ಕನ್ನಡ ಸುದ್ದಿ ಚಾನೆಲ್‌ಗಳು ಅವನತಿಯ ಹಾದಿ ಹಿಡಿದಿರುವುದಕ್ಕೆ ಕಾರಣಗಳೇನು?

Update: 2023-04-02 09:18 GMT

ಇದು ಕನ್ನಡದ ಚಾನೆಲ್‌ಗಳ ಹಣೆಬರಹ. ನಿರ್ದಿಷ್ಟ ಸಮಯದಲ್ಲಿ ಪ್ರಸಾರವಾಗುವ ನಿರ್ದಿಷ್ಟ ಕಾರ್ಯಕ್ರಮಗಳನ್ನು ಎಷ್ಟು ವೀಕ್ಷಕರು ವೀಕ್ಷಿಸಿದ್ದಾರೆ ಎಂಬುದನ್ನು ಅಧ್ಯಯನ ಮಾಡಲು ‘ಟಿಆರ್‌ಪಿ (ಟಾರ್ಗೆಟ್ ರೇಟಿಂಗ್ ಪಾಯಿಂಟ್ಸ್) ಎಂದು ಕರೆಯಲಾಗುತ್ತದೆ. ಚಾನೆಲ್ ಒಂದು ಒಂದಿಡೀ ವಾರ ಪ್ರಸಾರ ಮಾಡಿದ ಎಲ್ಲ ಕಾರ್ಯಕ್ರಮಗಳನ್ನು ನಿರ್ದಿಷ್ಟಪಡಿಸಿದ ವೀಕ್ಷಕರಲ್ಲಿ ಎಷ್ಟು ಜನ ವೀಕ್ಷಿಸಿದ್ದಾರೆ ಎಂಬುದರ ಸರಾಸರಿ ವಿವರವನ್ನು ‘ಜಿಆರ್‌ಪಿ’ (ಗ್ರಾಸ್ ರೇಟಿಂಗ್ ಪಾಯಿಂಟ್ಸ್) ಎನ್ನಲಾಗುತ್ತದೆ. ಬಾರ್ಕ್ (ಬ್ರಾಡ್ ಕಾಸ್ಟಿಂಗ್ ಆಡಿಯೆನ್ಸ್ ರಿಸರ್ಚ್ ಕೌನ್ಸಿಲ್)ನವರು ಯಾವ ಯಾವ ಚಾನೆಲ್‌ಗಳನ್ನು, ಚಾನೆಲ್‌ಗಳ ಯಾವ ಕಾರ್ಯಕ್ರಮಗಳನ್ನು ಎಷ್ಟು ಜನರು ವೀಕ್ಷಿಸುತ್ತಿದ್ದಾರೆ ಎಂಬುದನ್ನು ಅಳತೆ ಮಾಡಲು ವೀಕ್ಷಕರನ್ನು ನಿಗದಿಪಡಿಸಿ ಅವರ ಟಿವಿಗಳಿಗೆ ಸಾಧನಗಳನ್ನು ಅಳವಡಿಸಿ ಸಮೀಕ್ಷೆ ಮಾಡುತ್ತಾರೆ. ಆ ಸಮೀಕ್ಷೆಗಳನ್ನು ಆಧರಿಸಿ ಮಾಧ್ಯಮಗಳಿಗೆ ಜಾಹೀರಾತುಗಳನ್ನು ಹಾಗೂ ಜಾಹೀರಾತು ದರಗಳನ್ನು ನಿಗದಿಪಡಿಸಲಾಗುತ್ತದೆ.

