

ಸುಳ್ಯ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಆದುದರಿಂದ ಜಿಲ್ಲೆಯಲ್ಲಿ ಈಗಿರುವ ರಾಜಕೀಯ ವ್ಯವಸ್ಥೆ ಬದಲಾಗಬೇಕು ಹೊಸ ರಾಜಕಾರಣದ ಉದಯ ಆಗಬೇಕು. ಚುನಾವಣೆಯಲ್ಲಿ ಕೋಮುದ್ವೇಷದ ಅಜೆಂಡಾಗಳ ಬದಲು ಶಿಕ್ಷಣ, ಆರೋಗ್ಯ, ಉದ್ಯೋಗದ ಪ್ರಶ್ನೆಗಳು, ಜನರ ಬದುಕಿನ ಸಮಸ್ಯೆಗಳು ಚರ್ಚೆಯಾಗಬೇಕು ಎಂದರು. ತುಳುನಾಡಿನ ಮೂಲಭೂತ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬದಲಾವಣೆ ಆಗಬೇಕು ಎಂದರು.

ಸಿಪಿಐಎಂ ಪಕ್ಷದ ಅಭ್ಯರ್ಥಿಗಳು ಜಿಲ್ಲೆಯ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕು ಎಂಬ ವಿಚಾರದ ಬಗ್ಗೆ 31 ರಂದು ನಡೆಯುವ ಸಿಪಿಐಎಂ ಜಿಲ್ಲಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸಿಪಿಐಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಈ ಚುನಾವಣೆಯಲ್ಲಿ ರೈತರ, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ರೈತರ, ಕಾರ್ಮಿಕರ ಸಮಸ್ಯೆಗಳು ಪರಿಹರಿಸುವ ಜನಪರ ರಾಜಕಾರಣಿಗಳು, ಜನಪ್ರತಿನಿಧಿಗಳು ಆಯ್ಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಸಿಪಿಐಎಂ ತಾಲೂಕು ಕಾರ್ಯದರ್ಶಿ ನಾಗರಾಜ ಕಲ್ಲುಮುಟ್ಲು, ಸಿಐಟಿಯು ಅಧ್ಯಕ್ಷ ಕೆ.ಪಿ.ಜಾನಿ ಕಲ್ಲುಗುಂಡಿ, ಮುಖಂಡರಾದ ಬಿಜು ಅಗಸ್ಟಿನ್, ಶಿವರಾಮ ಗೌಡ, ವಿ.ಅರ್.ಪ್ರಸಾದ್, ವಸಂತ ಪೆಲ್ತಡ್ಕ ಉಪಸ್ಥಿತರಿದ್ದರು.

Similar News