ದಲಿತರಿಗೆ ನೇರವಾಗಿ ತಲುಪುವ ಯೋಜನೆಗಳನ್ನು ರೂಪಿಸಬೇಕಾಗಿದೆ

ಜನ ಪ್ರಾಣಾಳಿಕೆ ಸರಣಿ -08

Update: 2023-04-02 04:36 GMT

ಬಜೆಟ್‌ಗಳು ಜನಸಾಮಾನ್ಯರಿಂದ ದೂರ ಸರಿಯುತ್ತಿರುವಂತಹ ಸಂದರ್ಭದಲ್ಲಿ ನಾವಿದ್ದೇವೆ. ಬಜೆಟ್ ಎಂಬುದು ಮಾಧ್ಯಮಗಳಲ್ಲಿ ಒಂದು ದಿನದ ಜಾತ್ರೆಯಂತಾಗಿದೆ. ಸದನದಲ್ಲಿ ವಾರ ಕಾಲದ ಉತ್ಸವವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕನಿಷ್ಠ ಪಕ್ಷ ಜನಸಾಮಾನ್ಯರಿಗಾದರೂ ಅಂಕಿಸಂಖ್ಯೆಗಳನ್ನು ಅರ್ಥ ಮಾಡಿಸಬೇಕಾದ ಅಗತ್ಯ ನಮ್ಮೆಲ್ಲರ ಮೇಲಿದೆ. ದಲಿತರಿಗೆ ಬಂಪರ್ ಕೊಡುಗೆ ಎಂದು ಸುದ್ದಿ ಮಾಡುವ ತನಿಖಾರಹಿತ ಜಾಣ್ಮೆಯನ್ನು ಬೆಳೆಸಿಕೊಂಡಿರುವ ಮಾಧ್ಯಮಗಳ ನಡುವೆ ದಲಿತರಿಗೆ ನಿಜವಾಗಿಯೂ ಬೇಕಾಗಿರುವ ಬಜೆಟ್ ಅನ್ನು ತೆರೆದಿಡಬೇಕಿದೆ.

ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರಕಾರದಲ್ಲಿ ಜಾರಿಗೊಂಡ ‘ಪರಿಶಿಷ್ಟರ ಉಪಯೋಜನೆ’ ಕಾಯ್ದೆ (ಎಸ್‌ಸಿಎಸ್‌ಪಿ/ಟಿಎಸ್‌ಪಿ) ದಲಿತರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚು ಹಣವನ್ನು ಮೀಸಲಿಡುವ ಮೊದಲ ಹಂತಕ್ಕೆ ಪ್ರಬಲ ಶಕ್ತಿಯನ್ನು ನೀಡಿದೆ. ಬಿಡಿಗಾಸನ್ನು ಕಾಣುತ್ತಿದ್ದ ದಲಿತರ ಅಭಿವೃದ್ಧಿ ಕಾರ್ಯಗಳು ಈ ಕಾಯ್ದೆಯಿಂದ ಹೆಚ್ಚು ಹಣ ಪಡೆಯುವಂತಾಗಿವೆ. ಭಾರತದ ಒಕ್ಕೂಟ ಸರಕಾರ ಇಂತಹ ಕಾಯ್ದೆಗೆ ಇನ್ನೂ ಮನಸ್ಸು ಮಾಡಿಲ್ಲದಿದ್ದಾಗ ರಾಜ್ಯ ಸರಕಾರವೊಂದು ಇಟ್ಟ ಇಂತಹ ದಿಟ್ಟ ಹೆಜ್ಜೆ ಅಭಿನಂದನಾರ್ಹವಾಗಿದೆ. ವಿಪರ್ಯಾಸವೆಂದರೆ ಈ ಕಾಯ್ದೆ ಜಾರಿಯಾದಾಗಿನಿಂದಲೂ ಪ್ರಮುಖ ನಾಲ್ಕು ಸಮಸ್ಯೆಯನ್ನು ಎದುರಿಸುತ್ತಿದೆ.

1. ಬಜೆಟ್‌ನ ಗಾತ್ರದ ಶೇ. 24.01ರಷ್ಟು ಅನುದಾನ ಮೀಸಲಿಡದಿರುವುದು.

2. ಮೀಸಲಿಟ್ಟ ಕಡಿಮೆ ಅನುದಾನದಲ್ಲಿಯೂ ಸಂಪೂರ್ಣ ಹಣ ಬಿಡುಗಡೆಗೊಳಿಸದಿರುವುದು.

