ಉನ್ನತ ಶಿಕ್ಷಣದಲ್ಲಿ ಆಗಬೇಕಾದುದೇನು?

Update: 2023-03-31 06:37 GMT

►► ಸರಣಿ-7 | ಭಾಗ- 01

ಸ್ವಾತಂತ್ರ್ಯ ಬಂದ ವರ್ಷ 1947ರಲ್ಲಿ 20 ವಿಶ್ವವಿದ್ಯಾನಿಲಯಗಳಿದ್ದರೆ 1966ರ ಹೊತ್ತಿಗೆ ಅವುಗಳ ಸಂಖ್ಯೆ 64ಕ್ಕೆ ಹೆಚ್ಚಿತು. ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ 2019-20ರಲ್ಲಿ 1,043 ವಿವಿ ಮತ್ತು 40,026 ಪದವಿ ಕಾಲೇಜುಗಳು, 2021ರಲ್ಲಿ 1,113 ವಿವಿಗಳು, 43,796 ಪದವಿ ಕಾಲೇಜುಗಳಿವೆ. ಯಜಿಸಿ ಅಂತರ್ಜಾಲ ತಾಣದ ದತ್ತಾಂಶದ ಅನುಸಾರ ಜನವರಿ 2023ರ ವೇಳೆಗೆ 1,074 ವಿವಿಗಳಿವೆ. (460 ರಾಜ್ಯ, 56 ಕೇಂದ್ರೀಯ, 430 ಖಾಸಗಿ, 128 ಡೀಮ್ಡ್). 

ಕರ್ನಾಟಕದಲ್ಲಿ ಇತ್ತೀಚೆಗೆ ಘೋಷಿಸಿದ 7 ವಿವಿಗಳನ್ನು ಒಳಗೊಂಡಂತೆ 1 ಕೇಂದ್ರೀಯ, 41 ರಾಜ್ಯ ವಿವಿ, 24 ಖಾಸಗಿ ವಿವಿ, 11 ಡೀಮ್ಡ್ ವಿವಿಗಳಿವೆ. 1 ಸಾರ್ವಜನಿಕ -ಖಾಸಗಿ ಸಹಭಾಗಿತ್ವದ ವಿವಿಯಿದೆ. 2015-16ರಲ್ಲಿ 25 ಸಾರ್ವಜನಿಕ, 8 ಖಾಸಗಿ ವಿವಿಗಳಿದ್ದವು. ಕೇವಲ ಏಳು ವರ್ಷಗಳಲ್ಲಿ 16 ರಾಜ್ಯ ವಿವಿಗಳು 16 ಖಾಸಗಿ ವಿವಿಗಳು ಹೆಚ್ಚಾಗಿವೆ. 9 ರಾಷ್ಟ್ರೀಯ ಗಣ್ಯ ವಿವಿಗಳಿವೆ. ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆಯ ಅಂತರ್ಜಾಲ ತಾಣದ ದತ್ತಾಂಶದ ಪ್ರಕಾರ 430 ಸರಕಾರಿ ಪದವಿ ಕಾಲೇಜುಗಳಿವೆ. 321 ಖಾಸಗಿ ಅನುದಾನಿತ ಕಾಲೇಜುಗಳಿವೆ. ಅನುದಾನರಹಿತ ಖಾಸಗಿ ಪದವಿ ಕಾಲೇಜುಗಳ ಕುರಿತು ಅಥೆಂಟಕ್ ಮಾಹಿತಿ ಲಭ್ಯವಿಲ್ಲ. ಸಂಖ್ಯೆಯ ದೃಷ್ಟಿಯಿಂದ ಗಮನಾರ್ಹ ಹೆಚ್ಚಳವಾಗಿರುವುದು ನಿಜವಾದರೂ ಕೆಲವು ಅಪವಾದಗಳನ್ನು ಹೊರತುಪಡಿಸಿ ಒಟ್ಟಾರೆ ಶೈಕ್ಷಣಿಕ ಗುಣಮಟ್ಟದಲ್ಲಿ ಸಾಧನೆ ಕಳಪೆಯಾಗಿದೆ. ಇದು ಕಳವಳಕಾರಿ ಸಂಗತಿಯಾಗಿದೆ.

