ವಾಜಪೇಯಿ ಮತ್ತು ಅವರ ಮುಖವಾಡದೊಂದಿಗೆ ಸೆಣಸಾಟ

ನೇಗಿಲ ಗೆರೆಗಳು-ದೇವೇಗೌಡರ ಬದುಕು ಮತ್ತು ದುಡಿಮೆ ಗ್ರಂಥದಿಂದ ಆಯ್ದ ಭಾಗ:

Update: 2023-04-02 08:45 GMT

ಸಂಸತ್ತಿನಲ್ಲಿ ದೇವೇಗೌಡರಷ್ಟು ಭಾವಾವೇಶದಿಂದ ವಾಜಪೇಯಿಯವರನ್ನು ತರಾಟೆಗೆ ತೆಗೆದುಕೊಳ್ಳಬಲ್ಲವರು, ಮನವೊಲಿಸಬಲ್ಲವರು, ಅವರ ವೈಫಲ್ಯಗಳನ್ನು ಎತ್ತಿತೋರಿಸ ಬಲ್ಲವರು ಅವರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲವೆಂದೇ ಹೇಳಬಹುದು. ಆದರೆ ಇದು ವಾಜಪೇಯಿಯವರ ವರ್ತನೆಯ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರಿತು ಎಂಬುದು ಬೇರೆಯೇ ಪ್ರಶ್ನೆಯಾದರೂ, ಗೌಡರು ತಮ್ಮ ಕೆಲಸವನ್ನು ಪಟ್ಟುಬಿಡದೆ, ಒಬ್ಬಂಟಿಯಾಗಿ ಮಾಡಿದರು.

1997ರಲ್ಲಿ ಗೌಡರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರ, ವಾಜಪೇಯಿ ಸರಕಾರದ ವಿರುದ್ಧ ಅವರ ಹೋರಾಟ ತೀವ್ರ ಸ್ವರೂಪದಲ್ಲಿ ಮುಂದುವರಿಯಿತು. ಈ ಹೋರಾಟದ ಕೇಂದ್ರದಲ್ಲಿದ್ದದ್ದು ವಾಜಪೇಯಿಯವರ ಆಡಳಿತದಲ್ಲಿ ತಲೆದೋರಿದ ಕೋಮು ಸಂಘರ್ಷ ಮತ್ತು ಅದನ್ನು ನಿಗ್ರಹಿಸುವಲ್ಲಿ ಸರಕಾರ ತೋರಿದ ನಿಷ್ಕ್ರಿಯತೆ. ಇದಕ್ಕೆ ಸಂಬಂಧಿಸಿದಂತೆ ಗೌಡರು ಸಂಸತ್ತಿನಲ್ಲಿ ಮಾಡಿದ ಭಾಷಣಗಳಲ್ಲಿ ಅಗಾಧ ಸ್ಪಷ್ಟತೆ ಇತ್ತು ಮತ್ತು ಅವರು ರಾಜಕೀಯ ಕೆಸರೆರಚಾಟಕ್ಕೆ ಇಳಿಯದೆ, ಸಾಂವಿಧಾನಿಕ ನಿಲುವನ್ನು ತೆಗೆದುಕೊಳ್ಳುತ್ತಾರೆ.

1998 ಮತ್ತು 2004ರ ನಡುವೆ(ಅಕ್ಟೋಬರ್ 1999 ಮತ್ತು ಫೆಬ್ರವರಿ 2002ರ ನಡುವೆ ಅವರು ಸಂಸತ್ತಿನಲ್ಲಿ ಇಲ್ಲದ ಎರಡು ವರ್ಷಗಳನ್ನು ಹೊರತುಪಡಿಸಿ), ಸಂಸತ್ತಿನಲ್ಲಿ ದೇವೇಗೌಡರಷ್ಟು ಭಾವಾವೇಶದಿಂದ, ವಾಜಪೇಯಿಯವರನ್ನು ತರಾಟೆಗೆ ತೆಗೆದುಕೊಳ್ಳಬಲ್ಲವರು, ಮನವೊಲಿಸಬಲ್ಲವರು, ಅವರ ವೈಫಲ್ಯಗಳನ್ನು ಎತ್ತಿತೋರಿಸಬಲ್ಲವರು ಅವರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲವೆಂದೇ ಹೇಳಬಹುದು. ಆದರೆ ಇದು ವಾಜಪೇಯಿಯವರ ವರ್ತನೆಯ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರಿತು ಎಂಬುದು ಬೇರೆಯೇ ಪ್ರಶ್ನೆಯಾದರೂ, ಗೌಡರು ತಮ್ಮ ಕೆಲಸವನ್ನು ಪಟ್ಟುಬಿಡದೆ, ಒಬ್ಬಂಟಿಯಾಗಿ ಮಾಡಿದರು (ಆ ಕಾಲಕ್ಕೆ ಅವರ ಬೆಂಬಲಕ್ಕೆ ಯಾವುದೇ ಪಕ್ಷವಿರಲಿಲ್ಲ); ಜನತಾ ದಳ ಒಡೆದಿತ್ತು; ಯುನೈಟೆಡ್ ಫ್ರಂಟ್ ಒಕ್ಕೂಟದ ಭಾಗವಾಗಿದ್ದ ಅನೇಕ ‘ಜಾತ್ಯತೀತ’ ಪಕ್ಷಗಳು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು, ಎನ್‌ಡಿಎ ಸರಕಾರದ ಭಾಗವಾಗಿದ್ದವು ಮತ್ತು ಕಾಂಗ್ರೆಸ್ ಇನ್ನೂ ತನ್ನ ನೆಲೆ ಕಂಡುಕೊಳ್ಳದ ಮತ್ತು ಮಾತಿಗೆ ತಡಕಾಡುತ್ತಿದ್ದ ತನ್ನ ಹೊಸ ನಾಯಕಿ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ನಿಧಾನವಾಗಿ ತಲೆ ಎತ್ತುವ ಪ್ರಯತ್ನ ಮಾಡುತ್ತಿತ್ತು.