3. ಬಿಡುಗಡೆಗೊಳಿಸಿದ ಅನುದಾನವನ್ನು ಸಂಪೂರ್ಣ ಖರ್ಚು ಮಾಡದಿರುವುದು.

4. ಖರ್ಚು ಮಾಡಿದ ಕಡಿಮೆ ಹಣದಲ್ಲಿ ಬಹುಪಾಲು ದಲಿತರಿಗೆ ನೇರವಾಗಿ ಉಪಯೋಗವಾಗುವ ಯೋಜನೆಗಳಿಗೆ ಬಳಸದಿರುವುದು.

ಈ ಮೇಲಿನ ಕೋಷ್ಟಕದಿಂದ ಕಾಯ್ದೆಬದ್ಧವಾಗಿ ದಲಿತರಿಗೆ ಬಜೆಟ್‌ನ ಶೇ. 24.01ರಷ್ಟು ಹಣವನ್ನು ಮೀಸಲಿಟ್ಟಿಲ್ಲ ಎಂದು ತಿಳಿದುಬರುತ್ತದೆ. ಅದರಲ್ಲೂ ಕಳೆದ ನಾಲ್ಕು ವರ್ಷಗಳಲ್ಲಿ ಅದರ ಪ್ರಮಾಣ ಕಡಿಮೆಯಾಗುತ್ತಲೇ ಬಂದಿದೆ.

ಹೀಗೆ ಮೀಸಲಿಟ್ಟ ಕಡಿಮೆ ಹಣದಲ್ಲಿಯೂ ಬಿಡುಗಡೆಗೊಳಿಸುವ ಹಾಗೂ ಖರ್ಚು ಮಾಡುವ ಹಣ ಮತ್ತಷ್ಟು ಕಡಿಮೆಯಾಗುತ್ತದೆ. ದುರಂತವೆಂದರೆ ಹಲವು ಇಲಾಖೆಗಳು ವರ್ಷಾಂತ್ಯಕ್ಕೆ ಅನುದಾನವನ್ನು ಬಳಸದೆ ಸರಕಾರಕ್ಕೆ ವಾಪಸ್ ಕಳಿಸುತ್ತವೆ. ಈ ಅನುದಾನವನ್ನು ಮುಂದಿನ ವರ್ಷಗಳಲ್ಲಿ ಕಡ್ಡಾಯವಾಗಿ ಬಳಸಬೇಕೆಂದು ಕಾಯ್ದೆ ಹೇಳುತ್ತದೆಯಾದರೂ ಅದನ್ನು ನೇರವಾಗಿ ದಲಿತರ ಅಭಿವೃದ್ಧಿಗೆ ಬಳಕೆ ಮಾಡದೆ ಸಾಮಾನ್ಯ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ.

ಈ ಮೇಲಿನ ಕೋಷ್ಟಕದಲ್ಲಿ ತೋರಿಸಿರುವಂತೆ 2022-23ನೇ ಸಾಲಿನ ಬಜೆಟ್‌ನಲ್ಲಿ ಬಿಜೆಪಿ ಸರಕಾರ ಎಸ್‌ಸಿಎಸ್‌ಪಿ/ಟಿಎಸ್‌ಪಿ ದಲಿತರ ಉಪಯೋಜನೆಗೆ ಘೋಷಿಸಿದ ಅನುದಾನ 28,877 ಕೋಟಿ ರೂ. ಆದರೆ ಮಾರ್ಚ್ 18, 2023ರಷ್ಟೊತ್ತಿಗೆ ಖರ್ಚು ಮಾಡಿರುವ ಹಣ ಕೇವಲ 20,990 ಕೋಟಿ. ಅಂದರೆ 7,887 ಕೋಟಿಯಷ್ಟು ಹಣವನ್ನು ಬಳಕೆ ಮಾಡಿಯೇ ಇಲ್ಲ. ಹೀಗೆ ಬಳಕೆ ಮಾಡಿದ ಹಣದಲ್ಲಿ ಹೆಚ್ಚಿನ ಪಾಲನ್ನು ನೇರವಾಗಿ ದಲಿತರಿಗೆ ತಲುಪುವ ಮಾನವ ಅಭಿವೃದ್ಧಿ ಯೋಜನೆಗಳಲ್ಲಿ ಬಳಸಲಾಗಿದೆಯೇ ಎಂದು ಪರೀಕ್ಷಿಸಿದರೆ ಅದೂ ಆಗಿಲ್ಲ.