ಮುಖ್ಯ ಸವಾಲುಗಳು

1. ಜಾಗತೀಕರಣ, ಖಾಸಗೀಕರಣ, ಕೇಂದ್ರೀಕರಣ ಹಾಗೂ ಮತೀಯವಾದೀಕರಣ.
2. ಹಣಕಾಸಿನ ಅನುದಾನದಲ್ಲಿ ಕೊರತೆ.
3. ಸರಾಸರಿ ದಾಖಲಾತಿ ಪ್ರಮಾಣ.
4. ಗುಣಮಟ್ಟದ ಸಂಸ್ಥೆಗಳು, ಬೋಧನಾ ವಲಯದ ಗುಣಮಟ್ಟ, ವ್ಯಾಸಂಗಕ್ರಮ (ಪೆಡಗಾಜಿ) ಮತ್ತು ಸಂಶೋಧನೆಯ ಗುಣಮಟ್ಟ.
5. ಶಿಕ್ಷಕರ ಕೊರತೆ ಮತ್ತು ಉತ್ತರದಾಯಿತ್ವ.
6. ಮೂಲಭೂತ ಸೌಕರ್ಯ.
7. ದುರ್ಬಲ ನಾಯಕತ್ವ ಮತ್ತು ಆಡಳಿತ ಮತ್ತು ರಾಜಕೀಯ ಹಸ್ತಕ್ಷೇಪ.
8. ಉದ್ಯೋಗ ಮಾರುಕಟ್ಟೆಯೊಂದಿಗೆ ಸಾಪೇಕ್ಷ (ಆರ್ಗಾನಿಕ್) ಸಂಬಂಧವಿಲ್ಲದ ಶಿಕ್ಷಣ ವ್ಯವಸ್ಥೆ ಮುಂತಾದವುಗಳು

ಮೂಲಭೂತ ಜವಾಬ್ದಾರಿಗಳು ಮತ್ತು ಕರ್ತವ್ಯಗಳು

ತೊಂಭತ್ತರ ದಶಕದಲ್ಲಿ ಮುಕ್ತ ಮಾರುಕಟ್ಟೆ ವ್ಯವಸ್ಥೆಯ ‘ಉದಾರೀಕರಣ, ಖಾಸಗೀಕರಣ, ಜಾಗತೀಕರಣ’(ಎಲ್‌ಪಿಜಿ) ಜಾರಿಗೊಂಡ ನಂತರ ಅದರ ನೀತಿಗಳು ಉನ್ನತ ಶಿಕ್ಷಣ ವಲಯದ ಮೇಲೆ ಅತಿ ಹೆಚ್ಚು ದುಷ್ಪರಿಣಾಮ ಬೀರಿದೆ. ಜಾಗತಿಕ ಮಾರುಕಟ್ಟೆಯ ಮೇಲಾಟಕ್ಕೆ ಇಂಡಿಯಾ ಮುಕ್ತವಾಗಿ ತೆರೆದುಕೊಂಡ ಕಾರಣ ಮಾನವಿಕ ಶಿಕ್ಷಣಕ್ಕೆ ಬೇಡಿಕೆ ಕಡಿಮೆಯಾಗಿ ತಂತ್ರಜ್ಞಾನ ಆಧರಿತ ಶಿಕ್ಷಣ ಹೆಚ್ಚು ಜನಪ್ರಿಯಗೊಂಡಿತು. ಖಾಸಗಿ ವಿಶ್ವವಿದ್ಯಾನಿಲಯಗಳು ಅಣಬೆಗಳಂತೆ ಹುಟ್ಟಿಕೊಂಡವು. 

