ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಣಕ್ಕೆ: ಬಿಎಸ್‌ವೈ ಸುಳಿವು

Update: 2023-03-30 14:36 GMT

ಬೆಂಗಳೂರು, ಮಾ.30: ವಿಧಾನಸಭೆಗೆ ಚುನಾವಣೆ ಘೋಷಣೆ ಆಗಿದ್ದು, ಸದ್ಯದಲ್ಲೇ ಅಭ್ಯರ್ಥಿಗಳ ಕುರಿತು ಸಂಸದೀಯ ಮಂಡಳಿ ತೀರ್ಮಾನ ಮಾಡಲಿದೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಗುರುವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,  ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಆ ಬಗ್ಗೆ ಚರ್ಚೆ ನಡೆಯುತ್ತಿದೆ.  ಸಿದ್ದರಾಮಯ್ಯ ಗೆಲುವು ಸುಲಭವಿದೆ ಎಂದು ನನಗೆ ಅನಿಸುತ್ತಿಲ್ಲ. ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಹಾಕುತ್ತೇವೆ. ಟಿಕೆಟ್ ಬಗ್ಗೆ ತೀರ್ಮಾನ ಮಾಡೋದು ನಾನಲ್ಲ, ವರಿಷ್ಠರು. ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬರುತ್ತೇವೆಂದು ಕನಸು ಕಾಣುತ್ತಿದ್ದಾರೆಂದು ವ್ಯಂಗ್ಯವಾಡಿದರು.

'ಅಭ್ಯರ್ಥಿಗಳ ಘೋಷಣೆ ಆದ ನಂತರ ಚುನಾವಣೆ ಮುಗಿಯುವ ವರೆಗೆ ರಾಜ್ಯದ ಎಲ್ಲ ಕ್ಷೇತ್ರಗಳಿಗೆ ನಾನು, ನಮ್ಮ ಸಂಸದರು ಪ್ರವಾಸ ಮಾಡಲಿದ್ದೇವೆ' ಎಂದರು.

ಈ ಚುನಾವಣೆಯಲ್ಲಿ ನಾವು ಸ್ಪಷ್ಟ ಬಹುಮತದೊಂದಿಗೆ ಸರಕಾರ ರಚಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂಥ ನಾಯಕರು ಬಿಜೆಪಿಯಲ್ಲಿದ್ದಾರೆ. 4 ತಂಡಗಳ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ, ಸಾರ್ವಜನಿಕ ಸಭೆಗಳಲ್ಲಿ ಸೇರಿದ ಜನರನ್ನು ಗಮನಿಸಿ ಕಾಂಗ್ರೆಸ್‍ನವರು ದಿಗ್ಭ್ರಾಂತರಾಗಿದ್ದಾರೆ ಎಂದು ಅವರು ಹೇಳಿದರು.

ರಾಜ್ಯ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೀಸಲಾತಿ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಲಿಂಗಾಯತ-ಶೇ.7, ಒಕ್ಕಲಿಗರು-ಶೇ.6, ಎಸ್ಸಿ ಎಡ ಶೇ.6, ಎಸ್ಸಿ ಬಲ ಶೇ.5.5, ಬೋವಿ ಬಂಜಾರ ಸಮಾಜದವರಿಗೆ ಶೇ.4.5, ಇತರರು ಶೇ.1 ಹೀಗೆ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.

ಮುಸ್ಲಿಮರಿಗೆ ಅನ್ಯಾಯ ಮಾಡಿಲ್ಲ: ಮೀಸಲಾತಿ ವಿಚಾರದಲ್ಲಿ ಮುಸ್ಲಿಮ್ ಬಾಂಧವರಿಗೆ ಅನ್ಯಾಯ ಮಾಡಿಲ್ಲ. ಸಂವಿಧಾನಬಾಹಿರವಾಗಿ ಸೇರಿಸಿದ್ದ ಕಾರಣ ಇಲ್ಲಿ ರದ್ದು ಮಾಡಿ, ಅವರನ್ನು ಇಡಬ್ಲ್ಯುಎಸ್ ಅಡಿ ಸೇರಿಸಿದ್ದೇವೆ. ತಪ್ಪು ಗ್ರಹಿಕೆ ಬೇಡ ಎಂದು ಯಡಿಯೂರಪ್ಪ ಹೇಳಿದರು.

ನಾನು ಸಿಎಂ ಆಗಿದ್ದಾಗ ಲಂಬಾಣಿ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತನೆ ಮಾಡಿದ್ದೆ. ಭೂರಹಿತ ದಲಿತ ಸಮುದಾಯಕ್ಕೆ ಭೂಮಿ ವಿತರಣೆ ಮಾಡಿದ್ದೇನೆ. ಅಲ್ಲದೆ, ಭಾಗ್ಯಲಕ್ಷ್ಮಿ ಯೋಜನೆ ನನಗೆ ಅತ್ಯಂತ ತೃಪ್ತಿ ಕೊಟ್ಟಿದೆ. ಬೈಸಿಕಲ್ ಕೊಡುವ ಯೋಜನೆಯೂ ಖುಷಿ ಕೊಟ್ಟಿದೆ. ಹಾಲು ಉತ್ಪಾದಕರಿಗೆ ಪೆÇ್ರೀತ್ಸಾಹಧನ ನೀಡಿದ್ದೇನೆ ಎಂದು ಯಡಿಯೂರಪ್ಪ ವಿವರಿಸಿದರು.

ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಗೆ ಸಮಾನ ಆಗಲು ಸಾಧ್ಯವೇ? ಕಾಂಗ್ರೆಸ್ ಮುಖಂಡರು ತಮಗೇ ಬಹುಮತ, ಸಿಎಂ ಪಟ್ಟ ಎಂದು ಹಗಲು ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು 60-70 ಸೀಟಿಗಿಂತ ಹೆಚ್ಚು ಗೆಲ್ಲಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಅವರು ನುಡಿದರು.

ನಿನ್ನೆ ಮಾಧ್ಯಮಗಳಲ್ಲಿ ಫಲಿತಾಂಶ ಕುರಿತು ಸರ್ವೇ ವರದಿ ನೋಡಿದ್ದೇನೆ. ಜನರ ನಾಡಿಮಿಡಿತ ನಮ್ಮ ಪರ ಇದೆ. ನಾವು 3 ಸರ್ವೇ ಮಾಡಿಸಿದ್ದೇವೆ. ಎಲ್ಲ ಸರ್ವೇಗಳಲ್ಲಿ ಸಂಪೂರ್ಣ ಬಹುಮತ ಪಡೆಯುವ ವರದಿ ಬಂದಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಬಿಜೆಪಿ ರಾಷ್ಟ್ರೀಯ ವಕ್ತಾರ ಸೈಯದ್ ಜಾಫರ್ ಇಸ್ಲಾಮ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Similar News