ಕರ್ನಾಟಕದಲ್ಲಿ ಮನರಂಜನೆ ಮತ್ತು ಸುದ್ದಿಯನ್ನು ಮಾತ್ರ ಪ್ರಸಾರ ಮಾಡುವ ಮಾಧ್ಯಮಗಳ ಸರಾಸರಿ ಜಿಆರ್‌ಪಿ 10ನೇ ವಾರದಲ್ಲಿ 3,782.10 ರಷ್ಟು ಇದೆ. ಆದರೆ ನ್ಯೂಸ್ ಚಾನೆಲ್‌ಗಳ ಸರಾಸರಿ ಜಿಆರ್‌ಪಿ ಕೇವಲ 232.5ರಷ್ಟು ಇದೆ. ಒಟ್ಟಾರೆ ವೀಕ್ಷಕರಲ್ಲಿ ಶೇ.6.5ರಷ್ಟು ಜನ ಮಾತ್ರ ಸುದ್ದಿವಾಹಿನಿಗಳನ್ನು ನೋಡುತ್ತಿದ್ದಾರೆ.

ಕನ್ನಡದ ಸುದ್ದಿವಾಹಿನಿಗಳ ವಿಚಾರಕ್ಕೆ ಬಂದರೆ ಜನವರಿ ಮೊದಲ ವಾರದಿಂದ ಆರಂಭಗೊಂಡು ಇದುವರೆಗೆ ಒಟ್ಟು 11 ವಾರಗಳಾಗಿವೆ. ನನ್ನ ಬಳಿ 10 ವಾರಗಳ ಸಮಗ್ರ ಚಿತ್ರಣವಿದೆ. ಹೆಚ್ಚು ವಿವರಗಳಿಗೆ ಹೋಗದೆ ನಾನು 4, 9 ಮತ್ತು 10ನೇ ವಾರಗಳ ಜಿಆರ್‌ಪಿಯನ್ನು ಮಾತ್ರ ಇಲ್ಲಿ ಕೊಟ್ಟಿದ್ದೇನೆ. 7ನ್ಯೂಸ್ ಚಾನೆಲ್‌ಗಳ ವಿವರದೊಂದಿಗೆ ಕನ್ನಡದ ಎಲ್ಲಾ ನ್ಯೂಸ್ ಚಾನೆಲ್‌ಗಳ ಸರಾಸರಿಯನ್ನು ಕೊಟ್ಟಿದ್ದೇನೆ.  ಚಾನೆಲ್‌ವಾರು ವಿವರಗಳಿಗೆ ಹೋಗುವುದಿಲ್ಲ. 