ಆ ಸಂದರ್ಭದಲ್ಲಿ ಭಾರತದ ಉನ್ನತ ಶಿಕ್ಷಣಕ್ಕೆ ಮಾರ್ಗಸೂಚಿ ಗಳನ್ನು ರೂಪಿಸಲು ಪುನನ್ಯ ಸಮಿತಿ, ಸ್ವಾಮಿನಾಥನ್ ಸಮಿತಿ, ಬಿರ್ಲಾ-ಅಂಬಾನಿ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳು ವಿಶ್ವವಿದ್ಯಾನಿಲಯಗಳು ಹಣಕಾಸಿನ ವ್ಯವಸ್ಥೆಯನ್ನು ಸ್ವತಃ ತಾವೇ ರೂಪಿಸಿಕೊಳ್ಳಬೇಕು, ಅವಶ್ಯಕತೆ ಉಂಟಾದರೆ ತನ್ನ ಸ್ಥಳವನ್ನು, ಸಭಾಂಗಣವನ್ನು, ತರಗತಿ ಕೊಠಡಿಗಳನ್ನು, ಆಟದ ಮೈದಾನವನ್ನು, ಕಂಪ್ಯೂಟರ್ ಸೇವೆಯನ್ನು, ಅತಿಥಿ ಗೃಹವನ್ನು, ಹಾಸ್ಟೆಲ್‌ಗಳನ್ನು ಬಾಡಿಗೆ ಕೊಡಬೇಕು ಮತ್ತು ಆ ಮೂಲಕ ಸಂಚಯಗೊಂಡ ಹಣವನ್ನು ಉನ್ನತ ಶಿಕ್ಷಣಕ್ಕೆ ವ್ಯಯಿಸಬೇಕು ಎಂದು ಪ್ರಸ್ತಾಪಿಸುತ್ತವೆ. ಜೊತೆಗೆ ನಿಯಮಿತವಾಗಿ ಬೋಧನಾ ಶುಲ್ಕ ಮತ್ತು ಇತರ ಶುಲ್ಕವನ್ನು ಹೆಚ್ಚಿಸಬೇಕು ಎಂದೂ ಹೇಳುತ್ತವೆ. ಬಿರ್ಲಾ-ಅಂಬಾನಿ ಸಮಿತಿಯು ತನ್ನ ವರದಿಯಲ್ಲಿ ಶಿಕ್ಷಣವು ಒಂದು ಲಾಭದಾಯಕ ಉದ್ಯಮ ಎಂದು ಹೇಳುತ್ತದೆ. ಉನ್ನತ ಶಿಕ್ಷಣವನ್ನು ಸಂಪೂರ್ಣ ಖಾಸಗೀಕರಣಗೊಳಿಸಬೇಕು, ಆ ಮೂಲಕ ಲಾಭದಾಯಕ ಮಾರುಕಟ್ಟೆಯನ್ನು ಸೃಷ್ಟಿಸಬೇಕು, ಈ ವಲಯವನ್ನು ಕಾರ್ಪೊರೇಟ್ ಸಂಸ್ಥೆಗಳು ನಿಯಂತ್ರಿಸಬೇಕು, ಬಳಕೆದಾರನೇ ಪಾವತಿದಾರ ಎನ್ನುವ ನೀತಿಯಡಿ ವಿದ್ಯಾರ್ಥಿ ಗಳಿಂದಲೇ ಶಿಕ್ಷಣದ ಸಂಪೂರ್ಣ ಶುಲ್ಕವನ್ನು ಭರಿಸಬೇಕು ಎಂದು ಹೇಳುತ್ತದೆ. 

► ಖಾಸಗೀಕರಣದ ಪರವಾಗಿರುವ ಮೇಲಿನ ಶಿಫಾರಸುಗಳನ್ನು ಮಾನ್ಯ ಮಾಡದೆ ಸಂವಿಧಾನದ ಶೆಡ್ಯೂಲ್‌7ರ ಸಮವರ್ತಿ ಪಟ್ಟಿಯಲ್ಲಿನ ರಾಜ್ಯದ ಹಕ್ಕುಗಳನ್ನು ಬಳಸಿಕೊಂಡು ಈವರೆಗಿನ ಸರಕಾರಗಳಿಂದ ಅನುಮೋದನೆಗೊಂಡ ಕ್ರೂನಿ ಬಂಡವಾಳಶಾಹಿಗಳ ಪರವಾದ ಶಿಫಾರಸುಗಳನ್ನು ತಿರಸ್ಕರಿಸಬೇಕು. 

►ಖಾಸಗಿ ವಿವಿಗಳ ಪ್ರಮಾಣ 51ರಷ್ಟು ಮತ್ತು ಸಾರ್ವಜನಿಕ ವಿವಿಗಳ ಪ್ರಮಾಣ ಶೇ.49ರಷ್ಟಿರುವ ಇಂದಿನ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಉನ್ನತ ಶಿಕ್ಷಣದಲ್ಲಿ ಸಾರ್ವಜನಿಕ ಹೂಡಿಕೆಯನ್ನು ಕಡಿತಗೊಳಿಸದೆ ಹೆಚ್ಚಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. 