ಗೌಡರು ಈ ರಾಜಕೀಯ ಸ್ಥಿತ್ಯಂತರಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡರು. ಕೋಮು ಸೌಹಾರ್ದವನ್ನು ಕಾಪಾಡಲು ಸರಕಾರ ಏನು ಪ್ರಯತ್ನ ಮಾಡುತ್ತಿದೆ ಎಂಬುದನ್ನು ಪ್ರಶ್ನಿಸಲು ಅವರಿಗೆ ಸಂಸತ್ತಿನಲ್ಲಿ ವಿಪುಲ ಅವಕಾಶವಿತ್ತು. ದೇಶದಲ್ಲಿ ಆ ಕಾಲಕ್ಕೆ ಯಾವುದೇ ಕ್ಷಣದಲ್ಲಾದರೂ ಕೋಮು ಗಲಭೆಗಳು ಭುಗಿಲೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಅಯೋಧ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ಹಬ್ಬಿದ ಬಾಬರಿ ಮಸೀದಿ-ರಾಮಮಂದಿರ ಸಂಘರ್ಷ, ಗೋಧ್ರಾ ಮಾರಣಹೋಮ, ಚರ್ಚ್ ದಾಳಿಗಳು, ಹಿಂದೂ- ಮುಸ್ಲಿಮರಿಬ್ಬರಿಗೂ ಪವಿತ್ರವಾದ ಪೂಜಾ ಸ್ಥಳಗಳ ಮೇಲಿನ ದಾಳಿ, ಒಡಿಶಾ ವಿಧಾನಸಭೆ ಮೇಲಿನ ದಾಳಿ, ಕ್ರಿಶ್ಚಿಯನ್ ಮಿಷನರಿಯ ಕೊಲೆ ಮತ್ತು ಬಜರಂಗದಳದಂತಹ ಪಂಗಡದ ಉದಯ ಒಂದು ವ್ಯವಸ್ಥಿತ ಯೋಜನೆಯ ಭಾಗವಾಗಿ ನಡೆಯುತ್ತಿರುವಂತೆ ಭಾಸವಾಗುತ್ತಿತ್ತು.

ಮಾಜಿ ಪ್ರಧಾನಿಯಾಗಿರುವುದರಿಂದ ಗೌಡರಿಗೆ ಸದನದ ಮೊದಲ ಸಾಲಿನಿಂದ ಸುದೀರ್ಘ ಭಾಷಣಗಳನ್ನು ಮಾಡುವ ಅವಕಾಶ ದೊರೆತರೂ, ಎಂದಿನಂತೆ ಅದು ಮಾಧ್ಯಮಗಳಲ್ಲಿ ಸುದ್ದಿಯಾಗಲಿಲ್ಲ. ಕೆಲವೊಮ್ಮೆ ವಾಜಪೇಯಿಯವರು ತಮ್ಮ ಸೂತ್ರಪ್ರಾಯ ಶೈಲಿಯಲ್ಲಿ, ‘‘ನನ್ನ ಹಳೆಯ ಸ್ನೇಹಿತರು ಏನು ಹೇಳುತ್ತಾರೆ ಎಂಬುದನ್ನು ನಾನು ಕೇಳಬಯಸುತ್ತೇನೆ’’ ಎಂದು ಹೇಳುವುದನ್ನು ಬಿಟ್ಟರೆ, ಹೆಚ್ಚಾಗಿ ಮೌನವಾಗಿರುತ್ತಿದ್ದರು. ಡಿಸೆಂಬರ್ 2, 1998ರಂದು ಬಿಜೆಪಿ ತನ್ನ ಕೇಸರಿ ಕುಟುಂಬದ ಸಂಘಟನೆಗಳೊಂದಿಗೆ ಚಿಕ್ಕಮಗಳೂರಿನ ಬಾಬಾ ಬುಡಾನ್‌ಗಿರಿ ಬೆಟ್ಟದಲ್ಲಿರುವ ಸೂಫಿ ಪ್ರಾರ್ಥನಾ ಸ್ಥಳದ ಮೇಲೆ ತನ್ನ ಸ್ವಾಮ್ಯವನ್ನು ಸಾಧಿಸಲು ಹೊರಟಾಗ, ಸದನದಲ್ಲಿ ಇದರ ಕುರಿತು ಮೊದಲು ಆಕ್ಷೇಪ ವ್ಯಕ್ತಪಡಿಸಿದವರು ಗೌಡರು. ಎಚ್.ಎನ್. ಅನಂತ್ ಕುಮಾರ್ ಅವರಂತಹ ಬಿಜೆಪಿ ನಾಯಕರು ಬಾಬಾ ಬುಡಾನ್‌ಗಿರಿಯನ್ನು ದಕ್ಷಿಣದ ಅಯೋಧ್ಯೆ ಮಾಡಲು ಪಣ ತೊಟ್ಟಿದ್ದರು.

