ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ಆರೋಪ: ಅಧಿಕಾರಿಗಳ ವಿರುದ್ಧ ಕುಮಾರಸ್ವಾಮಿ ಆಕ್ರೋಶ

Update: 2023-04-01 18:47 GMT

ಬೆಂಗಳೂರು, ಎ. 1: ‘ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ನೀಡುವ ಕೆಲಸ ಮಾಡಿದರೆ ಸಹಿಸುವ ಪ್ರಶ್ನೆಯೇ ಇಲ್ಲ’ ಎಂದು ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಯಶವಂತಪುರ ಕ್ಷೇತ್ರದಲ್ಲಿ ‘ಪಂಚರತ್ನ’ ರಥಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕಾರ್ಯಕರ್ತರಿಗೆ ಧಮ್ಕಿ ಹಾಕುವುದು, ಕಿರುಕುಳ ಕೊಡುವುದು ನಡೆಯುತ್ತಿದೆ. ವಿಧಾನಸಭೆ ಚುನಾವಣೆ ಬಂದಾಗಿನಿಂದ ಅದು ಇನ್ನೂ ಜಾಸ್ತಿಯಾಗಿದೆ. ಬೇರೆ ಪಕ್ಷದಿಂದ ಬೇಸತ್ತು ನಮ್ಮ ಪಕ್ಷಕ್ಕೆ ಬರುವವರನ್ನು  ಕೆಲ ಕಡೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಹೆದರಿಸಿ ಅವರನ್ನು ಪುನಃ ಅದೇ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.

‘ಒಂದು ತಿಂಗಳು ಅಷ್ಟೇ ನಿಮ್ಮ ಸಮಯ. ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಕೆಲಸ ಮಾಡಬೇಕು. ಶಾಸಕರಿಗೆ ಅಡಿಯಾಳಾಗಿ ಕೆಲಸ ಮಾಡಿದರೆ ಜೂನ್ ಬಳಿಕ ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತದೆ’ಎಂದು ಎಚ್ಚರಿಸಿದ ಅವರು, ‘ರಾಜ್ಯದ ಜನತೆಯ ತೆರಿಗೆ ಹಣದಿಂದ ನೀವು ಕೆಲಸ ಮಾಡ್ತಿದ್ದೀರಿ ಎನ್ನುವುದನ್ನು ಅಧಿಕಾರಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ನಾನೂ ಎರಡು ಬಾರಿ ಸಿಎಂ ಆಗಿ ಕೆಲಸ ಮಾಡಿದ್ದೇನೆ. ಎಂದೂ ಇಂತಹ ದ್ವೇಷದ ರಾಜಕೀಯಕ್ಕೆ ನಾನು ಪ್ರೋತ್ಸಾಹ ಕೊಟ್ಟಿಲ್ಲ. ಅಧಿಕಾರಿಗಳು ತಮ್ಮ ನಡವಳಿಕೆ ಬದಲಾವಣೆ ಮಾಡಿಕೊಳ್ಳಬೇಕಿದೆ’ ಎಂದು ನಿರ್ದೇಶನ ನೀಡಿದರು.

‘ನಾರಾಯಣಗೌಡರನ್ನು ಬೆಳೆಸೋಕೆ ನನ್ನ ಪಕ್ಷವನ್ನು ಹಾಳು ಮಾಡಿಕೊಳ್ಳಬೇಕಾ? ಇವರು ಮಹಾನ್ ಕೆಲಸ ಮಾಡಿದ್ದಾರೆಂದು ಹೇಳಿ ನಾನು ಅಭ್ಯರ್ಥಿ ಹಾಕದೇ ಇರಲಾ? ಕೃಷ್ಣ ವಿರುದ್ದ ಅಭ್ಯರ್ಥಿ ಆಗಬೇಕು ಎಂದು ಬಂದಾಗ ಅವತ್ತು ಈ ಪರಿಜ್ಞಾನ ಇರಲಿಲ್ಲವಾ ಇವರಿಗೆ? ಕೃಷ್ಣ ವಿರುದ್ದ ಅಭ್ಯರ್ಥಿ ಆಗೋಕೆ ಏಕೆ ಬಂದರು ಇವರು. ಎರಡನೇ ಬಾರಿ ನಿನಗೆ ಟಿಕೆಟ್ ಕೊಡಬಾರದು ಅಂತ ಇದ್ದಿದ್ದು. ಆದರೂ ಟಿಕೆಟ್ ಕೊಟ್ಟೆವು. ನಾನು ಟಿಕೆಟ್ ಕೊಡಿಸಿದ್ದು ನಾನು. ಕುತ್ತಿಗೆ ಕೊಯ್ದು ಹೋದವನು ಈ ವ್ಯಕ್ತಿ ಎಂದು ಕುಮಾರಸ್ವಾಮಿ, ಸಚಿವ ನಾರಾಯಣಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

 

Similar News