ರಾಜ್ಯದ ಟಿವಿ ವೀಕ್ಷಕರನ್ನು ನಾಲ್ಕು ಕೆಟಗರಿಗಳಲ್ಲಿ ವರ್ಗೀಕರಣ ಮಾಡಲಾಗಿದೆ. 1. ಗ್ರಾಮೀಣ ಕರ್ನಾಟಕದ ವೀಕ್ಷಕರು 2. ಪಟ್ಟಣ ಹಾಗೂ ನಗರಗಳ ವೀಕ್ಷಕರು 3. ಬೆಂಗಳೂರಿನ ವೀಕ್ಷಕರು 4. ಒಟ್ಟಾರೆ ರಾಜ್ಯದ ಸರಾಸರಿ ವೀಕ್ಷಕರು ಎಂದು. ಮೇಲಿನ ಟೇಬಲನ್ನು ನೋಡಿ; 4ನೇ ವಾರಕ್ಕೂ 10ನೇ ವಾರಕ್ಕೂ ಹೋಲಿಸಿದರೆ ಗ್ರಾಮೀಣ ಕರ್ನಾಟಕದ ವೀಕ್ಷಕರ ಸಂಖ್ಯೆ 12.02ರಷ್ಟು ಕಡಿಮೆಯಾಗಿದೆ. ನಗರ ಪಟ್ಟಣಗಳ ವೀಕ್ಷಕರ ಸಂಖ್ಯೆ 23.82ರಷ್ಟು ಕಡಿಮೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬೆಂಗಳೂರಿನ ವೀಕ್ಷಕರ ಜಿಆರ್‌ಪಿ 132ರಷ್ಟು ಕಡಿಮೆಯಾಗಿದೆ ಮತ್ತು ಒಟ್ಟಾರೆ ಕರ್ನಾಟಕದ ಜಿಆರ್‌ಪಿ 16.72ರಷ್ಟು ಕಡಿಮೆಯಾಗಿದೆ. 9ನೇ ವಾರದಲ್ಲಿ ಮಾಡಾಳು ವಿರೂಪಾಕ್ಷಪ್ಪನವರ ಮಗನ ಭ್ರಷ್ಟಾಚಾರದ ವಿರುದ್ಧ ಸುವರ್ಣ, ಟಿವಿ ಫೈವ್ ಮತ್ತು ಒಂದೆರಡು ಚಾನೆಲ್‌ಗಳು ಆಡಳಿತಾರೂಢ ಸರಕಾರದ ವಿರುದ್ಧವಾದ ನಿಲುವನ್ನು ತೆಗೆದುಕೊಂಡಿದ್ದವು. ಹಾಗಾಗಿ ಆ ವಾರ ಸುವರ್ಣ ಸುದ್ದಿವಾಹಿನಿಯ ಜಿಆರ್‌ಪಿ 35.74ರಿಂದ 37.06ಕ್ಕೆ ಏರಿಕೆ ಕಂಡಿತ್ತು. ಸಾಮಾನ್ಯವಾಗಿ ಆಡಳಿತಾರೂಢ ಬಿಜೆಪಿಯ ಪರವಾಗಿ ಈ ಚಾನೆಲ್ ಕೆಲಸ ಮಾಡುತ್ತದೆ ಎಂಬ ಆರೋಪ ಇದೆ. ಆದರೆ ಆ ಆರೋಪಕ್ಕೆ ವಿರುದ್ಧವಾಗಿ ಈ ವಿಚಾರದಲ್ಲಿ ವರ್ತಿಸಿತ್ತು. ಈ ವಿಷಯದ ನಂತರ ಮತ್ತದೇ ಹಳೆಯ ಚಾಳಿಗೆ ಮರಳಿತು. 10ನೇ ವಾರ ಜನರು ಆ ವಾಹಿನಿಯನ್ನು ನೋಡುವುದನ್ನೂ ಕಡಿಮೆ ಮಾಡಿದರು.

ಅಂಗೈ ಹುಣ್ಣಿನಂತೆ ಜನಸಂಕಷ್ಟದ ಕುರಿತ ಸತ್ಯವು ಟಿವಿಗಳವರ ಕಣ್ಣಿಗೆ ರಾಚಿ ತೋರುತ್ತಿದೆ. ಆದರೂ ತಮ್ಮ ವೃತ್ತಿ ಧರ್ಮವನ್ನು ತೊತ್ತಳ ತುಳಿದು ಆಡಳಿತಾರೂಢರ ಪರವಾಗಿ ನಿಂತಿವೆ. ಯಾರು ಜನರ ಪರವಾಗಿ ನಿಲ್ಲುತ್ತಾರೋ ಅಂಥವರ ಪರವಾಗಿ ಜನರು ನಿಲ್ಲುತ್ತಾರೆ. ಇಲ್ಲದೆ ಹೋದರೆ ಜನರು ನಿಟ್ಟುಸಿರು ಬಿಟ್ಟು ಎದ್ದು ಹೋಗುತ್ತಾರೆ. ಸುದ್ದಿವಾಹಿನಿಗಳಿಗೆ ಜಾಹೀರಾತು ಕಡಿಮೆಯಾಗುತ್ತವೆ. ಹಾಗಾಗಿ ಸದಾ ಸರಕಾರಗಳ ಹಂಗಿನಲ್ಲಿ ಇರಬೇಕಾಗುತ್ತದೆ. ಹೀಗಾದ ಮೇಲೆ ಜನರ ನೋವಿಗೆ ಮಿಡಿವ ಪ್ರಾಣಮಿತ್ರರಾಗುವ, ದಿಟ್ಟತನದಿಂದ ಜನರ ಜೊತೆ ನಿಲ್ಲುವ ಧೈರ್ಯವಂತಿಕೆ, ವೃತ್ತಿಪರತೆ ಮತ್ತು ವೃತ್ತಿಧರ್ಮವನ್ನು ಎಲ್ಲಿಂದ ನಿರೀಕ್ಷಿಸಲು ಸಾಧ್ಯ?