ಹಿಂದೂ-ಮುಸ್ಲಿಮರಿಬ್ಬರಿಗೂ ಪವಿತ್ರವಾದ, ಸುದೀರ್ಘ ಇತಿಹಾಸವಿದ್ದ ಈ ಪ್ರಾರ್ಥನಾ ಸ್ಥಳವನ್ನು ಬ್ರಹ್ಮ ವಿಷ್ಣು ಮಹೇಶ್ವರರ ಅಪರಾವತಾರವಾದ ದತ್ತಾತ್ರೇಯನ ಪೀಠ, ಇಲ್ಲಿ ಮುಸ್ಲಿಮರಿಗೆ ಸ್ಥಾನವಿಲ್ಲ ಎಂದು ಕರೆದು, ಬಹುಸಂಖ್ಯಾತ ಹಿಂದೂಗಳ ಮನಸ್ಸಿನಲ್ಲಿ ಕೋಮುದ್ವೇಷ ಬಿತ್ತಿ, ಅದರಿಂದ ರಾಜಕೀಯ ಲಾಭ ಗಳಿಸುವುದು ಈ ವಿಷಪೂರಿತ ಕಾರ್ಯಯೋಜನೆಯ ಉದ್ದೇಶವಾಗಿತ್ತು. ಗೌಡರು ನೇರವಾಗಿ ವಾಜಪೇಯಿವರನ್ನು ಎಚ್ಚರಿಸಿದರು: ‘‘ನಿಮ್ಮ ಪಕ್ಷದ ಕರ್ನಾಟಕ ಘಟಕವು ಇದರಿಂದ ಅವರಿಗೆ ಏನೂ ಪ್ರಯೋಜನ ಇಲ್ಲ ಎಂಬುದನ್ನು ಎರಡೆರಡು ಬಾರಿ ಯೋಚಿಸಬೇಕು.

ರಾಜ್ಯ ಸರಕಾರ (ಜೆ.ಎಚ್. ಪಟೇಲ್ ನೇತೃತ್ವದಲ್ಲಿ) ಕಠಿಣ ಕ್ರಮ ಕೈಗೊಳ್ಳಲಿದೆ. ಅವರು ಯಾರಿಗೂ ಹೆದರುವುದಿಲ್ಲ. ಅವರಿಗೆ ಕೇಂದ್ರ ಸರಕಾರದ ನೆರವು ಬೇಕಿಲ್ಲ. ಅವರಿಗೀಗ ಕೇಂದ್ರ ಸರಕಾರದ ದಯೆಯ ಅಗತ್ಯವೂ ಇಲ್ಲ. ರಾಜ್ಯ ಸರಕಾರ ಪರಿಸ್ಥಿತಿಯನ್ನು ನಿಷ್ಠುರವಾಗಿ ನಿಭಾಯಿಸಬಲ್ಲುದು. ನೀವು ನಿಮ್ಮ ಭಯವನ್ನು ವ್ಯಕ್ತಪಡಿಸಿದ್ದೀರಿ. ನೀವು ಹೇಳುವುದನ್ನು ನಾನು ಒಪ್ಪುವುದಿಲ್ಲ. ಆದರೆ ಇದು ಕೇವಲ ಕರ್ನಾಟಕದ ಸಮಸ್ಯೆ ಅಲ್ಲ. ಇದು ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ವಿಚಾರ. ನಾವು ಒಟ್ಟಿಗೆ ಬದುಕಬೇಕೇ ಅಥವಾ ಈ ರೀತಿಯ, ಕ್ಷುಲ್ಲಕ ರಾಜಕೀಯ ಎಂದೇನು ಕರೆಯುತ್ತೇವೆಯೋ, ಅದನ್ನು ಮುಂದುವರಿಸಬೇಕೇ ಎಂಬುದು ಪ್ರಶ್ನೆ.