ಸಾಮಾನ್ಯರಿಗೂ ತಿಳಿಯಬಹುದಾದ ವಿಷಯವೇನೆಂದರೆ ಯಾವುದೇ ಸಮುದಾಯದ ಏಳ್ಗೆಗಾಗಿ ಶಿಕ್ಷಣ, ಆರೋಗ್ಯ, ವಸತಿ ಹಾಗೂ ಸಮಾಜೋ- ಆರ್ಥಿಕ ಭದ್ರತೆಯಲ್ಲಿ ಹೆಚ್ಚಿನ ಅನುದಾನವನ್ನು ಬಳಸಬೇಕೆಂಬುದಾಗಿದೆ. ಎಸ್‌ಸಿಎಸ್‌ಪಿ/ಟಿಎಸ್‌ಪಿ ಮೀಸಲು ಹಣದ ವಿಚಾರಕ್ಕೆ ಬಂದರೆ ಈ ಕನಿಷ್ಠ ಪ್ರಜ್ಞೆಯನ್ನೂ ಉಲ್ಲಂಘಿಸುತ್ತಾ ಬರಲಾಗಿದೆ. 2022-23ನೇ ಸಾಲಿನಲ್ಲಿ ದಲಿತರ ಶಿಕ್ಷಣಕ್ಕೆ ಕೇವಲ 1,274 ಕೋಟಿ (ಶೇ.4.41) ಮೀಸಲಿಡಲಾಗಿತ್ತು ಹೀಗೆ ಇಟ್ಟ ಬಿಡಿಗಾಸಿನಲ್ಲೂ 454 ಕೋಟಿ ರೂ. ಖರ್ಚು ಮಾಡಿಯೇ ಇಲ್ಲ. ಹೀಗೆಯೇ ಆರೋಗ್ಯಕ್ಕೆ ಮೀಸಲಿಟ್ಟಿದ್ದ 1,355 ಕೋಟಿ ರೂ.(ಶೇ.4.6) ಹಣದಲ್ಲಿ 850 ಕೋಟಿ ರೂ.ಯಷ್ಟು, ವಸತಿಗೆ ಮೀಸಲಿಟ್ಟಿದ್ದ 1,257 ಕೋಟಿ ರೂ.ಯಲ್ಲಿ (ಶೇ.4.3) 131 ಕೋಟಿ ರೂ.ಯಷ್ಟು, ಕೃಷಿಗೆ ಮೀಸಲಿಟ್ಟಿದ್ದ 1,062 ಕೋಟಿ ರೂ.ಯಲ್ಲಿ (ಶೇ.3.6) 646 ಕೋಟಿ ರೂ.ಯಷ್ಟು ಹಣವನ್ನು ಬಳಕೆ ಮಾಡಿಲ್ಲ.

ಕಾಯ್ದೆಯಲ್ಲಿನ ‘7ಡಿ’ ಸೆಕ್ಷನ್ ರದ್ದುಗೊಳಿಸಬೇಕು

ಪ್ರತಿ ವರ್ಷ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯ ‘7ಡಿ’ ಸೆಕ್ಷನ್ ಬಳಸಿಕೊಂಡು ರಸ್ತೆಗಳು, ಆಸ್ಪತ್ರೆಗಳ ಕಟ್ಟಡ, ಕ್ರೀಡಾಂಗಣ, ಶಾಲಾ ಕಾಲೇಜುಗಳ ಕಟ್ಟಡ, ಆಂಗ್ಲೋ ಇಂಡಿಯನ್ ವಿದ್ಯಾರ್ಥಿ ಶುಲ್ಕ ವಿನಾಯಿತಿ, ಪದವಿ ಪೂರ್ವ ಪರೀಕ್ಷೆ, ನೀರಾವರಿ ಯೋಜನೆಗಳು, ಶಾಸಕರ ಸಾಮಾನ್ಯ ನಿಧಿ ಹೀಗೆ ದಲಿತರ ಹಣವನ್ನು ಇತರ ಕಾರ್ಯಗಳಿಗೆ ಬೇಕಾಬಿಟ್ಟಿಯಾಗಿ ಬಳಸಿಕೊಳ್ಳಲಾಗಿದೆ. 2018ರಿಂದ 2021ರ ವರೆಗೆ ಸುಮಾರು 8,000 ಕೋಟಿ ರೂ.ಯನ್ನು ಹೀಗೆ ದಲಿತರಿಂದ ಕಿತ್ತುಕೊಳ್ಳಲಾಗಿದೆ. ಹಾಗಾಗಿ ಈ ‘7ಡಿ’ ಸೆಕ್ಷನ್ ಅನ್ನೇ ತೆಗೆದುಹಾಕಬೇಕಿದೆ.

