ಕಮಲಕ್ಕೆ ಗೆಲ್ಲುವ ವಿಶ್ವಾಸವಿರುವಲ್ಲಿ ಕಾಂಗ್ರೆಸ್ ಎದುರಿನ ಸವಾಲುಗಳೇನು?

Update: 2023-03-31 08:57 GMT

ಗೆಲುವಿನ ವಿಶ್ವಾಸದಲ್ಲಿರುವ ಬಿಜೆಪಿಯೆದುರು ಕಾಂಗ್ರೆಸ್ ಕಷ್ಟವೇನು? | ಟಿಕೆಟ್ ಹಂಚಿಕೆ ಗೊಂದಲ ಇಕ್ಕಟ್ಟಾಗಿ ಪರಿಣಮಿಸುವುದೆ ಕೈ ಪಾಲಿಗೆ? | ಕಳೆದ ಬಾರಿ ಕೈ ಬಿಟ್ಟು ಕಮಲ ಹಿಡಿದ ಮತದಾರನ ಮನಸ್ಸಲ್ಲೇನಿದೆ? | ಮಂಗಳೂರು ನಗರ ದಕ್ಷಿಣದಲ್ಲಿ ಹೇಗಿರಲಿದೆ ಕಡೇ ಘಳಿಗೆಯ ಆಟ?

►► ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ

ವೇದವ್ಯಾಸ್ ಕಾಮತ್

ಮೂಲತಃ ಆರೆಸ್ಸೆಸ್ ಕಾರ್ಯಕರ್ತರಾದ ವೇದವ್ಯಾಸ್ ಕಾಮತ್ ಪ್ರಸಕ್ತ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ. ಬ್ಯಾಂಕಿಂಗ್ ಕ್ಷೇತ್ರ, ಸಮಾಜಸೇವಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬಾರಿಯೂ ಯಾವ ಪೈಪೋಟಿಯಿಲ್ಲದೆ ಬಿಜೆಪಿಯಿಂದ ಇವರೇ ಅಭ್ಯರ್ಥಿ.

ದಕ್ಷಿಣ ಕನ್ನಡ ಜಿಲ್ಲೆಯ ಹೃದಯಭಾಗ ಎಂದೇ ಗುರುತಿಸಲ್ಪಟ್ಟಿದೆ, ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರ. ಪ್ರಮುಖ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಂದ ಕೂಡಿರುವ ಇದು ಕಾಂಗ್ರೆಸ್ ಪ್ರಾಬಲ್ಯದ ಕ್ಷೇತ್ರವಾಗಿತ್ತು. ಈಗ ಕೋಮು ಧ್ರುವೀಕರಣದ ಪರಿಣಾಮ ಬಿಜೆಪಿಯ ಶಕ್ತಿ ಕೇಂದ್ರವಾಗಿದೆ.
1952ರಿಂದ 1972ರವರೆಗೆ ಈ ಕ್ಷೇತ್ರವನ್ನು ‘ಮಂಗಳೂರು-1’ ಎಂದು ಗುರುತಿಸಲಾಗಿತ್ತು. ಆ ಬಳಿಕ ‘ಮಂಗಳೂರು’ ಕ್ಷೇತ್ರವಾಗಿ ಗುರುತಿಸಲ್ಪಟ್ಟಿತು. 2008ರಲ್ಲಿ ‘ಮಂಗಳೂರು ನಗರ ದಕ್ಷಿಣ’ ಕ್ಷೇತ್ರವಾಗಿ ದಾಖಲಿಸಲ್ಪಟ್ಟಿತು.