ನಾನು ಕೊಳಕು ರಾಜಕೀಯ ಎಂಬ ಪದಬಳಸಲು ಇಷ್ಟಪಡುವುದಿಲ್ಲ. ಆದರೆ ಇದು ಕ್ಷುಲ್ಲಕ ರಾಜಕೀಯ... ದಯವಿಟ್ಟು ನಿಮ್ಮ ಪಕ್ಷದ ಘಟಕಕ್ಕೆ ಈ ರೀತಿ ವರ್ತಿಸಬೇಡಿ ಎಂದು ಹೇಳಿ. ಈ ರೀತಿ ವರ್ತಿಸುವುದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ. ಇದು ಅವರು ಹೇಳುವಂತೆ, ಆ ಪುಣ್ಯಕ್ಷೇತ್ರವನ್ನು ಒಂದು ಕೋಮಿನ ಜನರಿಂದ ಬಿಡುಗಡೆ ಮಾಡುವ ಪ್ರಶ್ನೆಯಲ್ಲ... ಈ ದುಷ್ಕೃತ್ಯಕ್ಕೆ ಇಳಿದ ಜನರ ಕೈಯಿಂದ ದೇಶ ಬಿಡುಗಡೆಯಾಗಬೇಕಾಗಿದೆ... ನಾವು ಕರ್ನಾಟಕದಲ್ಲಿ ಇಂತಹ ಕೆಲಸಗಳಿಗೆ ಅವಕಾಶ ನೀಡುವುದಿಲ್ಲ.’’ ಗೌಡರು ಸಂಸತ್ತಿನಲ್ಲಿ ಈ ಮಾತುಗಳನ್ನಾಡುತ್ತಿದ್ದಾಗ, ಕರ್ನಾಟಕದಲ್ಲಿ ಪಟೇಲ್ ಸರಕಾರ ಅದರ ಕೊನೆಯ ದಿನಗಳನ್ನು ಎಣಿಸುತ್ತಿತ್ತು. ರಾಜ್ಯದಲ್ಲಿ ಜನತಾ ದಳ ಒಳಗಿನಿಂದಲೇ ಸ್ಫೋಟಕ್ಕೆ ಸಿದ್ಧವಾಗುತ್ತಿತ್ತು.

ವಾಜಪೇಯಿ ಸಂಪುಟದಲ್ಲಿದ್ದ ಜಾರ್ಜ್ ಫೆರ್ನಾಂಡಿಸ್ ಮತ್ತು ರಾಮಕೃಷ್ಣ ಹೆಗಡೆ ಇಬ್ಬರಿಗೂ ನಿಕಟವರ್ತಿಯಾಗಿದ್ದ ಮುಖ್ಯಮಂತ್ರಿ ಪಟೇಲ್ ನಿಷ್ಕ್ರಿಯರಾಗಿದ್ದರು. 1999ರಲ್ಲಿ, ಪಟೇಲ್ ನೇತೃತ್ವದ ಜನತಾ ದಳದ ಬಣ ಮತ್ತು ಹೆಗಡೆಯವರ ಲೋಕಶಕ್ತಿ ವಿಲೀನಗೊಂಡು ಜನತಾ ದಳ (ಯುನೈಟೆಡ್) ಅಸ್ತಿತ್ವಕ್ಕೆ ಬಂದಿತು. ಎಪ್ರಿಲ್ 16, 1999ರಂದು, ವಾಜಪೇಯಿಯವರು ಸಂಸತ್ತಿನಲ್ಲಿ ವಿಶ್ವಾಸಮತ ನಿರ್ಣಯದಲ್ಲಿ ಸೋಲು ಅನುಭವಿಸುವ ಒಂದು ದಿನದ ಮೊದಲು, ಗೌಡರು ಸದನದಲ್ಲಿ ಗುಜರಾತ್ ಹತ್ಯಾಕಾಂಡದ ಸಮೀಕ್ಷೆಗಾಗಿ ತಾವು ಕೈಗೊಂಡ ಭೇಟಿಯ ಕುರಿತಂತೆ, ಪತ್ರಕರ್ತರು ವರದಿ ಮಾಡುವ ರೀತಿಯಲ್ಲಿ ಮಾತನಾಡಿದರು.

