ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಕಗ್ಗಂಟು: ಖರ್ಗೆ ಭೇಟಿ ಮಾಡಿದ ಡಿ.ಕೆ.ಶಿವಕುಮಾರ್

Update: 2023-04-01 13:44 GMT

ಬೆಂಗಳೂರು, ಎ. 1: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಅಂತಿಮಗೊಳಿಸುವ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಗರದಲ್ಲಿ ಸಮಾಲೋಚನೆ ನಡೆಸಿದ್ದಾರೆ. 

ಶನಿವಾರ ಡಿ.ಕೆ.ಶಿವಕುಮಾರ್, ಬೆಂಗಳೂರಿನ ಸದಾಶಿವನಗರದಲ್ಲಿನ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೇ ಖುದ್ದು ಭೇಟಿ ಮಾಡಿ ಚರ್ಚೆ ನಡೆಸಿದರು. ಆದರೆ ಅಧಿಕೃತವಾಗಿ ಯಾವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಸದ್ಯಕ್ಕೆ ತಿಳಿದು ಬಂದಿಲ್ಲ.

ಈಗಾಗಲೇ ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಇದೀಗ ಉಳಿದ 100 ಕ್ಷೇತ್ರಗಳ ಹೆಸರುಗಳನ್ನು ಅಂತಿಮಗೊಳಿಸಬೇಕಾಗಿದೆ. ಈ ನಡುವೆ ಸುಮಾರು 35 ಕ್ಷೇತ್ರಗಳಿಗೆ ಓರ್ವ ಅಭ್ಯರ್ಥಿಯ ಹೆಸರು ಫೈನಲ್ ಆಗಿದೆ. ಉಳಿದ ಕ್ಷೇತ್ರಗಳ ಆಕಾಂಕ್ಷಿಗಳು ಹೆಚ್ಚಿರುವ ಕಾರಣ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ.

ವಿಶೇಷವಾಗಿ ಮಂಗಳೂರು ಉತ್ತರ, ಪುತ್ತೂರು, ಕಲಘಟಗಿ, ತೀರ್ಥಹಳ್ಳಿ, ದಾಸರಹಳ್ಳಿ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಜಟಿಲಗೊಂಡಿದೆ. ಪುತ್ತೂರಿನಲ್ಲಿ ಡಿಕೆಶಿ ಬೆಂಬಲಿತರ ಅಶೋಕ್ ರೈಗೆ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತವಾಗಿದೆ. ಮಂಗಳೂರು ಉತ್ತರದಲ್ಲೂ ಮೊಯ್ದಿನ್ ಭಾವಾ ಹಾಗೂ ಇನಾಯತ್ ಅಲಿ ನಡುವೆ ಪೈಪೋಟಿ ಏರ್ಪಟ್ಟಿದೆ.

ನರಗುಂದಲ್ಲಿ ಕೋನರೆಡ್ಡಿ ಹಾಗೂ ವಿನೋದ್ ಅಸೂಟಿ, ಕಲಘಟಗಿಯಲ್ಲಿ ಸಂತೋಷ್ ಲಾಡ್ ಹಾಗೂ ನಾಗರಾಜ್ ಛಬ್ಬಿ, ಹಾಗೂ ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ ಮತ್ತು ಮಂಜುನಾಥ್ ಗೌಡ ನಡುವೆ ಸ್ಪರ್ಧೆ ಇದೆ. ಕೆಲವು ಅಭ್ಯರ್ಥಿಗಳಿಗೆ ಡಿಕೆಶಿ ಬೆಂಬಲ ನೀಡಿದರೆ ಮತ್ತೆ ಕೆಲವರಿಗೆ ಸಿದ್ದರಾಮಯ್ಯ ಬೆಂಬಲ ನೀಡಿದ್ದಾರೆ.

ಚುನಾವಣೆ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎರಡನೆ ಅಭ್ಯರ್ಥಿಗಳ ಪಟ್ಟಿಯನ್ನು ನಾಳೆ(ಎ.2) ಒಳಗೆ ಪ್ರಕಟಿಸಬೇಕಿದೆ. ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದೆ ಪಟ್ಟಿ ಪ್ರಕಟಿಸುವುವುದು ಪಕ್ಷಕ್ಕೆ ಸವಾಲಾಗಿದೆ. ಅಲ್ಲದೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆಯೇ ಅಥವಾ ವರುಣಾ ಕ್ಷೇತ್ರವೊಂದರಲ್ಲೇ ಸ್ಪರ್ಧಿಸಲಿದ್ದಾರೆಯೋ? ಎಂಬ ಕುತೂಹಲಕ್ಕೆ ಎರಡನೆ ಪಟ್ಟಿ ತೆರೆ ಎಳೆಯಲಿದೆ.

ಇದನ್ನೂ ಓದಿ: ಬಿಟಿಎಂ ಲೇಔಟ್ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ ಮನೆಯಲ್ಲಿ 504 ಕುಕ್ಕರ್ ಜಪ್ತಿ: ಪ್ರಕರಣ ದಾಖಲು 

Similar News