►  ‘ಏಕಗವಾಕ್ಷಿ’ಯಲ್ಲಿ ಯೋಜನೆ ಜಾರಿಗೊಳ್ಳಬೇಕು

ದಲಿತರಿಗೆ ಮೀಸಲಿಡುವ ಹಣವನ್ನು ಸರಕಾರ 36 ಇಲಾಖೆಗಳ 457 ವಿವಿಧ ಯೋಜನೆಗಳಿಗೆ ವಿಂಗಡಿಸುತ್ತದೆ. ಹೀಗೆ ಮೀಸಲಿಡುವುದರಿಂದ ಅನುದಾನ ಹಲವು ಕಡೆ ಹರಿದು ಹಂಚಿ ಹೋಗಿ ನಿರ್ದಿಷ್ಟ ಫಲಾನುಭವಿಗಳಿಗೆ ತಲುಪುವಲ್ಲಿ ಬಹಳ ತಡವಾಗುವುದಲ್ಲದೆ ಸದರಿ ಯೋಜನೆಯ ಫಲಾಫಲಗಳು ದೊರಕುವಲ್ಲಿ ಹಾಗೂ ಮುಂದಿನ ಕ್ರಿಯಾಯೋಜನೆ ತಯಾರಿಸುವಲ್ಲಿ ತೊಡಕುಂಟಾಗುತ್ತದೆ. ಹಾಗಾಗಿ 36 ಇಲಾಖೆಗಳಿಗೆ ನೀಡುವ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆ ಒಂದರಿಂದಲೇ ನೀಡಿದರೆ ಈಗಿರುವ ನ್ಯೂನತೆಯನ್ನು ಸರಿಪಡಿಸಬಹುದಾಗಿದೆ.

► ಶಿಕ್ಷಣ, ಆರೋಗ್ಯ, ವಸತಿ ಹಾಗೂ ಭದ್ರತೆಗೆ ಮೊದಲ ಆದ್ಯತೆ

ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ಜಾರಿಯಾದಾಗಿನಿಂದಲೂ ವಿವಿಧ ಸರಕಾರಗಳು ಮೀಸಲಿಟ್ಟಿರುವ ಹಣ ಸುಮಾರು 1.92 ಲಕ್ಷ ಕೋಟಿ ರೂ.ಗಳು. ಈ ಹಣವನ್ನು ನಿರ್ದಿಷ್ಟ ಯೋಜನೆಗಳಲ್ಲಿ ಬಳಸಿದ್ದರೆ ದಲಿತರ ಅಭಿವೃದ್ಧಿಯಲ್ಲಿ ಗಣನೀಯವಾದ ಏಳ್ಗೆ ಕಾಣಬಹುದಾಗಿತ್ತು. ಉದಾಹರಣೆಗೆ ಸರಕಾರದ ಪ್ರಕಾರವೇ 3.69 ಲಕ್ಷ ದಲಿತ ಕುಟುಂಬಗಳಿಗೆ ಮನೆ ಇಲ್ಲ (2021-22). ಆರ್ಥಿಕ ತಜ್ಞರಾದ ಟಿ.ಆರ್.ಚಂದ್ರಶೇಖರ್ ಹೇಳುವಂತೆ ಈ ನಿರ್ದಿಷ್ಟ ಯೋಜನೆಯನ್ನು ಮೊದಲ ಆದ್ಯತೆಯನ್ನಾಗಿ ಮಾಡಿಕೊಂಡರೆ ಪ್ರತೀ ಮನೆಗೆ 10 ಲಕ್ಷ ರೂ. ಯೋಜನಾ ವೆಚ್ಚದಂತೆ 37,000 ಕೋಟಿ ರೂ. ಸಾಕಾಗುತ್ತದೆ. ಪ್ರತೀ ವರ್ಷ 10,000 ಕೋಟಿ ರೂ. ವಸತಿಗೆ ಮೀಸಲಿಟ್ಟರೆ ನಾಲ್ಕೇ ವರ್ಷದಲ್ಲಿ ದಲಿತರೆಲ್ಲರಿಗೂ ಮನೆ ನೀಡಬಹುದಾಗಿದೆ. ರಾಜ್ಯದಲ್ಲಿ ಶೇ. 71 ಭೂರಹಿತ ದಲಿತ ಕೂಲಿಕಾರ್ಮಿಕರಿದ್ದಾರೆ. ಇವರಿಗೆ ಕನಿಷ್ಠ 2 ಎಕರೆ ಭೂಮಿ ಖರೀದಿಸಿ ಅಥವಾ ಭೂಮಿಯನ್ನು ಮಂಜೂರು ಮಾಡಿಕೊಡಲು ಅನುದಾನವನ್ನು ಮೊದಲ ಆದ್ಯತೆಯಾಗಿ ಬಳಸಬಹುದು. ಕಳೆದ ವರ್ಷ ಕೃಷಿಗೆ ಮೀಸಲಿಟ್ಟ ಹಣದಲ್ಲಿ 646 ಕೋಟಿ ರೂ. ಬಳಸಲಾಗಿಲ್ಲ. ಈ ಅನುದಾನವನ್ನು ಕೃಷಿ ಭೂಮಿಯನ್ನು ಖರೀದಿಸಲು ಬಳಸಬಹುದಾಗಿತ್ತು.