ಚುನಾವಣಾ ಇತಿಹಾಸ
ಈ ಕ್ಷೇತ್ರಕ್ಕೆ ನಡೆದ 15 ಚುನಾವಣೆಗಳಲ್ಲಿ ಕಾಂಗ್ರೆಸ್ 9 ಬಾರಿ ಮತ್ತು ಬಿಜೆಪಿ 6 ಬಾರಿ ಗೆದ್ದಿದೆ. ಒಬ್ಬರು ಶಾಸಕಿಯೂ ಇದ್ದರು. 1957ರಿಂದ 6 ಚುನಾವಣೆಗಳಲ್ಲಿ ಸತತ ಗೆಲುವು ಕಂಡಿದ್ದ ಕಾಂಗ್ರೆಸ್ ಮೊದಲ ಬಾರಿಗೆ ಹಿನ್ನಡೆ ಅನುಭವಿಸಿದ್ದು 1983ರಲ್ಲಿ ಬಿಜೆಪಿಯ ಧನಂಜಯ ಕುಮಾರ್ ಗೆಲುವು ಸಾಧಿಸುವುದರೊಂದಿಗೆ. ಅದಾದ ಬಳಿಕ ಮತ್ತೆರಡು ಗೆಲುವುಗಳನ್ನು ಕಂಡ ಕಾಂಗ್ರೆಸ್ 1994ರಲ್ಲಿ ಮತ್ತೆ ಸೋಲುಂಡಿತು. ಆಗ ಗೆದ್ದಿದ್ದು ಬಿಜೆಪಿಯ ಯೋಗೀಶ್ ಭಟ್. ಬಳಿಕ ಅವರು ಸತತವಾಗಿ 1999, 2004, 2008ರಲ್ಲಿ ಗೆದ್ದರು. 1999ರಲ್ಲಿ ಕಾಂಗ್ರೆಸ್ ಪಕ್ಷದ ಬ್ಲೇಸಿಯಸ್ ಡಿಸೋಜ, 2004ರಲ್ಲಿ ಲ್ಯಾನ್ಸಿಲಾಟ್ ಪಿಂಟೋ, 2008ರಲ್ಲಿ ಐವನ್ ಡಿ’ಸೋಜರನ್ನು ಕಣಕ್ಕಿಳಿಸಿದರೂ ಗೆಲ್ಲಲಾಗಲಿಲ್ಲ. 2013ರಲ್ಲಿ ಯೋಗೀಶ್ ಭಟ್ ಅವರನ್ನು ಸೋಲಿಸಿದ ನಿವೃತ್ತ ಕೆಎಎಸ್ ಅಧಿಕಾರಿ ಕಾಂಗ್ರೆಸ್‌ನ ಜೆ.ಆರ್.ಲೋಬೋ ಶಾಸಕರಾದರು. 2018ರಲ್ಲಿ ಲೋಬೋರನ್ನು ಸೋಲಿಸಿದ ಬಿಜೆಪಿಯ ವೇದವ್ಯಾಸ್ ಕಾಮತ್ ಶಾಸಕರಾಗಿದ್ದಾರೆ.

ಬಿಜೆಪಿಗೆ ಗೆಲುವಿನ ವಿಶ್ವಾಸ
ಒಂದೆಡೆ ಕಳೆದ ಬಾರಿಯ ಗೆಲುವು ಮತ್ತು ಹಿಂದುತ್ವದ ನೆಲೆಯಾಗಿ ಕ್ಷೇತ್ರ ಬದಲಾಗುತ್ತಿರುವುದು ಇವೆಲ್ಲವೂ ಬಿಜೆಪಿಯ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿರುವ ಅಂಶಗಳಾಗಿವೆ. ಏನೇ ಅಂದರೂ ಕಡೇ ಘಳಿಗೆಯಲ್ಲಿ ಕಮಲದ ಪರ ಅಲೆಯಿರುತ್ತದೆ ಎಂದೇ ಹೇಳಲಾಗುತ್ತದೆ.

ವೇದವ್ಯಾಸ್ ಕಾಮತ್ ಹಿಂದುತ್ವ ಸಂಘಟನೆಯಲ್ಲಿ ಪ್ರಬಲರಾಗಿದ್ದರೂ ಇತರರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಧೋರಣೆ ತೋರಿಸುವವರೆಂಬುದೂ ಅವರ ಪಾಲಿನ ಪ್ಲಸ್ ಪಾಯಿಂಟ್ ಎನ್ನಲಾಗುತ್ತದೆ. ಇತರ ಕೋಮಿನ ವಿರೋಧಿಯಂತೆ ಅವರೆಂದೂ ಬಹಿರಂಗವಾಗಿ ತೋರಿಸಿಕೊಂಡಿಲ್ಲ, ಎಲ್ಲರೊಡನೆ ವಿಶ್ವಾಸದಿಂದಲೇ ಇದ್ದಾರೆ ಎಂಬುದು ಅವರ ಬಗೆಗೆ ಕೇಳಿಬರುವ ಮಾತು.

