ನರಿಂಗಾನ | ಹೆಜ್ಜೇನು ದಾಳಿ: ತಂದೆ-ಮಗನ ಸ್ಥಿತಿ ಗಂಭೀರ

ಬಾವಿಗಿಳಿದು ರಕ್ಷಣೆ ಪಡೆದ ವೃದ್ಧ

Update: 2023-03-30 08:54 GMT

ಕೊಣಾಜೆ, ಮಾ.30: ಹೆಜ್ಜೇನು ದಾಳಿಗೊಳಗಾಗಿ ಮೂವರು ಅಸ್ವಸ್ಥಗೊಂಡ ಘಟನೆ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಬೋಳದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಗಾಯಾಳುಗಳ ಪೈಕಿ ನರಿಂಗಾನ ಬೋಳ ನಿವಾಸಿ ರಾಬರ್ಟ್ ಕುಟಿನ್ಹ(79), ಅವರ ಪುತ್ರ ರಾಯಲ್ ಕುಟಿನ್ಹ(39)ರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಬೆಳಗ್ಗೆ ರಾಬರ್ಟ್ ಕುಟಿನ್ಹ ಬೆಳಗ್ಗೆ ಒಣಗಿದ ಬಟ್ಟೆ ತೆಗೆಯಲೆಂದು ಮನೆಯ ಮಹಡಿ ಹತ್ತುತ್ತಿದ್ದಂತೆ ಹೆಜ್ಜೇನುಗಳು ಏಕಾಏಕಿ ದಾಳಿ ಮಾಡಿವೆ. ಕೂಗಿಕೊಂಡಾಗ ರಕ್ಷಣೆಗೆಂದು ಧಾವಿಸಿದ ಪುತ್ರ ರಾಯಲ್ ಮೇಲೂ ದಾಳಿ ಮಾಡಿದೆ. ಮಗನ‌ ಸಹಾಯದಿಂದ ಮಹಡಿಯಿಂದ ಇಳಿದು ಪಾರಾದರೂ ಅಷ್ಟರಲ್ಲಿ ಅವರಿಬ್ಬರು ಹೆಜ್ಜೇನು ದಾಳಿಯಿಂದ ಹೈರಾಣಾಗಿದ್ದರು.

ರಾಬರ್ಟ್ ಮಹಡಿಯಿಂದ ಕೆಳಗೆ ಇಳಿದರೂ ಹೆಜ್ಜೇನು ಬೆಂಬಿಡದಾಗ ಬೇರೆ ದಾರಿ‌ಕಾಣದೆ ಸಮೀಪದ ಬಾವಿಗೆ ಇಳಿದು ಕೆಲಕ್ಷಣ ಕಾಲ ನೀರಿನಲ್ಲಿ ಮುಳುಗಿ ಕುಳಿತು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ರಾಬರ್ಟ್ ಕುಟಿನ್ಹ ಅವರ ಮೈಮೇಲೆ ಸುಮಾರು ನೂರೈವತ್ತು ಕಡೆ ಹೆಜ್ಜೇನು ದಾಳಿ ನಡೆಸಿವೆ.

ಈ ನಡುವೆ ಇವರಿಬ್ಬರ ರಕ್ಷಣೆಗೆ ಧಾವಿಸಿದ ಜೋಸೆಫ್ ಕುಟಿನ್ಹ‌ ಹಾಗೂ ಅಖಿಲ್ ಎಂಬವರಿಗೂ ಹೆಜ್ಜೇನು ನೊಣಗಳು ದಾಳಿ ನಡೆಸಿವೆ.

 ಗಾಯಾಳುಗಳು ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

Similar News