​ಮಂಗಳೂರು, ಮಂಗಳೂರು ಉತ್ತರದಲ್ಲಿ ಮೊಗವೀರರಿಗೆ ಟಿಕೆಟ್ ನೀಡುವಂತೆ ರಾಮಚಂದರ್ ಆಗ್ರಹ

Update: 2023-04-01 16:46 GMT

ಮಂಗಳೂರು, ಎ.1: ಮಂಗಳೂರು (ಉಳ್ಳಾಲ) ಮತ್ತು ಮಂಗಳೂರು ಉತ್ತರ (ಸುರತ್ಕಲ್) ವಿಧಾನಸಭಾ ಕ್ಷೇತ್ರಗಳಲ್ಲಿ ಮೀನುಗಾರ ಸಮುದಾಯವಾದ ಮೊಗವೀರರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸದಸ್ಯ ರಾಮಚಂದರ್ ಬೈಕಂಪಾಡಿ ಆಗ್ರಹಿಸಿದ್ದಾರೆ.

ಮಂಗಳೂರು ನಗರದ ಓಶಿಯನ್ ಪರ್ಲ್ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮೀನುಗಾರ ಸಮುದಾಯದವರಿಗೆ ಯಾವ ರಾಜಕೀಯ ಪಕ್ಷದಿಂದಲೂ ಸ್ಥಾನಮಾನ ಸಿಗಲಿಲ್ಲ. ಈ ಭಾಗದ ಮೀನುಗಾರರ ಪೈಕಿ ಶೇ.80ರಷ್ಟು ಮಂದಿ ಹಿಂದುತ್ವದ ಆಧಾರದಲ್ಲಿ ಇಷ್ಟು ವರ್ಷ ಬಿಜೆಪಿಗೆ ಮತ ಚಲಾಯಿಸುತ್ತಿದ್ದಾರೆ. ಆದರೂ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದ್ದು ಕಡಿಮೆ ಎಂದು ಆರೋಪಿದರು.

ದ.ಕ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಮೀನುಗಾರ ಸಮುದಾಯದವರ ಪ್ರಭಾವ ಇದ್ದು ಮಂಗಳೂರು ಉತ್ತರ, ಮೀನುಗಾರರ ಸಾಂಪ್ರದಾಯಿಕ ಕ್ಷೇತ್ರವಾಗಿದೆ. ಇಲ್ಲಿಯವರೆಗೆ ಮೀನುಗಾರರು ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದ್ದಾರೆ. ಆದರೂ ಶಾಸಕರಾಗಲು ಸಾಧ್ಯವಾಗಲಿಲ್ಲ. ಈ ಬಾರಿ ಕನಿಷ್ಠ ಎರಡು ಕ್ಷೇತ್ರ (ಮಂಗಳೂರು ಹಾಗೂ ಮಂಗಳೂರು ಉತ್ತರ)ಗಳಲ್ಲಿ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲರನ್ನು ಕೋರಲಾಗಿದೆ ಎಂದು ಅವರು ಹೇಳಿದರು.

ಮೀನುಗಾರರಿಗೆ ಟಿಕೆಟ್ ನೀಡದೇ ಇದ್ದರೆ ಚುನಾವಣೆಯ ಸಂದರ್ಭದಲ್ಲಿ ಮೀನುಗಾರರು ತಟಸ್ಥರಾಗಿರುವರು. ಈ ಬಗ್ಗೆ ರಾಜ್ಯದಾದ್ಯಂತ ಜಾಗೃತಿ ಮೂಡಿಸಲಾಗುವುದು ಎಂದ ರಾಮಚಂದರ್, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮೀನುಗಾರರ ಪರವಾಗಿ ಸ್ಪರ್ಧಿಸಲು ನನಗಿಂತ ಅರ್ಹತೆ ಇರುವವರು ಯಾರೂ ಇಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಾಬು ಬಂಗೇರ, ಮುರಳಿರಾಜ್ ಉಚ್ಚಿಲ, ಸುಕೇಶ್ ಜಿಕೆ ಉಚ್ಚಿಲ ಉಪಸ್ಥಿತರಿದ್ದರು.

Similar News