ಕನ್ನಡದ ಚಾನೆಲ್‌ಗಳ ಈ ಪರಿಸ್ಥಿತಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆಯನ್ನು ತೋರಿಸುತ್ತಿದೆ. ಈ ಬರಹ ಪ್ರಕಟಗೊಂಡ ಮೇಲೆ ಮುಂದಿನ ಅಂಕಿ ಅಂಶಗಳನ್ನೂ ಮ್ಯಾನಿಪುಲೇಟ್ ಮಾಡಬಹುದು. ಆದರೆ ಜನರ ಮನಸ್ಥಿತಿಯಂತೂ ಆಡಳಿತ ವಿರೋಧಿಯಾಗಿದೆ. ಜನವಿರೋಧಿಗಳ ಸ್ಥಾನದಲ್ಲಿರುವ ಆಡಳಿತಾರೂಢರ ಜೊತೆಯಲ್ಲಿ ನಿಂತ ಸುದ್ದಿವಾಹಿನಿಗಳ ವಿರುದ್ಧವೂ ಇದೆ.

ದೇಶದ ಬಹುಪಾಲು ಮಾಧ್ಯಮಗಳು ಹೀಗೇಕೆ ವರ್ತಿಸುತ್ತಿವೆ? ಎಂಬುದಕ್ಕೆ ಉತ್ತರ ಸರಳವಲ್ಲ. ಯಾಕೆಂದರೆ ದೇಶದ ಬಹುಪಾಲು ಮಾಧ್ಯಮಗಳ ಸಂಪಾದಕರು ಬ್ರಾಹ್ಮಣರಾಗಿದ್ದಾರೆ ಅಥವಾ ಮೇಲ್ಜಾತಿಗಳಿಗೆ ಸೇರಿದ್ದಾರೆ. ಬಹುಪಾಲು ಸುದ್ದಿವಾಹಿನಿಗಳು ಕಾರ್ಪೊರೇಟ್ ಬಂಡವಾಳಿಗರ ಕೈಯಲ್ಲಿವೆ. ಈ ಇಬ್ಬರೂ ಆಡಳಿತಾರೂಢ ಬಿಜೆಪಿಯ ಹಿತಾಸಕ್ತಿಗಾಗಿ ದುಡಿಯುತ್ತಿದ್ದಾರೆೆ. ಬಿಜೆಪಿಯು ಈ ಎರಡು ವರ್ಗಗಳ ಹಿತಾಸಕ್ತಿಯನ್ನು ಕಾಪಾಡುತ್ತಿದೆ. ಕಾರ್ಪೊರೇಟ್ ಬಂಡವಾಳಿಗರ ತೆರಿಗೆಯನ್ನು ಕಡಿಮೆ ಮಾಡಿ ಬಡಜನರ ಮೇಲಿನ ತೆರಿಗೆ ಹೊರೆಯನ್ನು ಹೆಚ್ಚಿಸುತ್ತಿದೆ. ಹಾಗಾಗಿ ಜನರ ದೇಹದಿಂದ ಜಿಗಣೆಗಳ ಹಾಗೆ ರಕ್ತ ಕುಡಿಯುತ್ತಿದ್ದರೂ, ಅವರು ರಕ್ತ ಕುಡಿಯುವುದು ಜನರ ಆರೋಗ್ಯಕ್ಕೆ ಒಳ್ಳೆಯದು ಎಂಬ ನೆರೇಟಿವ್‌ಗಳನ್ನು ಮೀಡಿಯಾಗಳು ಸೃಷ್ಟಿಸುತ್ತಿವೆ. ನೋಟ್ ಬ್ಯಾನ್ ಆದಾಗ ಚಿಪ್ಪು-ಗಿಪ್ಪುಗಳೆಂದು ಕೆಲವರು ಅಸಹ್ಯವಾಗಿ ಆರ್ಭಟಿಸಿ ಮೂರ್ಖರಾದರು, ಕೋವಿಡ್ ಸಂದರ್ಭದಲ್ಲಿ ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಜನರನ್ನು ಎತ್ತಿಕಟ್ಟಲು ನಿರಂತರ ಕಾರ್ಯಕ್ರಮಗಳನ್ನು ಮಾಡಿದರು. 20 ಲಕ್ಷ ಕೋಟಿ ರೂ. ಪ್ಯಾಕೇಜು ಎಂದು ಕೂಗಿದರು. ಈಗ ಜನ ಕೇಳುತ್ತಿದ್ದಾರೆ ನೀವು ಯಾಕೆ ಸುಳ್ಳು ಹೇಳಿದಿರಿ? ನಿಮ್ಮ ಸುಳ್ಳುಗಳನ್ನು ಕೇಳುವುದಕ್ಕೆ ನಾವು ಹಣ ಕೊಟ್ಟು ನಿಮ್ಮ ದರಿದ್ರದ ಚಾನೆಲ್‌ಗಳನ್ನು ನೋಡಬೇಕೆ? ಎಂದು. ಈ ಪ್ರಶ್ನೆಗಳಿಗೆ ಮೀಡಿಯಾಗಳ ಬಳಿ ಉತ್ತರ ಇಲ್ಲ. ಮತ್ತೆ ಹೊಸ ಸುಳ್ಳುಗಳನ್ನು ಹುಡುಕಿ ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿವೆ.