ಮಾಜಿ ಪ್ರಧಾನಮಂತ್ರಿಯಾಗಿ, ಎಸ್‌ಪಿಜಿ ರಕ್ಷಣೆಯೊಂದಿಗೆ ಅವರು ಕೈಗೊಂಡ ಭೇಟಿ ಯಾವ ರೀತಿ ಗಮನ ಸೆಳೆದಿರಬೇಕು ಎಂದು ನಾವು ಊಹಿಸಬಹುದಷ್ಟೆ. ಕೋಮುಗಲಭೆಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಹಾಲಿ ಪ್ರಧಾನಮಂತ್ರಿಗಳಾಗಿದ್ದ ವಾಜಪೇಯಿಯವರು ಒಂದು ದಿನದ ಉಪವಾಸ ಕೈಗೊಂಡಿದ್ದರು. ಗೌಡರು ಅದರ ಉದ್ದೇಶವನ್ನು ಪ್ರಶ್ನಿಸಿದರು: ‘‘ಪ್ರಧಾನಿಗಳು ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು ಏಕೆ? ಅವರು ಹೋಗಿ ಒಂದು ದಿನ ಧರಣಿ ಕುಳಿತರು.

ಅವರು ಹಾಗೆ ಮಾಡಲು ಏನು ಕಾರಣ?... ಅವರು ಯಾವ ತಪ್ಪಿಗೆ ಪ್ರಾಯಶ್ಚಿತ್ತ ಕೈಗೊಳ್ಳಬೇಕು?... ನಾವು ಸರಕಾರ ನಡೆಸುತ್ತಿದ್ದಾಗ ಗುಜರಾತ್‌ನಲ್ಲಿ ಬಿಜೆಪಿ ಸರಕಾರ ಇತ್ತು. ಅದೇ ಕೇಶುಭಾಯಿ ಪಟೇಲ್ ಮುಖ್ಯಮಂತ್ರಿಯಾಗಿದ್ದರು. ಆಗ ಏಕೆ ಬೈಬಲ್ ಸುಡಲಿಲ್ಲ? ನಮ್ಮ ಅವಧಿಯಲ್ಲಿ ಚರ್ಚ್‌ಗಳನ್ನು ಏಕೆ ಸುಡಲಿಲ್ಲ? ಇದಕ್ಕೆಲ್ಲಾ ಕಾರಣ ಏನು ಅಂದರೆ, ವಾಜಪೇಯಿಯವರು ಅಧಿಕಾರಕ್ಕೆ ಬಂದ ಕೂಡಲೆ, ಕೆಲವರಿಗೆ ತಾವು ಏನು ಮಾಡಿದರೂ ಸರಕಾರ ತಮ್ಮನ್ನು ರಕ್ಷಿಸುತ್ತದೆ ಎಂಬ ಧೈರ್ಯ ಸಿಕ್ಕಿತು. ಹಾಗಾಗಿ ಒಂದು ಕೋಮನ್ನು ಗುರಿಯಾಗಿಟ್ಟುಕೊಂಡು ಈ ರೀತಿದಾಳಿ ಮಾಡುವ ಸಂಪ್ರದಾಯ ಶುರುವಾಗಿದೆ...’’

ಹೀಗೆ ಹೇಳುತ್ತಾ, ಗೌಡರು ತಮ್ಮ ಕ್ಷೇತ್ರ ಪ್ರವಾಸದ ಕೆಲವು ವಿವರಗಳನ್ನು ಮಂಡಿಸಿದರು: ‘‘ಸರ್, ಕೇವಲ ಪತ್ರಿಕೆಗಳಲ್ಲಿ ಬಂದ ಸುದ್ದಿಯನ್ನು ನಂಬುವ ಬದಲು, ಅಲ್ಲಿ ನಿಜವಾಗಿಯೂ ಏನು ನಡೆಯಿತು ಎಂಬುದನ್ನು ನೋಡಲು ನಾನು ವೈಯಕ್ತಿಕವಾಗಿ 920 ಕಿ.ಮೀ. ರಸ್ತೆ ಪ್ರಯಾಣ ಕೈಗೊಂಡೆ. ನಾನು ಸಂಘರ್ಷಕ್ಕೀಡಾದ ಪ್ರದೇಶಗಳಿಗೆ ಭೇಟಿ ನೀಡಿದೆ.

ಒಂದೆಡೆ ಮುಸಲ್ಮಾನರು, ಮತ್ತೊಂದೆಡೆ ಹಿಂದೂಗಳು ಮತ್ತು ಬುಡಕಟ್ಟು ಜನಾಂಗದವರು ವಾಸವಿದ್ದ ಒಂದು ಅರೆ ನಗರ ಪ್ರದೇಶಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ, ಕೆಲವು ಮುಸ್ಲಿಮ್ ಸಮಾಜ ಘಾತುಕ ಶಕ್ತಿಗಳಿಂದ ಕೊಲೆಗೊಳಗಾದ ಒಬ್ಬ ಬುಡಕಟ್ಟು ಜನಾಂಗದ ವ್ಯಕ್ತಿಯ ಅಂತ್ಯಸಂಸ್ಕಾರ ಮುಗಿಸಿ, ಹಿಂದೂಧರ್ಮೀಯರ ಗುಂಪೊಂದು ಹಿಂದಿರುಗುತ್ತಿತ್ತು. ನಮ್ಮ ಪದ್ಧತಿಯಲ್ಲಿ ಶವಸಂಸ್ಕಾರ ಮಾಡಿ ಬಂದ ಕೂಡಲೇ ಸ್ನಾನ ಮಾಡುತ್ತಾರೆ. ಅಷ್ಟರಲ್ಲಿ ಅಲ್ಲಿದ್ದ ಹುಡುಗನೊಬ್ಬ ಕೆಲವು ಮುಸ್ಲಿಮರು ಆಯುಧಗಳನ್ನು ಹಿಡಿದುಕೊಂಡು ಬರುತ್ತಿದ್ದಾರೆ ಎಂದು ಕೂಗಿದ. ಅಷ್ಟರಲ್ಲಿ ಅಲ್ಲಿಗೆ ಧಾವಿಸಿದ ಪೊಲೀಸರು, ಅಲ್ಲೇ ಸಮೀಪದಲ್ಲಿದ್ದ ಮನೆಗೆ ಹೋಗಿ ಹೊರಗಿನಿಂದ ಒಳಕ್ಕೆ ಗುಂಡುಹಾರಿಸಿದರು.

