ಬೆಂಗಳೂರು: ಸಿಮೆಂಟ್ ತುಂಬಿದ್ದ ಲಾರಿ ಹರಿದು ಮಹಿಳೆ ಮೃತ್ಯು
ಸಾರ್ವಜನಿಕರಿಂದ ಪ್ರತಿಭಟನೆ, ಲಘು ಲಾಠಿ ಪ್ರಹಾರ
ಬೆಂಗಳೂರು, ಎ.2: ಬೆಂಗಳೂರಿನ ನಾಯಂಡಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸಿಮೆಂಟ್ ತುಂಬಿದ್ದ ಲಾರಿ ಸ್ಕೂಟರ್ ಮೇಲೆ ಹರಿದು ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಅದೃಷ್ಟವಶಾತ್ ಮಗು ಹಾಗೂ ಮತ್ತೋರ್ವ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅನುಷಾ (29) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಸಂಬಂಧಿ ವನಜಾಕ್ಷಿ (50) ಎಂಬುವವರ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ 7 ವರ್ಷದ ಬಾಲಕ ಬದುಕುಳಿದಿದ್ದಾನೆ.
ರವಿವಾರ ಮಧ್ಯಾಹ್ನ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ಬಳಿ ಘಟನೆ ನಡೆದಿದ್ದು, ದೀಪಾಂಜಲಿ ನಗರ ಕಡೆಯಿಂದ ಸ್ಕೂಟರ್ ನಲ್ಲಿ ಬರುತ್ತಿದ್ದಾಗ ನಾಯಂಡಹಳ್ಳಿ ಜಂಕ್ಷನ್ ಬಳಿ ಸ್ಕೂಟರ್ ವಾಹನಕ್ಕೆ ಢಿಕ್ಕಿಯಾದ ಲಾರಿ ಅನುಷಾ ತಲೆ ಮೇಲೆ ಹರಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಸಂಬಂಧಿ ವನಜಾಕ್ಷಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ, ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಬಳಿಕ ಕೆಎಸ್‍ಆರ್‍ಟಿಸಿ ಬಸ್ಸಿಗೆ ಲಾರಿ ಢಿಕ್ಕಿಯಾಗಿದ್ದು, ಬಸ್ ನಲ್ಲಿದ್ದವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಲಾಠಿ ಪ್ರಹಾರ: ಲಾರಿ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ಆರೋಪಿಸಿ ಸ್ಥಳೀಯರು ರಸ್ತೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಜತೆಗೆ, ಬಸ್ ಹಾಗೂ ಲಾರಿ ಮೇಲೆ ಕಲ್ಲು ತೂರಿದ್ದು, ಘಟನೆ ಸಂಬಂಧ ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.