ಒಂದೆರಡು ಜಾತಿಗಳ ಹಾಗೂ ಕಾರ್ಪೊರೇಟ್ ಬಂಡವಾಳಿಗರ ಹಿತಾಸಕ್ತಿಯನ್ನು ನಿರಂತರವಾಗಿ ಈ ಮೀಡಿಯಾಗಳು ರಕ್ಷಿಸುತ್ತಿವೆ ಎಂಬ ಆರೋಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಮ್ಮ ಹಿತಾಸಕ್ತಿಗೆ ಹಾಗೂ ತಮ್ಮ ಹಿತಾಸಕ್ತಿ ರಕ್ಷಕರಾದ ಬಿಜೆಪಿಯವರ ಪ್ರತೀ ವರ್ತನೆಯನ್ನು ದೇಶಪ್ರೇಮವೆಂತಲೂ, ಅದನ್ನು ಯಾರಾದರೂ ಪ್ರಶ್ನೆ ಮಾಡಿದರೆ ಅದನ್ನು ದೇಶದ್ರೋಹವೆಂತಲೂ ವಿವರಿಸಲು ಟಿವಿಗಳು ಪ್ರಯತ್ನಿಸುತ್ತಿವೆ. ಟಿ.ವಿ. ವಾಹಿನಿಗಳು ಸೃಷ್ಟಿಸುತ್ತಿರುವ ಈ ನೆರೇಟಿವ್‌ಗಳು ಜನದ್ರೋಹಿ ಎಂದು ಇತ್ತೀಚೆಗೆ ರಾಹುಲ್‌ಗಾಂಧಿಯವರು ಸಿಸೋಡಿಯಾ ಎಂಬ ಪತ್ರಕರ್ತನಿಗೆ ‘‘ನೀವು ಪತ್ರಕರ್ತರೆಂದು ಶೆಲ್ಟರ್ ತೆಗೆದುಕೊಳ್ಳುವ ಬದಲು ಎದೆಯ ಮೇಲೆ ಬಿಜೆಪಿ ಚಿಹ್ನೆಯನ್ನು ಹಾಕಿಕೊಂಡು ಬಂದರೆ ಆಗ ನಿಮ್ಮ ಭಾಷೆಯಲ್ಲೇ ಉತ್ತರಿಸಲು ನನಗೆ ಅನುಕೂಲವಾಗುತ್ತದೆ’’ ಎಂದು ಅವಮಾನಿಸಿದರೆಂದು ವಿವಾದ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕಳೆದ 9 ವರ್ಷಗಳಿಂದ ಮಾಧ್ಯಮಗಳ ವರ್ತನೆಯನ್ನು ನೋಡಿದರೆ ಆಡಳಿತಾರೂಢ ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿವೆ.  ಇವನ್ನೆಲ್ಲ ನೋಡಿಯೆ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರು ‘‘ಮಾಧ್ಯಮಗಳು ಈಗ ವಾಚ್‌ಡಾಗ್ ಅಲ್ಲ ಲ್ಯಾಪ್‌ಡಾಗ್’’ ಎಂದು ಕರೆದಿದ್ದರು. ಇದನ್ನು ಆಧರಿಸಿಯೇ ಎನ್‌ಡಿ ಟಿವಿಯ ಮಾಜಿ ಪತ್ರಕರ್ತ ರವೀಶ್‌ಕುಮಾರ್ ಅವರು ‘ಗೋದಿ ಮೀಡಿಯಾ’ (ಲ್ಯಾಪ್ ಡಾಗ್) ಎಂದು ಕರೆದರು. ಮಾಧ್ಯಮಗಳ ಕುರಿತು ‘ಗೋದಿ ಮೀಡಿಯಾ’ ಎಂಬುದು ಅಧಿಕೃತ ನೆರೇಟಿವ್ ಆಗಿಬಿಟ್ಟಿದೆ.