ಗುಂಡು ಬಾಗಿಲ ಮೂಲಕ ಹಾದು, ಅವನ ಎದೆ ಸೀಳಿ, ಹಿಂದೆ ಇದ್ದ ಕನ್ನಡಿಗೆ ಬಡಿದು, ಕನ್ನಡಿ ಚೂರಾಗಿತ್ತು... ಆ ವ್ಯಕ್ತಿಗೆ ಈ ಘಟನೆಗಳೊಂದಿಗೆ ಯಾವ ಸಂಬಂಧವೂ ಇರಲಿಲ್ಲ. ಗುಂಡು ಎಲ್ಲಿ ಹೊಡೆಯಿತು ಎಂಬುದನ್ನು ನಾನೇ ಹೋಗಿ ನೋಡಿದೆ. ಇದು ಗುಜರಾತಿನಲ್ಲಿ ನಡೆದ ಘಟನೆ... ಗುಜರಾತಿನ ಗೃಹ ಸಚಿವರು ಸುಮಾರು 10,000ರಿಂದ 12,000 ಒಟ್ಟು ಜನಸಂಖ್ಯೆಯಿರುವ ಆ ಊರಿಗೆ ಹೋದಾಗ, ಕೇವಲ ಹಿಂದೂಗಳ ಮನೆಗಳಿಗೆ ಮಾತ್ರ ಭೇಟಿ ನೀಡುತ್ತಾರೆ ಮತ್ತು ಪೊಲೀಸರಿಂದ ಹತ್ಯೆಗೀಡಾದ ಇತರ ವ್ಯಕ್ತಿಗಳ ಮನೆಮಂದಿಯನ್ನು ಭೇಟಿ ಮಾಡುವ ಗೋಜಿಗೆ ಹೋಗುವುದಿಲ್ಲ. ಸರಕಾರ ಈ ರೀತಿಯ ಧೋರಣೆ ಹೊಂದಿರುವಾಗ, ನಾವು ಈ ಸರಕಾರವನ್ನು ಬೆಂಬಲಿಸುವುದು ಹೇಗೆ? ಪ್ರಧಾನಮಂತ್ರಿ ಪ್ರಾಯಶ್ಚಿತ್ತ ಮಾಡಲು ಬಯಸುತ್ತಾರೆಂದರೆ ಏನೋ ತಪ್ಪಾಗಿದೆ ಎಂದೇ ಅರ್ಥವಲ್ಲವೇ?’’

1999ರ ಎಪ್ರಿಲ್‌ನಲ್ಲಿ ಮಾಡಿದ ಈ ಭಾಷಣದ ಆರು ತಿಂಗಳ ತರುವಾಯ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ನಂತರ, ತುಸು ಕಾಲ ರಾಷ್ಟ್ರ ರಾಜಕಾರಣದಲ್ಲಿ ಅಷ್ಟಾಗಿ ಸಕ್ರಿಯರಾಗಿರದ ಗೌಡರು, ಉಪಚುನಾವಣೆಯಲ್ಲಿ ಗೆದ್ದು, ಫೆಬ್ರವರಿ28, 2002ರಂದು ಗೋಧ್ರಾದಲ್ಲಿ ಗಲಭೆ ಭುಗಿಲೆದ್ದು, ಗುಜರಾತಿನ ಉಳಿದ ಭಾಗಗಳಿಗೆ ಹರಡಿದ ದಿನವೇ ಸಂಸತ್ತಿಗೆ ಮರಳುತ್ತಾರೆ. ತಮ್ಮ ಗಮನ ಮತ್ತು ಶಕ್ತಿಯನ್ನು ಮತ್ತೆ ಕ್ರೋಡೀಕರಿಸಿ, ಮಾರ್ಚ್ 6, 2002ರಂದು ವಾಜಪೇಯಿಯವರಿಗೆ ಇನ್ನೊಂದು ನಿಷ್ಠುರವಾದ ಪತ್ರ ಬರೆಯುತ್ತಾರೆ: ‘‘ಫೆಬ್ರವರಿ 27ರಿಂದ ಗುಜರಾತ್‌ನಲ್ಲಿ ಏನು ನಡೆಯುತ್ತಿದೆ ಎಂಬುದು ಮನುಷ್ಯನ ಕಲ್ಪನೆಗೂ ಮೀರಿದ್ದು ಎಂಬುದನ್ನು ನಾನಿಲ್ಲಿ ಭಾರವಾದ ಹೃದಯದಿಂದ ಹೇಳಬೇಕಾಗಿದೆ.

