ಒರಿಸ್ಸಾದ ಸಾಂಪ್ರದಾಯಿಕ ಕಲೆ ‘ಪಟಚಿತ್ರ’ ಉಡುಪಿಗೆ ಪರಿಚಯಿಸುವ ಪ್ರಯತ್ನ

Update: 2023-03-31 11:48 GMT

ಉಡುಪಿ, ಮಾ.31: ಭಾವನಾ ಫೌಂಡೇಶನ್, ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸುವ ಜನಪದ ದೇಶೀಯ ಕಲೆಗಳ  ಸರಣಿ ಕಾರ್ಯಾಗಾರದಲ್ಲಿ ಒರಿಸ್ಸಾ ರಾಜ್ಯದಲ್ಲಿ ಬಳಕೆಯಲ್ಲಿರುವ ಭಾರತೀಯ ವಿಶಿಷ್ಟ ಸಾಂಪ್ರದಾಯಿಕ ಕಲೆ ‘ಪಟಚಿತ್ರ’ವನ್ನು ಉಡುಪಿಗೆ ಪರಿಚಯಿಸುವುದರ ಮೂಲಕ ಕಲಾಸಕ್ತರು ಅದರ ರಚನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡ ಲಾಗುತ್ತಿದೆ.

ಬಡಗುಪೇಟೆಯ ಭಾಸ ಗ್ಯಾಲರಿಯಲ್ಲಿ ಹಮ್ಮಿಕೊಂಡಿರುವ ಬಟ್ಟೆ, ಪೇಪರ್ ಮೊದಲಾದವುಗಳಲ್ಲಿ ರಚಿಸಲ್ಪಡುವ ಪಟಚಿತ್ರ ಹಾಗೂ ತಾಳೆಯೋಲೆಯ ಮೇಲೆ  ತಾಳ ಪಟಚಿತ್ರ ಕಾರ್ಯಾಗಾರವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದೆ ಒರಿಸ್ಸಾದ ಗೀತಾಂಜಲಿ ದಾಸ್ ನಡೆಸಿಕೊಡುತ್ತಿದ್ದಾರೆ. ಇವರು ಪಟಚಿತ್ರಗಳ ಪಾರಂಪರಿಕ ರಚನಾ ಕ್ರಮ, ತಾಂತ್ರಿಕತೆಗಳನ್ನು ಆಸಕ್ತರಿಗೆ ಕಲಿಸಿ ಕೊಡುತ್ತಿದ್ದಾರೆ.

ಒರಿಸ್ಸಾದ ಪುರಿಯ ಬಳಿಯ ದಂಡಸಾಹಿಯ ಕಲಾವಿದೆ ಗೀತಾಂಜಲಿ ದಾಸ್, ಪಟಚಿತ್ರ ಕಲಾವಿದ ದಿವಂಗತ ಪ್ರಣಬ್ ನಾರಾಯಣ್ ದಾಸ್ ಅವರ ಪತ್ನಿ. ಇವರು ಪಟಚಿತ್ರ ಕಲಾಪ್ರಕಾರಕ್ಕಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ತನ್ನ ಅಜ್ಜ ಬ್ರಜ್ ಕಿಶೋರ್ ಪ್ರದಾನ್ ಅವರಿಂದ ಈ ಕಲೆಯನ್ನು ತಮ್ಮ 10ನೇ ವಯಸ್ಸಿನಲ್ಲಿ ಕಲಿತುಕೊಂಡರು.

‘ಈ ಕಲೆಯನ್ನು ನೈಸರ್ಗಿಕವಾಗಿ ಸಿಗುವ ಬಣ್ಣಗಳನ್ನು ಬಳಸಿ ರೇಷ್ಮೆ, ಹತ್ತಿಯ ಬಟ್ಟೆ ಹಾಗೂ ಕಾಗದ ಮೇಲೆ ರಚಿಸಲಾಗುತ್ತದೆ. ರಾಮಯಣ ಸೇರಿದಂತೆ ಪೌರಾಣಿಕ ನಿರೂಪಣೆಗಳು, ಜಾನಪದೀಯ ಕಥೆಗಳು ಹಾಗೂ ಪರಿಸರ ಚಿತ್ರಗಳು ಈ ಕಲಾಪ್ರಕಾರದಲ್ಲಿ ಅಭಿವ್ಯಕ್ತಗೊಲಿಸಲಾಗುತ್ತದೆ. ಈ ಕಲೆಗೆ ದೇಶ ವಿದೇಶಗಳಲ್ಲೂ ಬಹಳಷ್ಟು ಬೇಡಿಕೆ ಇದೆ’ ಎಂದು ಗೀತಾಂಜಲಿ ದಾಸ್ ತಿಳಿಸಿದರು.

ಇದೊಂದು ಸಾಕಷ್ಟು ವಿವರಣಾತ್ಮಕವಾದ ಮತ್ತು ಸಂಕೀರ್ಣತೆಯಿಂದ ಕೂಡಿದ ಕಲಾಪ್ರಕಾರವಾಗಿದ್ದು, ಕೆಲ ವೊಂದು ಚಿತ್ರ ರಚನೆಗೆ ಎರಡು ತಿಂಗಳ  ಕಾಲಾವಕಾಶ ಬೇಕಾಗುತ್ತದೆ. ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಈ ಕಲಾ ಪ್ರಕಾರಗಳನ್ನು ಬಳಸಲಾಗುತ್ತದೆ. ನಾನು ದೆಹಲಿ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಈ ಪಟಚಿತ್ರ ಕಲಾಕೃತಿಗಳನ್ನು ಪ್ರದರ್ಶಿಸಿದ್ದೇನೆ’ ಎಂದು ಅವರು ಹೇಳಿದರು.

ಕಾರ್ಯಾಗಾರವನ್ನು ವೆಂಟನಾ ಫೌಂಡೇಶನ್‌ನ ಟ್ರಸ್ಟಿ ರವೀಂದ್ರ ಕೆ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಾಫಿಕಲ್ ಆರ್ಟ್ಸ್ ಮತ್ತು ಸೈನ್ಸ್‌ನ ಮುಖ್ಯಸ್ಥ ಪ್ರೊ. ವರದೇಶ ಹಿರೇಗಂಗೆ, ಇಂಟ್ಯಾಕ್ ಮಂಗಳೂರು ವಿಭಾಗದ ಸಂಚಾಲಕ ಆರ್ಕಿಟೆಕ್ಟ್ ಸುಭಾಶ್‌ಚಂದ್ರ ಬಸು, ಭಾವನಾ ಫೌಂಡೇಶನ್‌ನ ನಿರ್ದೇಶಕ ಯಕ್ಷಗುರು ಹಾವಂಜೆ ಮಂಜುನಾಥಯ್ಯ ಉಪಸ್ಥಿತರಿದ್ದರು. ಕಾರ್ಯಾ ಗಾರದ ಸಂಯೋಜಕ ಜನಾರ್ದನ ಹಾವಂಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಇಂದು ಮತ್ತು ನಾಳೆ ಪಟಚಿತ್ರ ಮತ್ತು ಎ.2ರಂದು ತಾಳೆ ಪಟಚಿತ್ರ ಕಾರ್ಯಾಗಾರ ನಡೆಯಲಿದ್ದು, ಪ್ರತಿನಿತ್ಯ ಸಂಜೆ 4ರಿಂದ 7ರ ತನಕ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

Similar News