ಸಚಿವ ಅಶ್ವತ್ಥನಾರಾಯಣ ದುರಾಡಳಿತ ಬಯಲಿಗೆಳೆದು ಹೋರಾಟ: ಶಾಸಕ ಪ್ರಿಯಾಂಕ್ ಖರ್ಗೆ

ಸ್ಯಾಂಕಿ ಮೇಲ್ಸೇತುವೆ ವಿರೋಧಿ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಆಕ್ರೋಶ

Update: 2023-04-02 15:24 GMT

ಬೆಂಗಳೂರು, ಎ.2: ‘ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ ದುರಾಡಳಿತ, ಭ್ರಷ್ಟ ಯೋಜನೆಯನ್ನು ಬಯಲಿಗೆಳೆದು ಅದರ ವಿರುದ್ಧ ಪಕ್ಷದ ಅಭ್ಯರ್ಥಿ ಅನೂಪ್ ಐಯ್ಯಾಂಗಾರ್ ಜೊತೆಗೂಡಿ ಹೋರಾಟ ಮಾಡಲಿದ್ದೇವೆ’ ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ರವಿವಾರ ಮಲ್ಲೇಶ್ವರಂದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಪ್ರತಿಪಕ್ಷ, ಸಾರ್ವಜನಿಕರಾಗಲಿ ಸರಕಾರದ ವಿರುದ್ಧ ಮಾತನಾಡಿದರೆ ಪೊಲೀಸರ ಮೂಲಕ ದೌರ್ಜನ್ಯ, ಪ್ರಕರಣ ದಾಖಲಿಸಲಾಗುವುದು ಹಾಗೂ ಸರಕಾರದ ವಿರುದ್ಧ ಪ್ರಶ್ನೆ ಮಾಡಿದರೆ ರಾಜಕೀಯವಾಗಿ ಮುಗಿಸುತ್ತೇವೆಂಬ ಸಂದೇಶವನ್ನು ಈ ಸರಕಾರ ಅಶ್ವತ್ಥನಾರಾಯಣ ಮೂಲಕ ಕಳುಹಿಸುತ್ತಿದೆ’ ಎಂದು ಆರೋಪಿಸಿದರು.

ಸ್ಯಾಂಕಿ ಮೇಲ್ಸೇತುವೆ ರಸ್ತೆ ಅಗಲೀಕರಣ ಬೇಡವೆಂದು 22 ಸಾವಿರ ಸಾರ್ವಜನಿಕರು ಸಹಿ ಹಾಕಿ ಸರಕಾರಕ್ಕೆ ಅರ್ಜಿ ಸಲ್ಲಿಸಿರುವುದಲ್ಲದೆ, 2 ಸಾವಿರ ಶಾಲಾ ಮಕ್ಕಳು ಈ ಯೋಜನೆಯಿಂದ ಪರಿಸರ ನಾಶವಾಗಲಿದೆ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಆದರೂ, ಸರಕಾರ ಯಾವುದಕ್ಕೂ ಕಿವಿಗೊಟ್ಟಿಲ್ಲ ಎಂದು ಕಿಡಿಕಾರಿದರು.

ಬೊಮ್ಮಾಯಿ ಅವರು ಪದೇ ಪದೆ ಹೇಳುತ್ತಿರುವಂತೆ ಕರ್ನಾಟಕದಲ್ಲಿ ಉತ್ತರ ಪ್ರದೇಶ ಮಾದರಿ ಜಾರಿ ಮಾಡಲಾಗುತ್ತಿದೆ. ಯುಪಿ ಮಾದರಿಯಲ್ಲೇ ಯಾರೂ ಸರಕಾರದ ವಿರುದ್ಧ ಮಾತನಾಡಬಾರದು, ಪ್ರಶ್ನೆ ಕೇಳಬಾರದು, ಪ್ರತಿಭಟನೆ ಮಾಡಬಾರದು ಎಂಬ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಮಲ್ಲೇಶ್ವರಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅನೂಪ್ ಐಯ್ಯಂಗಾರ್ ಮಾತನಾಡಿ, ‘ಬಿಜೆಪಿ ಸರಕಾರದ ಬೆದರಿಕೆ ಇದೇ ಮೊದಲಲ್ಲ. ಇತ್ತೀಚೆಗೆ ಸಾರ್ವಜನಿಕ ಸಭೆಯಲ್ಲಿ ಅಶ್ವತ್ಥ ನಾರಾಯಣ ಮೇ 13ರ ನಂತರ ನಾನು ಯಾರೆಂದು ತೋರಿಸುತ್ತೇನೆಂದು ಹೇಳಿಕೊಂಡು ಬರುತ್ತಿದ್ದಾರೆ. ಹಾಗಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮಾಡುವುದೇಕೆ ಎಂದು ಪ್ರಶ್ನಿಸಿದರು.