ಗೋಧ್ರಾದಲ್ಲಿ ನಡೆದ ಭೀಕರ ಹಿಂಸಾಚಾರ ಮತ್ತು ಅದಕ್ಕೆ ಪ್ರತಿಯಾಗಿ ಗುಜರಾತಿನಲ್ಲಿ ನಡೆದ ಅಮಾನವೀಯ ಹತ್ಯಾಕಾಂಡವನ್ನು ನೋಡಿದರೆ, ಇದು ಸರಕಾರ ಪ್ರಾಯೋಜಿತವಲ್ಲದೆ, ಬೇರೇನೂ ಅಲ್ಲ ಎಂದು ನಾವೆಲ್ಲರೂ ಒಮ್ಮತದಿಂದ ಒಪ್ಪುವಂತಾಗಿದೆ. ಗುಜರಾತಿನಲ್ಲಿ ನಡೆದಿರುವ ಎಲ್ಲಾ ಲಜ್ಜಾಹೀನ ಕೃತ್ಯಗಳಿಗೆ ಅಲ್ಲಿನ ಮುಖ್ಯಮಂತ್ರಿ ಸಂಪೂರ್ಣ ಹೊಣೆಗಾರರಾಗಬೇಕಾಗಿದೆ.

ಮುಗ್ಧ ಜನರು ಅನುಭವಿಸಿದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟವನ್ನು ಮೌಲ್ಯಮಾಪನ ಮಾಡಲು ಸರಿಯಾದ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಸರಕಾರದ ವ್ಯಾಪ್ತಿಗೆ ಬರುವುದಿದ್ದರೂ, ಗುಜರಾತಿನಲ್ಲಿ ಉದ್ಭವಿಸಿರುವಂತಹ ಪರಿಸ್ಥಿತಿಯಲ್ಲಿ, ಕೇಂದ್ರ ಸರಕಾರ ತನ್ನ ಕರ್ತವ್ಯ ಮತ್ತು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಪಾರ ಜೀವಹಾನಿ ಮತ್ತು ಆಸ್ತಿ-ಪಾಸ್ತಿಯ ನಷ್ಟ ಅನುಭವಿಸಿದ ಜನರಿಗೆ ರಾಜ್ಯ ಸರಕಾರದಿಂದ ನ್ಯಾಯ ಸಿಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

ಗುಜರಾತಿನ ಮುಖ್ಯಮಂತ್ರಿಯವರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸುತ್ತೇವೆ ಎಂದು ಘೋಷಿಸಿರುವುದು ಅವರ ವೈಫಲ್ಯಗಳನ್ನು ಮುಚ್ಚಿಹಾಕುವ ಪ್ರಯತ್ನವಾಗಿದೆ. ಗುಜರಾತ್ ರಾಜ್ಯದ ನಾಗರಿಕ ಸೇವಾ ಆಡಳಿತ ವ್ಯವಸ್ಥೆಯು ಸೇನೆಯ ಸಹಾಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿಲ್ಲ ಮತ್ತು ಹಿಂಸಾಚಾರವನ್ನು ನಿಗ್ರಹಿಸುವಲ್ಲಿ ಸೇನೆ ತನ್ನ ಪಾತ್ರ ನಿರ್ವಹಿಸಲು ಅಗತ್ಯ ಮಾರ್ಗದರ್ಶನ ನೀಡದೆ, ಅವರ ಕೆಲಸಕ್ಕೆ ಭಂಗ ಉಂಟುಮಾಡಿ, ಹಿಂಸಾಚಾರ ಮುಂದುವರಿಯಲು ಅವಕಾಶ ಮಾಡಿಕೊಡಲಾಯಿತು ಎಂಬುದು ನಿಮಗೆ ತಿಳಿದಿದೆ.

ಇದರಿಂದ ರಾಜ್ಯ ಸರಕಾರದ ಇಂಗಿತ ಸ್ಪಷ್ಟವಾಗಿ ಅರ್ಥವಾಗುತ್ತದೆ. ಭಾರತ ಸರಕಾರದ ಮೇಲೆ ಎಷ್ಟೇ ಆರ್ಥಿಕ ಹೊರೆ ಬಿದ್ದರೂ, ಹಿಂಸಾಚಾರಕ್ಕೆ ಒಳಗಾಗಿ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ ಅನುಭವಿಸಿದ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ವ್ಯವಸ್ಥೆಯನ್ನು ಒದಗಿಸುವುದು ಕೇಂದ್ರ ಸರಕಾರದ ತುರ್ತು ಜವಾಬ್ದಾರಿಯಾಗಿದೆ.