ಕಾಂಗ್ರೆಸ್ ಟಿಕೆಟ್‌ಗೆ ಪೈಪೋಟಿ
ಬಿಕ್ಕಟ್ಟು ಇರುವುದು ಕಾಂಗ್ರೆಸ್ ಎದುರಿಗೆ. 1957, 1962, 1967ರಲ್ಲಿ ಕಾಂಗ್ರೆಸ್ ಕೊಂಕಣಿಗರಿಗೆ ಟಿಕೆಟ್ ನೀಡಿತ್ತು. 1972ರಿಂದ 2018ರವರೆಗೆ ನಡೆದ 11 ಚುನಾವಣೆಗಳಲ್ಲೂ ಕ್ರೈಸ್ತರಿಗೆ ಟಿಕೆಟ್ ನೀಡಿದೆ. ಆ ಪೈಕಿ 5 ಬಾರಿ ಕ್ರೈಸ್ತ ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ಮಧ್ಯೆ ಬಿಲ್ಲವ, ಬಂಟ, ಮುಸ್ಲಿಮ್ ಸಮುದಾಯಕ್ಕೂ ಪ್ರಾತಿನಿಧ್ಯ ಸಿಗಬೇಕೆಂಬ ಬೇಡಿಕೆ ಕಾಂಗ್ರೆಸ್ ವಲಯದಲ್ಲಿದೆ.

ಮಾಜಿ ಶಾಸಕರಾದ ಜೆ.ಆರ್.ಲೋಬೋ, ಐವನ್ ಡಿ’ಸೋಜ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾರ್ಪೊರೇಟರ್ ಎ.ಸಿ. ವಿನಯರಾಜ್, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಕಾಂಗ್ರೆಸ್ ಮುಖಂಡರಾದ ಮೆರಿಲ್ ರೇಗೋ, ಲಾರೆನ್ಸ್ ಡಿ’ಸೋಜ ಈಗಾಗಲೇ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಲಿದೆ ಎಂಬುದು ಕುತೂಹಲ ಹುಟ್ಟಿಸಿದೆ. 2018ರಲ್ಲಿ ಬಿಜೆಪಿ ಗೆದ್ದಿದ್ದರೂ ಈ ಬಾರಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ಸೇರಿಸಲು ಕಾಂಗ್ರೆಸ್ ಯಾವ ತಂತ್ರಗಾರಿಕೆ ಹೂಡಲಿದೆ ಎಂಬುದೂ ಗಮನಾರ್ಹವಾಗಿದೆ.

ಕ್ರೈಸ್ತರಿಗೊ ಬಿಲ್ಲವರಿಗೊ?
ಮಂಗಳೂರಿನ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಬಂಟರ ಪ್ರಾಬಲ್ಯವಿದೆ. ಎರಡು ಕ್ಷೇತ್ರಗಳಲ್ಲಿ ಮುಸ್ಲಿಮ್ ಸಮುದಾಯದ ಪ್ರಾಬಲ್ಯವಿದೆ. ಒಂದು ಮೀಸಲು ಕ್ಷೇತ್ರವಿದೆ. ಇನ್ನುಳಿದ ಎರಡು ಕ್ಷೇತ್ರಗಳಾದ ಬೆಳ್ತಂಗಡಿ ಮತ್ತು ಮಂಗಳೂರು ನಗರ ದಕ್ಷಿಣದಲ್ಲಿ ಬಿಲ್ಲವರ ಪ್ರಾತಿನಿಧ್ಯಕ್ಕೆ ಹೆಚ್ಚಿನ ಒತ್ತಾಯವಿದೆ. ಜೊತೆಗೆ ಹಿಂದುತ್ವದೆದುರು ಗೆಲ್ಲಬೇಕಾದರೆ ಬಿಲ್ಲವರಿಗೆ ಟಿಕೆಟ್ ಕೊಟ್ಟರೆ ಮಾತ್ರ ಸಾಧ್ಯ ಎಂಬ ಅಭಿಪ್ರಾಯವೂ ಇದೆ. ಹೀಗಾಗಿ ಈ ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ರಣತಂತ್ರ ಬದಲಾಯಿಸಿ ಬಿಲ್ಲವ ಅಭ್ಯರ್ಥಿಯೊಬ್ಬರಿಗೆ ಮಣೆ ಹಾಕಲಿದೆಯೇ ಎಂದು ಕಾದು ನೋಡಬೇಕಿದೆ.