ಸರಕಾರಿ ದಾಖಲೆಗಳೇ ಹೇಳುವಂತೆ ಅತಿ ಹೆಚ್ಚು ಶಾಲೆ ಬಿಟ್ಟ ಮಕ್ಕಳು ಕಂಡುಬರುವುದು ದಲಿತ ಕುಟುಂಬಗಳಲ್ಲಿ. ಇದನ್ನು ನಿವಾರಿಸಲು ದಲಿತರಿಗಾಗಿ ವಸತಿಸಹಿತ ಶಾಲೆಗಳನ್ನು ಹೋಬಳಿ ಮಟ್ಟದಲ್ಲಿ ತೆರೆಯಬಹುದಾಗಿದೆ. ಅದರಲ್ಲಿ ಶೇ. 15ರಷ್ಟು ಇತರ ಬಡಮಕ್ಕಳಿಗೂ ಅವಕಾಶ ನೀಡಬಹುದಾಗಿದೆ. ವಿದ್ಯಾರ್ಥಿವೇತನವನ್ನು ಹೆಚ್ಚಿಸುವುದೂ ಒಳ್ಳೆಯ ಉಪಕ್ರಮವೇ ಆಗಿದೆ. ಈ ಹಿಂದೆ ದಲಿತ ಮಕ್ಕಳಿಗೆ ಪ್ರತೀ ವರ್ಷವೂ ಪ್ರತ್ಯೇಕವಾಗಿ ನೀಡಲಾಗುತ್ತಿದ್ದ ಶಾಲಾಬ್ಯಾಗ್, ಕಲಿಕಾ ಕಿಟ್ ನೀಡಿದರೆ ಅವರ ಹಾಜರಾತಿಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬರುತ್ತದೆ. ಡಾ. ಅಂಬೇಡ್ಕರ್ ಅವರ ಕನಸಾಗಿದ್ದ ದಲಿತ ಮಕ್ಕಳಿಗೆ ವಿದೇಶ ವ್ಯಾಸಂಗ ಯೋಜನೆಯನ್ನು 100 ರಿಂದ 200 ಫಲಾನುಭವಿಗಳಿಗೆ ಹೆಚ್ಚಿಸಬೇಕಿದೆ. ಕಾಲೇಜುಗಳಲ್ಲಿ ಎದುರಾಗಬಹುದಾದ ತಾರತಮ್ಯಗಳಿಗೆ ಕ್ಯಾಂಪಸ್‌ನಲ್ಲಿಯೇ ‘ಸಂರಕ್ಷಣಾ ಸಮಿತಿ’ಯನ್ನು (ದಲಿತರೇ ಆಗಿರುವ ಪೊಲೀಸ್, ವಕೀಲರು, ವೈದ್ಯರು ಹಾಗೂ ಹಿರಿಯ ವಿದ್ಯಾರ್ಥಿಗಳನ್ನು ಹೊಂದಿರುವ ಸಮಿತಿ) ‘ರೋಹಿತ್ ಕಾಯ್ದೆ’ಯೊಟ್ಟಿಗೆ ಜಾರಿಗೊಳಿಸಬಹುದು. ಈ ಮೂಲಕ ಉನ್ನತ ಶಿಕ್ಷಣ ಪಡೆಯುವ ದಲಿತ ಯುವಜನತೆಗೆ ಧೈರ್ಯ ನೀಡಿದಂತಾಗುತ್ತದೆ. ಉನ್ನತ ಮಟ್ಟದ ಶಿಕ್ಷಣ ಪಡೆಯುವ ದಲಿತ ಯುವತಿಯರಿಗೆ ಪುರುಷರಿಗಿಂತಲೂ ಹೆಚ್ಚಿನ ವಿದ್ಯಾರ್ಥಿವೇತನ ನೀಡಲು ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಬಳಸಬಹುದಾಗಿದೆ.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಹಿಳೆಯರು ಹಾಗೂ ಮಕ್ಕಳ ಸಂಖ್ಯೆ ದಲಿತರಲ್ಲಿಯೇ ಹೆಚ್ಚಿದೆ. ಉತ್ತರ ಕರ್ನಾಟಕದಲ್ಲಿಯಂತೂ ಅಪೌಷ್ಟಿಕತೆ ಎಲ್ಲೆ ಮೀರಿದೆ. ಹಾಗಾಗಿ ದಲಿತರ ವಸತಿ ಪ್ರದೇಶಗಳಿಗೆ ವಿಶೇಷವಾದ ಆಹಾರ ಸಾಮಗ್ರಿಗಳನ್ನು ಒದಗಿಸುವ ಕಾರ್ಯಕ್ರಮ ಹೆಚ್ಚು ಅನುದಾನ ಪಡೆಯಬೇಕು. ಕಳೆದ ವರ್ಷ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕೇವಲ 725 ಕೋಟಿ ರೂ. (ಶೇ. 2.51) ಮೀಸಲಿಡಲಾಗಿದೆ. ಅದರಲ್ಲಿಯೂ 240 ಕೋಟಿ ರೂ. ಖರ್ಚು ಮಾಡಿಯೇ ಇಲ್ಲ. ಡಯಾಲಿಸಿಸ್, ಹೃದಯ-ಕಿಡ್ನಿ-ಕ್ಯಾನ್ಸರ್ ಸಂಬಂಧಿ ಕಾಯಿಲೆಗಳ ತಪಾಸಣೆ ಮತ್ತು ಚಿಕಿತ್ಸೆ ಹಾಗೂ ಇತರ ಮಾರಕ ಕಾಯಿಲೆಗಳಿಗಾಗಿ ದಲಿತರ ಹಣವನ್ನು ಬಳಸುವ ಎಲ್ಲಾ ಅವಕಾಶಗಳೂ ಇವೆ.