► ಬಹುಸಂಖ್ಯೆಯಲ್ಲಿ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿದ್ದರೂ, ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಶೈಕ್ಷಣಿಕ ಗುಣಮಟ್ಟದಲ್ಲಿ, ಮೂಲಭೂತ ಸೌಕರ್ಯ ಕಲ್ಪಿಸುವುದರಲ್ಲಿ ಇಲ್ಲಿನ ಉನ್ನತ ಶಿಕ್ಷಣವು ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಜಾಗತಿಕ ಮಟ್ಟದ ಹೋಲಿಕೆಯಲ್ಲಿ ಅತ್ಯಂತ ಕೆಳ ಸ್ಥಾನದಲ್ಲಿದೆ. ಇದನ್ನು ಸರಿಪಡಿಸದೆ, ಗುಣಮಟ್ಟ ಹೆಚ್ಚಿಸದೆ ಬೇರೆ ಯಾವುದೇ ಬಗೆಯ ಹೊಸ ಕಾರ್ಯ ಯೋಜನೆಗಳನ್ನು, ಹೊಸ ನೀತಿ ನಿರೂಪಣೆಗಳನ್ನು ಪ್ರಸ್ತಾಪಿಸಬಾರದು. 

► ಮುಂದಿನ ಐದು ವರ್ಷಗಳವರೆಗೆ ಹೊಸ ವಿಶ್ವವಿದ್ಯಾನಿಲಯಗಳಿಗೆ (ಸಾರ್ವಜನಿಕ ಮತ್ತು ಖಾಸಗಿ) ಅನುಮತಿ ಕೊಡಬಾರದು. 

►ಈಗಿರುವ ರಾಜ್ಯ ವಿಶ್ವವಿದ್ಯಾನಿಲಯಗಳಲ್ಲಿನ ಬೋಧನೆ ಮತ್ತು ಕಲಿಕಾ ಗುಣಮಟ್ಟ, ವ್ಯಾಸಂಗಕ್ರಮ, ಸಂಶೋಧನೆಯ ಗುಣಮಟ್ಟವನ್ನು ಸುಧಾರಿಸುವುದು ಮೊತ್ತ ಮೊದಲ ಆದ್ಯತೆಯಾಗಿರಬೇಕು. ಇಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಮತ್ತು ಗುಣಾತ್ಮಕವಾಗಿ ಬಲಪಡಿಸಲು ತಜ್ಞರ ಸಮಿತಿ ನೇಮಕ ಮಾಡಲಾಗುವುದು ಮತ್ತು ಅದರ ಶಿಫಾರಸುಗಳ ಅನುಸಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

► ಆರ್ಥಿಕ ಕೊರತೆಯಿಂದ ದುಸ್ಥಿತಿಯಲ್ಲಿರುವ ವಿಶ್ವವಿದ್ಯಾನಿಲಯಗಳಿಗೆ ಸೂಕ್ತ ಹಣಕಾಸು ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ತೆಗೆದುಕೊಳ್ಳಬೇಕು.

► ಈ ಮುಕ್ತ ಮಾರುಕಟ್ಟೆ ವ್ಯವಸ್ಥೆಯ ಕಾರಣದಿಂದ ಶಿಕ್ಷಣದಲ್ಲಿ ಅಸಮಾನತೆ ಹೆಚ್ಚಾಗಿದೆ. ಸಾಮಾಜಿಕ ನ್ಯಾಯದ ಆಶಯಗಳಿಗೆ ಹಿನ್ನಡೆಯಾಗಿದೆ. ಜನ ಪ್ರಣಾಳಿಕೆಗೆ ಉನ್ನತ ಶಿಕ್ಷಣದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವುದು ಮುಖ್ಯ ಗುರಿಯಾಗಿದೆ. ಈಗಿರುವ ನವ ಉದಾರೀಕರಣ ವ್ಯವಸ್ಥೆಯಲ್ಲಿಯೇ ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸುವ ಕಷ್ಟದ ಸವಾಲನ್ನು ಎದುರಿಸಬೇಕಾಗಿದೆ.

Similar News