ಈ ಕ್ಷೇತ್ರದಲ್ಲಿ ಬಿಲ್ಲವರ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಮತ್ತು ಬಿಜೆಪಿ ವಿರುದ್ಧ ದನಿಯೆತ್ತುವ ಪದ್ಮರಾಜ್ ಆರ್. ಕಾಂಗ್ರೆಸ್ ಜೊತೆಗೆ ಗುರುತಿಸಿಕೊಳ್ಳುತ್ತಿದ್ದಾರೆ. ವಕೀಲರಾದ ಅವರು ಬಿಜೆಪಿಗೆ ಪ್ರಬಲ ಪೈಪೋಟಿಯೊಡ್ಡಬಲ್ಲ ಅಭ್ಯರ್ಥಿಯಾಗಬಲ್ಲರು ಎಂಬ ಲೆಕ್ಕಾಚಾರವಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪದ್ಮರಾಜ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿಲ್ಲ. ಕಾಂಗ್ರೆಸ್ ಸದಸ್ಯತ್ವವನ್ನೂ ಪಡೆದಿಲ್ಲ. ಇನ್ನು ಕ್ರೈಸ್ತರ ಖೋಟಾದ ಸೀಟನ್ನು ಕಾಂಗ್ರೆಸ್ ಅಷ್ಟು ಸುಲಭವಾಗಿ ಬಿಟ್ಟು ಕೊಡುತ್ತಾ ಅನ್ನೋದು ಪ್ರಶ್ನೆ. ಬೆಂಗಳೂರಿನ ಸರ್ವಜ್ಞನಗರ ಹಾಗೂ ಮಂಗಳೂರು ದಕ್ಷಿಣಗಳಲ್ಲಿ ಮಾತ್ರ ಕ್ರೈಸ್ತರಿಗೆ ಕಾಂಗ್ರೆಸ್ ಟಿಕೆಟ್ ಕೊಡುತ್ತಾ ಬಂದಿದೆ. ಕೊನೆಗೆ ಕ್ರೈಸ್ತರಿಗೇ ಕೊಡುವುದು ನಿರ್ಧಾರವಾದಲ್ಲಿ ಲೋಬೋ ಅವರಿಗೆ ಸಿಗಬಹುದು ಎಂಬ ಮಾತುಗಳಿವೆ. ಅಂತಿಮ ತೀರ್ಮಾನ ಏನಿರಲಿದೆ ಎಂಬುದು ಕುತೂಹಲ ಕೆರಳಿಸಿದೆ. ಶನಿವಾರ ಪ್ರಕಟವಾದ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಈ ಕ್ಷೇತ್ರದ ಹೆಸರಿಲ್ಲ.

