ಉಡುಪಿ : 35ಅಡಿ ಆಳದ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ; ಆಸ್ಪತ್ರೆಗೆ ದಾಖಲು

Update: 2023-03-30 12:59 GMT

ಉಡುಪಿ, ಮಾ.30: ಬಾವಿಗೆ ಬಿದ್ದ ವ್ಯಕ್ತಿಯೊಬ್ಬರನ್ನು ಉಡುಪಿ ಅಗ್ನಿಶಾಮಕ ದಳ ರಕ್ಷಿಸಿರುವ ಘಟನೆ ಮಾ.30ರಂದು ಬೆಳಗ್ಗೆ ಉದ್ಯಾವರ ಸಂಪಿಗೆ ನಗರದ ಮಾಂಗೋಡು ದೇವಸ್ಥಾನದ ಹತ್ತಿರ ನಡೆದಿದೆ.

ಬಾವಿಯಿಂದ ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಶಶೀಂದ್ರ (54) ಎಂದು ಗುರುತಿಸಲಾಗಿದ್ದು, ಅವರು ಮೂಳೆ ಮುರಿತಕ್ಕೆ ಒಳಗಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಅಕಸ್ಮಿಕವಾಗಿ ಕಾಲು ಜಾರಿ ಮನೆ ಸಮೀಪದ ಸುಮಾರು 35 ಅಡಿ ಆಳದ ಬಾವಿಗೆ ಬಿದ್ದರೆನ್ನಲಾಗಿದೆ.

ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣಾಧಿಕಾರಿ ಸತೀಶ್ ಎನ್. ಮಾರ್ಗದರ್ಶನ ದಂತೆ ಅಗ್ನಿಶಾಮಕ ಸಿಬ್ಬಂದಿ ರವಿ ನಾಯ್ಕ ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಬಾವಿಯೊಳಗೆ ನೋವಿನಿಂದ ನರಳಾಡುತ್ತಿದ್ದ ಶಶೀಂದ್ರ ಅವರನ್ನು ಮೇಲಕ್ಕೆ ಎತ್ತಿದರು. ಉಳಿದ ಸಿಬ್ಬಂದಿಗಳಾದ ರಾಘವೇಂದ್ರ ಆಚಾರಿ, ತೌಸಿಫ್ ಅಹ್ಮದ್, ಗಣೇಶ್ ವಿ., ಮುಸಿದ್ದೀಕ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Similar News