ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಎಪ್ರಿಲ್ 11ರ ವರೆಗೆ ನ್ಯಾಯಾಂಗ ಬಂಧನ

Update: 2023-04-01 14:58 GMT

ಬೆಂಗಳೂರು, ಎ.1: ಲಂಚ ಸ್ವೀಕರ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರನ್ನು ಎಪ್ರಿಲ್ 11 ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ  ಆದೇಶ ಪ್ರಕಟಿಸಿದೆ.

ಮಾ.27ರಂದು ನೆಲಮಂಗಲದಲ್ಲಿ ವಿರೂಪಾಕ್ಷಪ್ಪ ಮಾಡಾಳ್ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಆನಂತರ, ಕೋರ್ಟ್ ಸೂಚನೆಯಂತೆ ಲೋಕಾಯುಕ್ತ ಕಸ್ಟಡಿಯಲ್ಲಿದ್ದ ಅವರ ಅವಧಿ ಶನಿವಾರ ಪೂರ್ಣಗೊಂಡ ಹಿನ್ನೆಲೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ  ಮುಂದೆ ಹಾಜರುಪಡಿಸಿದರು. ಬಳಿಕ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಎ.11 ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿತು. ಜತೆಗೆ, ಎಪ್ರಿಲ್ 6 ರಂದು ಜಾಮೀನು ಅರ್ಜಿ ವಿಚಾರಣೆ ಮುಂದೂಡಿ ನ್ಯಾಯಾಲಯ ಆದೇಶಿಸಿದೆ.

ಇದೇ ವೇಳೆ ಆರೋಗ್ಯ ಸರಿಯಿಲ್ಲದ ಕಾರಣ ಜೈಲಿನಲ್ಲಿ ಮನೆ ಊಟ, ಬಿಸಿ ನೀರು ನೀಡುವಂತೆ ಮಾಡಾಳ್ ಪರ ವಕೀಲರು ಮನವಿ ಮಾಡಿದರು. ಆರೋಗ್ಯ ಸರಿಯಿಲ್ಲದ ಕಾರಣ ಮನೆಯೂಟ ನೀಡಬೇಕು ಎಂದು ಉಲ್ಲೇಖ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ, ಜೈಲಿನ ನಿಯಮದ ಅನ್ವಯವೇ ಆಹಾರ ಒದಗಿಸುತ್ತಾರೆ ಎಂದು ಉಲ್ಲೇಖಿಸಿದರು.
ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಪೊಲೀಸ್ ವಾಹನದಲ್ಲಿ ಲೋಕಾಯುಕ್ತ ಅಧಿಕಾರಿಗಳು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದರು. 

ಏನಿದು ಪ್ರಕರಣ?: ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ಕಚ್ಚಾ ವಸ್ತುಗಳ ಪೂರೈಕೆ ಸಂಬಂಧ ಟೆಂಡರ್ ವಿಚಾರವಾಗಿ ಟೆಂಡರ್ ಆಕಾಂಕ್ಷಿಗಳಿಂದ ಶಾಸಕ ವಿರೂಪಾಕ್ಷಪ್ಪ ಮಾಡಳ್ ಅವರ ಮಗ ಪ್ರಶಾಂತ್ ಮಾಡಾಳ್ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದಾಗ ಕೋಟ್ಯಾಂತರ ರೂಪಾಯಿ ನಗದು ಪತ್ತೆಯಾಗಿತ್ತು. ಆನಂತರ ತನಿಖೆ ಮುಂದುವರೆಸಿದ ಲೋಕಾಯುಕ್ತ ವಿರೂಪಾಕ್ಷಪ್ಪ ಮಾಡಾಳ್‍ನನ್ನು ಬಂಧಿಸಿದ್ದರು.

Similar News