ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ಪೊಲೀಸರಿಂದ ದಿಢೀರ್ ತಪಾಸಣೆ

Update: 2023-04-02 14:33 GMT

ಮಂಗಳೂರು: ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ರವಿವಾರ ಮಧ್ಯಾಹ್ನ ಭಾರೀ ಸಂಖ್ಯೆಯ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ನೇತೃತ್ವದಲ್ಲಿ ಡಿಸಿಪಿಗಳಾದ ಅಂಶುಕುಮಾರ್ ಮತ್ತು ದಿನೇಶ್ ಕುಮಾರ್ ಸಹಿತ ಹಿರಿಯ ಅಧಿಕಾರಿಗಳ ಸಹಿತ ಕೆಎಸ್ಸಾರ್ಪಿ ಹಾಗೂ ವಿವಿಧ ಠಾಣೆಗಳ ಸುಮಾರು 300 ಕ್ಕೂ ಅಧಿಕ ಪೊಲೀಸರು ಏಕಕಾಲಕ್ಕೆ ಜೈಲಿಗೆ ದಾಳಿ ನಡೆಸಿ ಕೈದಿಗಳನ್ನು ಸುಮಾರು ಒಂದೂವರೆ ಗಂಟೆ ತಪಾಸಣೆಗೊಳಪಡಿಸಿದರು.

ರವಿವಾರ ಮಧ್ಯಾಹ್ನ 12ಕ್ಕೆ ಕಾರಾಗೃಹದ ಮುಂದೆ ಏಕಾಏಕಿ ಪೊಲೀಸ್ ವಾಹನಗಳು ದೌಢಾಯಿಸಿವೆ.  ಸಾಲಾಗಿ ನಿಂತ ವಾಹನಗಳಿಂದ ಇಳಿದ ಪೊಲೀಸರು ಕಾರಾಗೃಹಕ್ಕೆ ದಿಢೀರನೆ ಪ್ರವೇಶಿ ಅಚ್ಚರಿ ಮೂಡಿಸಿದರು.

ಆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಆಯುಕ್ತ ಕುಲದೀಪ್ ಕುಮಾರ್ ಜೈನ್ ‘ಇಂತಹ ಕಾರ್ಯಾಚರಣೆಯನ್ನು ಆಗಾಗ ಮಾಡಲಾಗುತ್ತದೆ. ಅದರಂತೆ ನಾವಿಂದು ಕಾರಾಗೃಹದೊಳಗೆ ಪ್ರವೇಶಿಸಿ ಕೈದಿಗಳ ತಪಾಸಣೆ ನಡೆಸಿದ್ದೇವೆ. ಈ ವೇಳೆ ಬೀಡಿ, ಸಿಗರೇಟು, ತಂಬಾಕು ಪೊಟ್ಟಣಗಳು ಪತ್ತೆಯಾಗಿದೆ. ಗಾಂಜಾ ಮತ್ತಿತರ ಮಾದಕ ವಸ್ತು, ಇತರ ಪರಿಕರಗಳು ಸಿಕ್ಕಿಲ್ಲ. ಕೈದಿಗಳು ಮೊಬೈಲ್ ಬಳಕೆ ಮಾಡುತ್ತಿರುವ ಬಗ್ಗೆಯೂ ಮಾಹಿತಿ ದೊರೆತಿಲ್ಲ’ ಎಂದರು.

ಕಾರಾಗೃಹದಲ್ಲಿ ಕೆಎಸ್‌ಐಎಸ್‌ಎಫ್ (ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ) ಹಾಗೂ ಕಾರಾಗೃಹ ಅಧಿಕಾರಿಗಳು ನಿರಂತರವಾಗಿ ತಪಾಸಣೆ ನಡೆಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಪೊಲೀಸ್ ಇಲಾಖೆಯೂ ತಪಾಸಣೆ ನಡೆಸಿದೆ. ಈ ನಿಟ್ಟಿನಲ್ಲಿ ಕಾರಾಗೃಹ ಅಧೀಕ್ಷಕರೊಂದಿಗೆ ಮಾತುಕತೆ ನಡೆಸಿದ್ದೇನೆ’ ಎಂದು ಕುಲದೀಪ್ ಕುಮಾರ್ ಜೈನ್ ತಿಳಿಸಿದರು.

Similar News