ಈಗ ಸುದ್ದಿ ಮಾಧ್ಯಮಗಳ ಮುಂದೆ ಇರುವ ಆಯ್ಕೆಗಳು ಎರಡೆ. ತಾವು ಜನರ ಜೊತೆ ನಿಂತು ಪ್ರಜಾಪ್ರಭುತ್ವದ ಆಶಯಗಳನ್ನು ರಕ್ಷಿಸುವುದು. ಆ ಮೂಲಕ ತಾವೂ ಉಳಿದು ದೇಶವನ್ನು ಉಳಿಸುವುದು. ಮತ್ತೊಂದು ಅಧಿಕಾರಸ್ಥರಿಗೆ, ದ್ವೇಷವಾದಿಗಳಿಗೆ ಮಣಿದು ಜನತೆಯ ಶತ್ರುಗಳಾಗುವುದು ಆ ಮೂಲಕ ತಾವೂ ಅಳಿದು ದೇಶದ ಪ್ರಜಾತಂತ್ರವನ್ನು ಅಪಾಯಕ್ಕೆ ತಳ್ಳುವುದು. ಈ ಎರಡು ಆಯ್ಕೆಗಳನ್ನು ಹೊರತುಪಡಿಸಿ ಬೇರೆ ದಾರಿಗಳು ಕಾಣುತ್ತಿಲ್ಲ. ಒಂದಂತೂ ಸತ್ಯ ಜನರ ಜೊತೆ ನಿಲ್ಲದ ಮಾಧ್ಯಮಗಳಿರುವ ಸಮಾಜಗಳು ಅವನತಿಯ ಹಾದಿಯಲ್ಲಿರುತ್ತವೆ ಎಂಬುದಂತೂ ಸ್ಪಷ್ಟ. ಈ ಕಾರಣದಿಂದಲೇ ಸಾಮಾಜಿಕ ಮಾಧ್ಯಮಗಳು ಸಮಾಜದಲ್ಲಿ ಕ್ರಿಯಾಶೀಲವಾಗಿವೆ. ಜನರು ತಮಗೆ ಬೇಕಾದ ಮಾಧ್ಯಮಗಳನ್ನು ಕಟ್ಟಿ ನಿಲ್ಲಿಸಲು ಪ್ರಾರಂಭಿಸಿದ್ದಾರೆ. ಬ್ರೆಕ್ಟ್ ಹೇಳಿದಂತೆ ವಿವೇಕವೆಂಬುದು ಬಾಯಿಂದ ಬಾಯಿಗೆ ಹರಿದು ಸಮಾಜಗಳನ್ನು ಬದುಕಿಸಬೇಕೋ ಏನೊ?

Similar News