ಗುಜರಾತಿನ ಮುಖ್ಯಮಂತ್ರಿಗಳು ಮತ್ತು ಅವರ ಸರಕಾರದ ಧೋರಣೆ ಸಂಪೂರ್ಣವಾಗಿ ತಿಳಿದಿರುವುದರಿಂದ, ಗುಜರಾತಿನಲ್ಲಿ ನಡೆದ ಹಿಂಸಾಚಾರದ ಕೂಲಂಕಷ ತನಿಖೆ ನಡೆಸಲು ಸುಪ್ರೀಂ ಕೋರ್ಟಿನ ಹಾಲಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರದ ಆಯೋಗವನ್ನು (ತನಿಖಾ ಆಯೋಗ ರಚನೆಯ ಕಾಯ್ದೆಯ ಅನುಸಾರವಾಗಿ) ತಕ್ಷಣವೇ ರಚಿಸಬೇಕೆಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಗೋಧ್ರಾದಲ್ಲಿ ರೈಲಿನಲ್ಲಿದ್ದ ಕರಸೇವಕರ ಮೇಲೆ ನಡೆದ ದಾಳಿಯಿಂದ ಹಿಡಿದು ಘೋರ ಕೋಮು ಗಲಭೆಗೆ ಕಾರಣವಾದ ಎಲ್ಲಾ ಅಂಶಗಳನ್ನು ಈ ಉನ್ನತಾಧಿಕಾರದ ತನಿಖಾ ಆಯೋಗದ ವ್ಯಾಪ್ತಿ (terms of reference of the high-power commission)ಗೆ ಒಳಪಡಿಸಬೇಕು.’’

ಗೌಡರ ಪತ್ರವು ಬಹುತೇಕ ಎಲ್ಲ ಅಂಶಗಳನ್ನು ಒಳಗೊಂಡಿತ್ತು-ಘಟನೆಗಳ ಅನುಕ್ರಮಣಿಕೆ, ಕೇಂದ್ರ-ರಾಜ್ಯ ಸರಕಾರದ ಕಾನೂನುಗಳು ಮತ್ತು ಸಂಬಂಧಗಳು, ಸಂತ್ರಸರಿಗೆ ಪರಿಹಾರ ಮತ್ತು ಪುನರ್ವಸತಿ, ಯಾರು ಪರಿಹಾರ/ಪುನರ್ವಸತಿಯ ಜವಾಬ್ದಾರಿ ವಹಿಸಿಕೊಳ್ಳಬೇಕು, ಯಾರು, ಯಾವ ಕಾನೂನಿನ ಅಡಿಯಲ್ಲಿ ವಿಚಾರಣೆ ನಡೆಸಬೇಕು, ಅದರ ವ್ಯಾಪ್ತಿ ಏನಾಗಿರಬೇಕು ಎಂಬಿತ್ಯಾದಿ ಅಂಶಗಳ ಬಗ್ಗೆ ಸಂಕ್ಷಿಪ್ತ ವಿಶ್ಲೇಷಣೆಯನ್ನು ಪತ್ರ ಒಳಗೊಂಡಿತ್ತು. ವ್ಯಾವಹರಿಕ ಇಂಗ್ಲಿಷಿನಲ್ಲಿ ಗೌಡರು ಬರೆದ ಪತ್ರವು, ಅವರ ಅಪಾರ ರಾಜಕೀಯ ಅನುಭವ ಮತ್ತು ಸದಾ ಪರಿಹಾರ ಕ್ರಮಗಳನ್ನು ಹುಡುಕುವ ಅವರ ಕಾರ್ಯವಿಧಾನವನ್ನು ಎತ್ತಿ ತೋರಿಸುತ್ತದೆ. ಅವರು ಒಂದು ಪತ್ರಕ್ಕೆ ನಿಲ್ಲಿಸುವುದಿಲ್ಲ. ನಾಲ್ಕು ದಿನಗಳ ನಂತರ, ಮಾರ್ಚ್ 10ರಂದು, ವಾಜಪೇಯಿಯವರಿಗೆ ಇನ್ನೊಂದು ಪತ್ರ ಬರೆಯುತ್ತಾರೆ. ಇದು ತುಂಬಾ ಭಾವನಾತ್ಮಕವಾಗಿದ್ದು, ವಾಜಪೇಯಿಯವರ ಮನಸ್ಸನ್ನು ಪರಿವರ್ತಿಸುವ ಉದ್ದೇಶ ಹೊಂದಿತ್ತು.

Similar News