ಫೆಬ್ರುವರಿ ತಿಂಗಳಲ್ಲಿ ಸ್ಯಾಂಕಿ ಫ್ಲ್ಲೈಓವರ್ ವಿರುದ್ಧ ಮಲ್ಲೇಶ್ವರಂ ನಿವಾಸಿಗಳು ಶಾಂತಿಯುತ ಪ್ರತಿಭಟನೆ  ಹಮ್ಮಿಕೊಂಡು ಸರಕಾರದ ಜನವಿರೋಧಿ ಯೋಜನೆಯನ್ನು ವಿರೋಧಿಸಿದ್ದಾರೆ. ಆದರೂ, ಸರಕಾರ ಎಚ್ಚೆತ್ತಿಲ್ಲ. ಇನ್ನು ಈ ಮೇಲ್ಸೇತುವೆ ಅಗತ್ಯವಿಲ್ಲ, ಇದು ಪರಿಸರಕ್ಕೆ ಪೂರಕವಾಗಿಲ್ಲ ಎಂದು ತಜ್ಞರ ಅಭಿಪ್ರಾಯವಿದ್ದರೂ ಶೇ.40ರಷ್ಟು ಕಮಿಷನ್‍ಗಾಗಿ ಸರಕಾರ ಈ ಯೋಜನೆಗೆ ಮುಂದಾಗಿದೆ ಎಂದು ಅವರು ತಿಳಿಸಿದರು.

‘ನಾವು ಯಾವುದೇ ಭಿತ್ತಿಪತ್ರ ಹಿಡಿದಿರಲಿಲ್ಲ, ಘೋಷಣೆ ಕೂಗಲಿಲ್ಲ. ಆದರೂ ಇಲ್ಲಿ ಯಾವ ರೀತಿ ನಿಯಮ ಉಲ್ಲಂಘನೆಯಾಗಿದೆ ಎಂದು ಅರ್ಥವಾಗುತ್ತಿಲ್ಲ. ಶಾಲಾ ಮಕ್ಕಳು ನಾವು ಯಾವ ಕಾನೂನು ಉಲ್ಲಂಘನೆ ಮಾಡಿದ್ದೇವೆಂದು ಪ್ರಶ್ನೆ ಮಾಡುತ್ತಿದ್ದಾರೆ. ಪೊಲೀಸರನ್ನು ಬಳಸಿಕೊಂಡು ಕ್ಷೇತ್ರದಲ್ಲಿ ಜನರಲ್ಲಿ ಭಯ ಸೃಷ್ಟಿಸಿ, ಸರಕಾರವನ್ನು ಯಾವುದೇ ರೀತಿ ಪ್ರಶ್ನಿಸಬಾರದೆಂದು ಬೆದರಿಸುತ್ತಿದ್ದಾರೆ. ಇದಕ್ಕಾಗಿ ಪೊಲೀಸರು ಹಾಗೂ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ನಾವು ಸುಮ್ಮನೆ ಕೂರುವುದಿಲ್ಲ’

-ಅನೂಪ್ ಐಯ್ಯಾಂಗಾರ್ ಕಾಂಗ್ರೆಸ್ ಅಭ್ಯರ್ಥಿ

Similar News