ಕರ್ನಾಟಕದಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಿಧಾನ ಪರಿಷತ್ ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ ಕೇಳಿದ್ದ ಪ್ರಶ್ನೆಗೆ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಈ ಅಂಕಿ ಅಂಶಗಳನ್ನು ನೀಡಿದ್ದಾರೆ. 2019ರಿಂದ 2022ರ ನವೆಂಬರ್ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು 8,153 ದೌರ್ಜನ್ಯ ಮತ್ತು 4,546 ಹಲ್ಲೆ ಪ್ರಕರಣಗಳು ದಾಖಲಾಗಿವೆ. 2022ರಲ್ಲಿಯೇ 2,272 ದೌರ್ಜನ್ಯ ಮತ್ತು 1,246 ಹಲ್ಲೆ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಾದ್ಯಂತ ಇಷ್ಟೊಂದು ದೌರ್ಜನ್ಯ ನಡೆದಿದ್ದರೂ ಸಂತ್ರಸ್ತರಿಗೆ ನೀಡಿರುವ ಪರಿಹಾರ ಮೊತ್ತ ಕೇವಲ 120 ಕೋಟಿ ರೂ. ಅಷ್ಟೆ. ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದಿಂದ ಸಂತ್ರಸ್ತರೆಲ್ಲರಿಗೂ ಪರಿಹಾರ ನೀಡಬಹುದಾಗಿದೆ. ದಲಿತರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಶಿಕ್ಷೆ ನೀಡುವ ಪ್ರಮಾಣ ಇಡೀ ದೇಶದಲ್ಲಿ ಕರ್ನಾಟಕದ್ದೇ ಕನಿಷ್ಠ. 2021ರಲ್ಲಿ ಪರಿಶಿಷ್ಟ ಜಾತಿಗಳ ವಿರುದ್ಧ ನಡೆಸಿದ ದೌರ್ಜನ್ಯದಲ್ಲಿ ಶೇ. 1.6ರಷ್ಟು ಪ್ರಕರಣಗಳಿಗೆ ಶಿಕ್ಷೆ ಆಗಿದ್ದರೆ, ಪರಿಶಿಷ್ಟ ಪಂಗಡದ ವಿರುದ್ಧ ನಡೆಸಿದ ದೌರ್ಜನ್ಯದಲ್ಲಿ ಒಂದಕ್ಕೂ ಶಿಕ್ಷೆಯಾಗಿಲ್ಲ. ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆ ಆಗಿದ್ದಾರೆ. ಹಾಗಾಗಿ ಜಿಲ್ಲೆಗೊಂದರಂತೆ ‘ಅಟ್ರಾಸಿಟಿ ಕಾಯ್ದೆಯಡಿ ದಾಖಲಾದ ಪ್ರಕರಣ’ಗಳ ವಿಚಾರಣೆಗಾಗಿಯೇ ‘ವಿಶೇಷ ನ್ಯಾಯಾಲಯ’ವನ್ನು ತೆರೆಯಬೇಕಿದೆ. ದಲಿತರಿಗೆ ರಕ್ಷಣೆ ನೀಡುವ ಸಲುವಾಗಿಯೇ ‘ವಿಶೇಷ ಪೊಲೀಸ್ ಪಡೆ’ ಹಾಗೂ ‘ಪೊಲೀಸ್ ಠಾಣೆ’ಗಳನ್ನೂ ತೆರೆಯಬಹುದಾಗಿದೆ. ಇವುಗಳನ್ನು ಮೊದಲ ಆದ್ಯತೆಯ ಕಾರ್ಯಗಳಾಗಿ ಮಾಡಿಕೊಂಡು ಅವುಗಳ ಜೊತೆಗೆ ಈ ಕೆಳಗಿನ ಯೋಜನೆಗಳನ್ನೂ ರೂಪಿಸಬೇಕಿದೆ.