ಅಭಿವೃದ್ಧಿ ವಿಚಾರ

‘ಸ್ಮಾರ್ಟ್ ಸಿಟಿ’ಯ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರದ ಕೋಟ್ಯಂತರ ರೂ. ಅನುದಾನವನ್ನು ಈ ಕ್ಷೇತ್ರದ ಅಭಿವೃದ್ಧಿಗಾಗಿ ಬಳಸಲಾಗುತ್ತದೆ. ಈ ಕ್ಷೇತ್ರ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿಯೂ ತುಂಬಾ ಮುಂದುವರಿದಿದೆ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಆದರೆ, ಅಭಿವೃದ್ಧಿ ವಿಷಯದಲ್ಲಿ ಪರಸ್ಪರ ಕಾಲೆಳೆಯುವುದು, ಆರೋಪ-ಪ್ರತ್ಯಾರೋಪ ಸಹಜ ಎಂಬಂತಾಗಿದೆ.

ನಗರದ ಅನೇಕ ಕಡೆ ರಸ್ತೆಗಳನ್ನು ಅಗೆದಿಡಲಾಗಿದೆ. ಕಾಮಗಾರಿಗಳು ಅಪೂರ್ಣವಾಗಿವೆ ಎಂಬ ಆರೋಪವನ್ನು ವಿಪಕ್ಷ ಸದಸ್ಯರು ಮಾಡುತ್ತಿದ್ದಾರೆ. ಫುಟ್‌ಪಾತ್ ಸಮಸ್ಯೆಯೂ ಇಲ್ಲಿ ತಪ್ಪಿದ್ದಲ್ಲ. ನಗರ ಕೇಂದ್ರೀಕೃತ ಯೋಜನೆಗಳು ಜಾರಿಗೊಳ್ಳುತ್ತಿದೆ. ವಾಹನಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದ್ದು, ಪಾರ್ಕಿಂಗ್ ಸಮಸ್ಯೆಗೆ ಪರಿಹಾರವೇ ಇಲ್ಲ ಎಂಬಂತಾಗಿದೆ. ದಿನನಿತ್ಯ ಸಂಚಾರ ದಟ್ಟಣೆ ಸಾಮಾನ್ಯವಾಗಿದ್ದು, ಸ್ಕೈವಾಕ್ ಬೇಕೆಂಬ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಪಡೀಲ್‌ನಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ನಗರದ ಖಾಸಗಿ ಸಿಟಿ ಮತ್ತು ಸರ್ವಿಸ್ ಬಸ್ ನಿಲ್ದಾಣವನ್ನು ಪಂಪ್‌ವೆಲ್‌ಗೆ ಸ್ಥಳಾಂತರಿಸುವ ಪ್ರಕ್ರಿಯೆ ಕೂಡ ನನೆಗುದಿಗೆ ಬಿದ್ದಿದೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ತ್ಯಾಜ್ಯ ವಿಲೇವಾರಿಯಾಗದೆ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ಸ್ಮಾರ್ಟ್ ಸಿಟಿ ಹೀಗೂ ಇರುತ್ತಾ ಎಂದು ಜನ ಕೇಳುವಂತಾಗಿತ್ತು.

ಹೀಗೆ ಅಭಿವೃದ್ಧಿ ವಿಚಾರವಾಗಿ ಅಪಸ್ವರಗಳು ಇದ್ದರೂ, ಅಂತಿಮವಾಗಿ ಈ ಕ್ಷೇತ್ರದಲ್ಲಿ ಬಲ ಸಿಗುವುದು ಹಿಂದುತ್ವದ ವಿಚಾರಕ್ಕೆ ಎಂಬ ವಿಚಾರವೂ ಸತ್ಯಕ್ಕೆ ದೂರವಾದುದಲ್ಲ. ಆದರೆ ಕಾಂಗ್ರೆಸನ್ನೂ ಗೆಲ್ಲಿಸುತ್ತ ಬಂದ ಈ ಕ್ಷೇತ್ರದ ಜನತೆ ಕಳೆದ ಬಾರಿ ಮತ್ತೆ ಕಮಲಕ್ಕೆ ಅವಕಾಶ ಮಾಡಿದ್ದರು. ಈ ಬಾರಿ ಅವರ ತೀರ್ಮಾನವೇನಿರಲಿದೆ ಎಂಬುದು ಅಖಾಡದ ಬಗೆಗಿನ ಆಸಕ್ತಿಯನ್ನು ಹೆಚ್ಚಿಸಿದೆ.

Similar News