ಹಿಂದಿನ ದಿನಾಂಕ ನಮೂದಿಸಿ ಕಡತ ವಿಲೇವಾರಿ: ಆದೇಶಗಳನ್ನು ರದ್ದುಪಡಿಸಲು ಕೋರಿ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

Update: 2023-04-01 15:31 GMT

ಬೆಂಗಳೂರು, ಎ. 1: ‘ಚುನಾವಣೆ ಘೋಷಣೆ ಬಳಿಕ ಸರಕಾರದ ಮುಖ್ಯಕಾರ್ಯದರ್ಶಿ ಬಳಸಿಕೊಂಡು ಮುಖ್ಯಮಂತ್ರಿ, ವಿವಿಧ ಇಲಾಖೆಗಳ ಕಡತಗಳನ್ನು ತರಿಸಿ ಹಿಂದಿನ ದಿನಾಂಕಗಳನ್ನು ನಮೂದಿಸಿ ಕಡತಗಳ ಮೇಲೆ ಟಿಪ್ಪಣಿ ಹಾಕುವ ಮತ್ತು ಆದೇಶ ನೀಡುವ ಕಾನೂನುಬಾಹಿರ ಕೆಲಸ ಮಾಡಿದ್ದಾರೆ. ಹೀಗಾಗಿ ಆ ಎಲ್ಲ ಆದೇಶಗಳನ್ನು ರದ್ದುಪಡಿಸಿ, ಕಾನೂನುಬಾಹಿರ ಕ್ರಮಗಳಿಗೆ ಅವಕಾಶ ನೀಡಿದ ಹಿರಿಯ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ ಮಾಡಬೇಕು’ ಎಂದು ಕೋರಿ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಶನಿವಾರ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದ್ದು, ‘ವಿವಿಧ ಇಲಾಖೆಗಳ ಹೆಚ್ಚುವರಿ ಕಾರ್ಯದರ್ಶಿಗಳಿಗೆ ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಮೌಖಿಕ ಸೂಚನೆಗಳನ್ನು ನೀಡಿ ಅನೇಕ ಕಡತಗಳನ್ನು ವಿಲೇವಾರಿ ಮಾಡಿರುತ್ತಾರೆ. ಇದರಿಂದ ರಾಜ್ಯದ ಹಣಕಾಸು ವ್ಯವಸ್ಥೆಗೆ ದಕ್ಕೆಯಾಗಿದ್ದು, ರಾಜಕೀಯ ಲಾಭವನ್ನು ಆಡಳಿತ ಪಕ್ಷ ಪಡೆದುಕೊಂಡಿರುತ್ತದೆ. ಪ್ರಮುಖವಾಗಿ ಇದರಲ್ಲಿ, ಭ್ರಷ್ಟಾಚಾರಕ್ಕೆ ಅವಕಾಶವಾಗಿದೆ’ ಎಂದು ದೂರಿದ್ದಾರೆ.

‘ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ರಾಜ್ಯ ಚುನಾವಣಾಧಿಕಾರಿಗಳು ರಾಜ್ಯ ಸರಕಾರಕ್ಕೆ ಪತ್ರ ಬರೆದು ಚುನಾವಣೆ ಮೇಲೆ ಪ್ರಭಾವ ಬೀರುವ ಯಾವುದೇ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಬಾರದು ಮತ್ತು ಯಾವುದೇ ವರ್ಗಾವಣೆಗಳನ್ನು ಮಾಡದಂತೆ ಸೂಚಿಸಿದ್ದಾರೆ. ಆದರೆ, ರಾಜ್ಯ ಸರಕಾರ ಮತ್ತು ಕೆಲ ಅಧಿಕಾರಿಗಳು ಆಡಳಿತ ಯಂತ್ರವನ್ನು ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕೂಡಲೇ ಇದರ ವಿರುದ್ಧ ಕ್ರಮ ವಹಿಸಬೇಕು’ ಎಂದು ಅವರು ಕೋರಿದ್ದಾರೆ.

‘ಕೇಂದ್ರ ಚುನಾವಣಾ ಆಯೋಗವು ರಾಜ್ಯ ಸರಕಾರದ ಕಾನೂನು ಬಾಹಿರ ಕ್ರಮಗಳಿಗೆ ಕಡಿವಾಣ ಹಾಕಬೇಕು. ಇಲಾಖಾವಾರು ವೀಕ್ಷಕರನ್ನು ಕೇಂದ್ರ ಚುನಾವಣಾ ಆಯೋಗದಿಂದ ನೇಮಕ ಮಾಡಬೇಕು. ಮೂರು ದಿನಗಳಿಂದ ಹಳೆಯ ದಿನಾಂಕಗಳನ್ನು ನಮೂದು ಮಾಡಿ ಹೊರಡಿಸಿರುವ ಆದೇಶಗಳನ್ನು ರದ್ದು ಪಡಿಸಬೇಕು. ಚುನಾವಣೆಯು ಪಾರದರ್ಶಕವಾಗಿ ನಡೆಯಲು ಮತ್ತು ಅಧಿಕಾರ ದುರುಪಯೋಗ ತಡೆಯಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಮನವಿ ಮಾಡಿದ್ದಾರೆ. 

Similar News