1. ದೇವದಾಸಿಯರ ಪುನರ್ವಸತಿ ಕಾರ್ಯಕ್ರಮವನ್ನು ಆದ್ಯತೆಯಾಗಿ ತೆಗೆದುಕೊಳ್ಳಬೇಕು.

2. ಸಫಾಯಿ ಕರ್ಮಚಾರಿಗಳ ವಸತಿ ಪ್ರದೇಶದ ಮಕ್ಕಳಿಗೆ ಮೀಸಲು ಹಣದ ಬಹುಪಾಲನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಬೇಕು.

3. ಯುವಜನತೆಗೆ ಉದ್ಯೋಗ ಕಲ್ಪಿಸಲು ಕೌಶಲ್ಯಾಭಿವೃದ್ಧಿ ತರಬೇತಿ, ಉದ್ಯಮಶೀಲತೆಗಾಗಿ ಅನುದಾನವನ್ನು ಮೀಸಲಿಟ್ಟು ಒಂದು ರೂಪಾಯಿಯನ್ನೂ ಉಳಿಸದಂತೆ ನೇರವಾಗಿ ಬಳಕೆ ಮಾಡಬೇಕಿದೆ.

4. ಹಳ್ಳಿಗೊಂದರಂತೆ ದಲಿತರಿಗಾಗಿ ‘ಸ್ಮಶಾನ ಭೂಮಿ’ಯನ್ನು ಖರೀದಿಸಬೇಕು.

5. ಅನಕ್ಷರಸ್ಥ ಪೋಷಕರು ದಲಿತರಲ್ಲಿಯೇ ಹೆಚ್ಚಿರುವುದರಿಂದ ‘ಸಂಜೆ ಶಾಲೆ’ಗಳನ್ನು ದಲಿತರ ವಾಸಸ್ಥಾನಗಳಲ್ಲಿಯೇ ತೆರೆಯಲು ಗೌರವ ಧನ ನೀಡಿ ಸ್ಥಳೀಯ ದಲಿತರನ್ನೇ ಪಾಠ ಹೇಳಿಕೊಡಲು ನೇಮಿಸಬೇಕು.

