3.60 ಕೋಟಿ ರೂ.ಗಳ ಸಾಮಗ್ರಿ ವಶ | ಬಿಜೆಪಿ ಸಂಭವನೀಯ ಅಭ್ಯರ್ಥಿ ವಿರುದ್ಧ ಕೃಷ್ಣ ಬೈರೇಗೌಡ ದೂರು

Update: 2023-03-30 17:49 GMT

ಬೆಂಗಳೂರು, ಮಾ.30: ಚುನಾವಣಾ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಂಭವನೀಯ ಅಭ್ಯರ್ಥಿ ಕೆ.ಮುನೇಂದ್ರ ಕುಮಾರ್ ವಿರುದ್ಧ ಸ್ಥಳೀಯ ಕಾಂಗ್ರೆಸ್ ಶಾಸಕ ಕೃಷ್ಣಬೈರೇಗೌಡ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಗುರುವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ತಾರತಮ್ಯದಿಂದ ಹಾಗೂ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಸಾಕ್ಷಿ ಸಮೇತ ದೂರು ಸಲ್ಲಿಸಲಾಗಿದೆ ಎಂದು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಲಂಚ ನೀಡಲು ಸಂಗ್ರಹಿಸಿಟ್ಟಿದ್ದ ಸುಮಾರು 3.60 ಕೋಟಿ ರೂ. ವೆಚ್ಚದ ಸಾಮಗ್ರಿಗಳನ್ನು ಕೇಂದ್ರ ಜಿಎಸ್ಟಿ ಅಧಿಕಾರಿಗಳು ದಾಳಿ ಮಾಡಿ ಜಪ್ತಿ ಮಾಡಿದ್ದಾರೆ. ಆ ಸಾಮಗ್ರಿಗಳ ಮೇಲೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಯ ಭಾವಚಿತ್ರ ಇದೆ. ಆದರೆ, ಯಾರೊ ಒಬ್ಬ ಜಿಎಸ್ಟಿ ಡೀಲರ್ ವಿರುದ್ಧ ಮಾತ್ರ ಪ್ರಕರಣ ದಾಖಲು ಮಾಡಲಾಗಿದೆ. ಆ ಜಾಗದ ಮಾಲಕನ ವಿರುದ್ಧವೂ ಪ್ರಕರಣ ದಾಖಲು ಮಾಡಿಲ್ಲ ಎಂದು ಅವರು ಆರೋಪಿಸಿದರು.

ಕಳೆದ ಐದು ದಿನಗಳಿಂದ ನಿರಂತರವಾಗಿ ನಮ್ಮ ಕ್ಷೇತ್ರದ ನೋಡಲ್ ಚುನಾವಣಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಜೊತೆ ಈ ವಿಚಾರವಾಗಿ ಮಾತನಾಡುತ್ತಿದ್ದೇನೆ. ಮತದಾರರಿಗೆ ಆಮಿಷ ಒಡ್ಡಲು ದಾಸ್ತಾನು ಮಾಡಿದ್ದವರ ವಿರುದ್ಧ ಯಾಕೆ ಪ್ರಕರಣ ದಾಖಲು ಮಾಡಿಲ್ಲ ಎಂಬುದಕ್ಕೆ ಈವರೆಗೆ ಉತ್ತರ ಸಿಕ್ಕಿಲ್ಲ ಎಂದು ಕೃಷ್ಣಬೈರೇಗೌಡ ಹೇಳಿದರು.

ಕಾಂಗ್ರೆಸ್ ನಾಯಕರಾದ ಈಶ್ವರ್ ಖಂಡ್ರೆ, ರೂಪಾ ಶಶಿಧರ್, ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಎಫ್‍ಐಆರ್ ದಾಖಲು ಮಾಡುವ ಚುನಾವಣಾಧಿಕಾರಿಗಳು, 3.60 ಕೋಟಿ ರೂ.ಮೌಲ್ಯದ ಸಾಮಗ್ರಿಗಳು ಸಿಕ್ಕಿದರೂ ಏನು ಕ್ರಮ ಕೈಗೊಳ್ಳದೆ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಮುನೇಂದ್ರ ಕುಮಾರ್ ಹೆಸರು ಎಫ್‍ಐಆರ್ ನಲ್ಲಿ ಇಲ್ಲ. ಬಿಜೆಪಿಯವರ ಹಾಗೂ ಮಂತ್ರಿಗಳ ಒತ್ತಡಕ್ಕೆ ಸಿಲುಕಿ, ಬಿಜೆಪಿಯ ಅಕ್ರಮಗಳನ್ನು ರಕ್ಷಣೆ ಮಾಡಲು ಅಧಿಕಾರಿಗಳು ಅವರ ಏಜೆಂಟ್‍ರಂತೆ ಕೆಲಸ ಮಾಡುತ್ತಿದ್ದಾರೆ. ಈ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದವರ ವಿರುದ್ಧ ಪ್ರಕರಣ ದಾಖಲು ಆಗಬೇಕು. ಅಲ್ಲದೆ, ತಾರತಮ್ಯ ಮಾಡುತ್ತಿರುವ ಚುನಾಣೆಗೆ ನಿಯೋಜಿತವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ನಮ್ಮ ದೂರನ್ನು ಆಲಿಸಿರುವ ಮುಖ್ಯ ಚುನಾವಣಾಧಿಕಾರಿ, ತಕ್ಷಣ ಈ ಪ್ರಕರಣದ ಕುರಿತು ಎಫ್‍ಐಆರ್ ಹಾಕಿ, ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧವು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಕೊಟ್ಟ ಮಾತಿನಂತೆ ಅವರು ನಡೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

Similar News