ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಸುಲಿಗೆ: ಮೂವರು ಆರೋಪಿಗಳ ಬಂಧನ

Update: 2023-03-30 15:46 GMT

ಬೆಂಗಳೂರು, ಮಾ.30: ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ದಾಳಿ ಮಾಡುವುದಾಗಿ ಸರಕಾರಿ ಮಹಿಳಾ ಅಧಿಕಾರಿಯನ್ನು ಬೆದರಿಸಿ ಹಣ ವಸೂಲಿ ಮಾಡಿದ್ದ ಆರೋಪದಡಿ ಮೂವರನ್ನು ಇಲ್ಲಿನ ಸಿದ್ದಾಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ಆಂಧ್ರದ ಕಡಪ ಮೂಲದ ನಾಗೇಶ್ವರ್ ರೆಡ್ಡಿ, ಬುಚ್ಚುಪಲ್ಲಿ ವಿನೀತ್ ಕುಮಾರ್ ಹಾಗೂ ಶಿವಕುಮಾರ್ ರೆಡ್ಡಿ ಎಂಬುವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಐದು ಮೊಬೈಲ್ ಫೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ.ಕೃತ್ಯದಲ್ಲಿ ಮತ್ತೋರ್ವ ಆರೋಪಿ ಪರಾರಿಯಾಗಿದ್ದು ಆತನ ಬಂಧನಕ್ಕೆ ಶೋಧಕಾರ್ಯ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮಾ.20 ರಂದು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ನಗರ ಯೋಜನೆ ವಿಭಾಗದ ಜಂಟಿ ನಿರ್ದೇಶಕಿ ಆಶಾ ಸುರೇಶ್‍ಗೆ ಕರೆ ಮಾಡಿದ ಆರೋಪಿ ನಾಗೇಶ್ವರ್, ತನ್ನ ಹೆಸರು ಅಶೋಕ್ ರಾವ್, ಲೋಕಾಯುಕ್ತ ಅಧಿಕಾರಿಯಾಗಿದ್ದು ನಿಮ್ಮ ಮನೆ ಮೇಲೆ ದಾಳಿ ಮಾಡುತ್ತೇವೆ. ಇದನ್ನು ತಡೆಯಬೇಕಾದರೆ 2 ಲಕ್ಷ ಹಣ ನೀಡಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಎಡಿಜಿಪಿಗೆ ವರದಿ ನೀಡುವುದಾಗಿ ಬೆದರಿಸಿದ್ದ ಎನ್ನಲಾಗಿದೆ. ಆನಂತರ, ಇದಕ್ಕೆ ಹೆದರಿದ ಆಶಾ ಸುರೇಶ್, ಮಾತುಕತೆ ನಡೆಸಿ ಬ್ಯಾಂಕ್ ಮೂಲಕ 1 ಲಕ್ಷ ಹಣ ನೀಡಿದ್ದರು. ಹಣ ಜಮೆಯಾಗುತ್ತಿದ್ದಂತೆ ಆರೋಪಿ ಸಂಪರ್ಕ ಕಡಿತಗೊಳಿಸಿದ್ದ. ಅನುಮಾನಗೊಂಡು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Similar News