ಮೂಡುಬಿದಿರೆ: ‘ಆಳ್ವಾಸ್’ನಲ್ಲಿ ಬೃಹತ್ ಇಫ್ತಾರ್ ಕೂಟ

Update: 2023-03-30 16:13 GMT

ಮೂಡುಬಿದಿರೆ, ಮಾ.30: ಇಲ್ಲಿನ ವಿದ್ಯಾಗಿರಿಯ ಆಳ್ವಾಸ್ ಆವರಣದಲ್ಲಿ ರಮಝಾನ್‌ನ ಬೃಹತ್ ಇಫ್ತಾರ್ ಕೂಟವು ಗುರುವಾರ ನಡೆಯಿತು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ವತಿಯಿಂದ ನಡೆಸಲಾದ 20 ವರ್ಷದ ಈ ಇಫ್ತಾರ್ ಕೂಟದಲ್ಲಿ ವಿದ್ಯಾರ್ಥಿಗಳಲ್ಲದೆ ಸ್ಥಳೀಯರ ಸಹಿತ ಸುಮಾರು 5000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಇಫ್ತಾರ್ ಬಳಿಕ ನಮಾಝ್‌ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಹಲವು ಬಗೆಯ ಹಣ್ಣು ಹಂಪಲು, ಸಮೋಸ, ಶರಬತ್ತುಗಳಲ್ಲದೆ ಮಟನ್ ಬಿರಿಯಾನಿ,  ಚಿಕನ್ ಮಸಾಲಾ, ಚಿಕನ್ ಕಬಾಬ್, ಸಲಾಡ್ ಗಳಿದ್ದವು. ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ  ಕಲ್ಪಿಸಲಾಗಿತ್ತು. ಅತ್ಯಂತ  ಶಿಸ್ತುಬದ್ಧವಾಗಿ ನಡೆದ ಇಫ್ತಾರ್ ಕೂಟಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ʼಸೌಹಾರ್ದ ಮೂಡುಬಿದಿರೆʼ ಇದರ ಅಧ್ಯಕ್ಷ ಅಬುಲ್ ಆಲಾ ಪುತ್ತಿಗೆ, ಸ್ಥಳೀಯ ಪ್ರಮುಖರಾದ ಸಲೀಂ ಹಂಡೇಲ್, ಬಿ. ಮೊಹಮ್ಮದ್‌, ಮುಸ್ತಫಾ ಭಾರತ್ construction, ಮೊಹಮ್ಮದ್ ಶರೀಫ್ ಇಂಜಿನಿಯರ್, ಮುಬೀನ್ ಅಹ್ಮದ್ ಚಾರ್ಕೋಲ್ಸ್ ಹೊಟೇಲ್, ಸಿ.ಎಚ್. ಗಫೂರ್ ಮತ್ತಿತರರು ಪಾಲ್ಗೊಂಡಿದ್ದರು.

"20 ವರ್ಷದ ಹಿಂದೆ ಕೇವಲ 200 ಮಂದಿಯಿಂದ ಆರಂಭವಾದ ಈ ಇಫ್ತಾರ್ ಕೂಟದಲ್ಲಿ ಇಂದು 5,000 ಮಂದಿ ಸೇರುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ. ಮುಸಲ್ಮಾನರ ಸಂಪ್ರದಾಯದಂತೆ ಇಫ್ತಾರ್ ಕೂಟ ಆಯೋಜಿಸಲಾಗಿದೆ. ದೇಶದ ಜನರು ಸೌಹಾರ್ದದಿಂದ ಬದುಕಬೇಕು. ಎಲ್ಲಾ ಭಾಷೆ, ಜಾತಿ, ಧರ್ಮದ ಜನರನ್ನು ಪರಸ್ಪರ ಗೌರವಿಸಬೇಕಿದೆ. ಅದಕ್ಕಗಿ ಈ ರೀತಿಯ ಕಾರ್ಯಕ್ರಮ ಆಯೋಜಿಸಿದ್ದೇವೆ. ನಮ್ಮ ಶಿಕ್ಷಣ ಸಂಸ್ಥೆಯ ಮಕ್ಕಳಲ್ಲದೆ ಅವರ ಹೆತ್ತವರು ಬಂದಿದ್ದಾರೆ. ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದರಿಂದ ನನಗೆ ಸಂತೊಷವಾಗಿದೆ".
- ಡಾ.ಎಂ. ಮೋಹನ್ ಆಳ್ವಾ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಸಂಸ್ಥೆ

"ಮಟನ್ ಬಿರಿಯಾನಿ, ಚಿಕನ್ ಮಸಾಲಾ, ಚಿಕನ್ ಕಬಾಬ್, ಸಲಾಡ್ ಸಹಿತ ಸುಮಾರು 5,000 ಮಂದಿಗಾಗುವಷ್ಟು ಆಹಾರವನ್ನು ತಯಾರಿಸಿದ್ದೆವು.  ವಿವಿಧ ಹಣ್ಣಿನ ಜ್ಯೂಸ್ ವ್ಯವಸ್ಥೆಯನ್ನೂ ಮಾಡಿದ್ದೆವು".
- ಎಂ.ಎಸ್. ಝೈನುದ್ದೀನ್, ಕ್ಯಾಟರಿಂಗ್ ವಹಿಸಿಕೊಂಡ ವ್ಯಕ್ತಿ

Similar News