ಬೆಂಗಳೂರು| ಕಾರಿನೊಳಗೆ ಯುವತಿಯ ಅತ್ಯಾಚಾರ: ನಾಲ್ವರು ಆರೋಪಿಗಳ ಬಂಧನ

Update: 2023-03-31 06:05 GMT

ಬೆಂಗಳೂರು: ಯುವತಿಯನ್ನು ಕಾರಿನೊಳಗೆ ಎಳೆದೊಯ್ದು ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ನಾಲ್ವರು ಆರೋಪಿಗಳನ್ನು ನಗರದ ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸತೀಶ್, ವಿಜಯ್, ಶ್ರೀಧರ್ ಹಾಗೂ ಕಿರಣ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಮಾ.25ರ ರಾತ್ರಿ ಕೋರಮಂಗಲದ ನ್ಯಾಷನಲ್ ಗೇಮ್ಸ್ ಪಾರ್ಕ್​ನಲ್ಲಿ ಸಂತ್ರಸ್ತ ಯುವತಿ ಹಾಗೂ ಸ್ನೇಹಿತ ಕುಳಿತುಕೊಂಡಿದ್ದರು. ಅಲ್ಲಿಗೆ ಬಂದ ನಾಲ್ವರು ಆರೋಪಿಗಳು ಸ್ನೇಹಿತನನ್ನು ಬೆದರಿಸಿ ಕಳುಹಿಸಿದ್ದಾರೆ ಎನ್ನಲಾಗಿದೆ. ನಂತರ ಯುವತಿಯನ್ನು ಕಾರಿನಲ್ಲಿ ಎಳೆದೊಯ್ದು ನಗರದ ದೊಮ್ಮಲೂರು, ಇಂದಿರಾನಗರ, ಆನೇಕಲ್, ನೈಸ್ ರಸ್ತೆ ಸೇರಿದಂತೆ ಹಲವೆಡೆ ಸುತ್ತಾಟ ನಡೆಸಿ ಚಲಿಸುತ್ತಿದ್ದ ಕಾರಿನಲ್ಲಿಯೇ ಅತ್ಯಾಚಾರ ಎಸಗಿದ್ದಾರೆ‌ ಎಂದು ಆರೋಪಿಸಲಾಗಿದೆ.

ಅಲ್ಲದೆ, ರಾತ್ರಿಪೂರ್ತಿ ಸುತ್ತಾಡಿದ ನಂತರ ಬೆಳಗಿನ ಜಾವ 4 ಗಂಟೆಗೆ ಯುವತಿಯ ಮನೆಯ ಬಳಿ ರಸ್ತೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಆನಂತರ, ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮಾರ್ಚ್ 26 ರಂದು ದೂರು ನೀಡಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳ ಪೂರ್ವಾಪರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Similar News