6. ಪ್ರತೀ ಹಳ್ಳಿಗೊಂದು ಅಂಬೇಡ್ಕರ್ ಭವನ ನಿರ್ಮಿಸಿ ಅದರಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಬೇಕು. ಕಡ್ಡಾಯವಾಗಿ ಉದ್ಯೋಗಕ್ಕಾಗಿ ಪ್ರವೇಶ ಪರೀಕ್ಷೆ ತಯಾರಿಗೆ ಸಹಾಯವಾಗುವ ಪುಸ್ತಕಗಳಿರಬೇಕು. ಜೊತೆಗೆ ಕ್ರೀಡಾ ಸಾಮಗ್ರಿಗಳನ್ನು ಒದಗಿಸಬೇಕು.

ಹೀಗೆ ದಲಿತರಿಗೆ ನೇರವಾಗಿ ತಲುಪುವ ಯೋಜನೆಗಳನ್ನು ರೂಪಿಸುವುದರಿಂದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣ ಸದ್ಬಳಕೆಯಾಗುತ್ತದೆ. ಇಷ್ಟಕ್ಕೆ ಹಣವನ್ನು ಎಲ್ಲಿಂದ ತರುವುದು ಎಂಬ ಪ್ರಶ್ನೆ ಕೇಳುವವರಿಗೇನು ಕಡಿಮೆ ಇಲ್ಲ. ಇದಕ್ಕೆ ಉತ್ತರ ಬಹಳ ಸುಲಭ. ಕಾಯ್ದೆಬದ್ಧವಾಗಿ ಬಜೆಟ್‌ನ ಶೇ. 24.01ರಷ್ಟು ಅನುದಾನ ಮೀಸಲಿಡಬೇಕು. ಜೊತೆಗೆ ದಲಿತರಿಗೆ ನೇರವಾಗಿ ಬಳಕೆಯಾಗದ ಇಂಧನ, ಲೋಕೋಪಯೋಗಿ, ಭಾರೀ ನೀರಾವರಿ (ಕಳೆದ ಸಾಲಿನಲ್ಲಿ ಇವುಗಳಿಗೆ 5,682 ಕೋಟಿ ಮೀಸಲಿಟ್ಟಿದ್ದರು) ಮುಂತಾದ ಇಲಾಖೆಗಳಿಗೆ ಮೀಸಲಿಡುವ ಹಾಗೂ ‘7ಡಿ’ ಸೆಕ್ಷನ್ ಅಡಿ ದುರ್ಬಳಕೆಯಾಗುವ ಭಾರೀ ಮೊತ್ತವನ್ನು ದಲಿತರ ‘ನೈಜ ಅಭಿವೃದ್ಧಿ ಕಾರ್ಯ’ಗಳಿಗೆ ವಿನಿಯೋಗಿಸಿದರೆ ಸಾಕು. ಒಟ್ಟಾರೆ ದಲಿತರ ಹಣವನ್ನು ಅವರ ಶಿಕ್ಷಣ, ಆರೋಗ್ಯ, ವಸತಿ ಮತ್ತು ಸಾಮಾಜಿಕ-ಆರ್ಥಿಕ ಭದ್ರತೆಗಾಗಿಯೇ ಆದ್ಯತೆ ಮೇರೆಗೆ ಮೀಸಲಿಟ್ಟು ಯೋಜನೆಗಳನ್ನು ರೂಪಿಸಿ ಬಳಕೆ ಮಾಡುವುದರಿಂದ ಮಾತ್ರ ಬಜೆಟ್ ಅನುದಾನಗಳು ಸಾರ್ಥಕವಾಗುತ್ತವೆ. ಬಹುಮುಖ್ಯವಾಗಿ ಯೋಜನೆ ರೂಪಿಸುವವರು ಶಿಖರದಿಂದ ಕೆಳಗಿಳಿಯಬೇಕಿದೆ. ಇದಕ್ಕೆ ಪ್ರಾಮಾಣಿಕ ರಾಜಕೀಯ ಇಚ್ಛಾಶಕ್ತಿಯೊಂದು ಅಗತ್ಯವಾಗಿ ಬೇಕಿದೆ. ಇಲ್ಲದಿದ್ದರೆ ಬೇಲಿಯೇ ಎದ್ದು ಹೊಲ ಮೇಯುತ್ತಿರುತ್ತದೆ. ದೂರದ ಬೆಟ್ಟ ನುಣ್ಣಗೆ ಕಾಣುತ್ತಿರುತ್ತದೆ.

Similar News