‘ಶಿಕ್ಷಣದ ಮೂಲಭೂತ ಹಕ್ಕಿಗಾಗಿ’ ದಕ್ಷಿಣ ಭಾರತದ ಸಮನ್ವಯ
ಬೆಂಗಳೂರು, ಎ. 2: ‘ಶಿಕ್ಷಣವು ಸಾಮಾಜಿಕ ವಸ್ತುವಾಗಿದ್ದು, ವಿಮೋಚನೆ ಮತ್ತು ಸಾಮಾಜಿಕ ಪರಿವರ್ತನೆಗೆ ಸಾಧನವಾಗಿದೆ. ಶಿಕ್ಷಣವು ಸಂವಿಧಾನದಿಂದ ಖಾತರಿಪಡಿಸಲಾದ ಮೂಲಭೂತ ಹಕ್ಕು ಮತ್ತು ನಮ್ಮ ಸಾಂವಿಧಾನಿಕ ಮೌಲ್ಯಗಳು ಮತ್ತು ಗುರಿಗಳನ್ನು ಸಾಧಿಸಲು ಅತ್ಯಗತ್ಯವಾಗಿದೆ’ ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ದಕ್ಷಿಣ ಭಾರತದ ಸಮನ್ವಯ ಒಕ್ಕೂಟ ತಿಳಿಸಿದೆ.
ರವಿವಾರ ನಗರದಲ್ಲಿ ಆಂಧ್ರ, ಗೋವಾ, ಕರ್ನಾಟಕ, ಕೇರಳ, ಪುದುಚೇರಿ, ತೆಲಂಗಾಣ ಮತ್ತು ತಮಿಳುನಾಡಿನ ಪ್ರತಿನಿಧಿಗಳು ಸಾಮಾನ್ಯವಾಗಿ ಮಕ್ಕಳ ಹಕ್ಕುಗಳ ಬಗ್ಗೆ ಮತ್ತು ವಿಶೇಷವಾಗಿ ಶಿಕ್ಷಣದ ಹಕ್ಕಿನ ಬಗ್ಗೆ ಕೆಲಸ ಮಾಡುವ ಪ್ರತಿನಿಧಿಗಳು ನಗರದಲ್ಲಿ ಎರಡು ದಿನಗಳ ಕಾಲ ಸಂವಾದವನ್ನು ನಡೆಸಿದರು.
‘ಸಂವಾದದಲ್ಲಿ ಆರ್‍ಟಿಇ ಕಾಯಿದೆ ಮತ್ತು ಕಾಯಿದೆಯ ಅನುಷ್ಠಾನದ ಸ್ಥಿತಿಯ ಬಗ್ಗೆ ಚರ್ಚಿಸಲಾಗಿದೆ. ಶಿಕ್ಷಣದ ಮೂಲಭೂತ ಹಕ್ಕುಗಳ ಅನುಷ್ಠಾನವು ಕಳಪೆಯಾಗಿದೆ ಮತ್ತು ಅನುಸರಣೆ ತೃಪ್ತಿಕರವಾಗಿಲ್ಲ. ಶಿಕ್ಷಣದ ಮೂಲಭೂತ ಹಕ್ಕಿಗಾಗಿ ದಕ್ಷಿಣ ಭಾರತದ ಒಕ್ಕೂಟವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಪ್ರತಿ ಸರಕಾರಿ ಶಾಲೆಯನ್ನು ನೆರೆಹೊರೆಯ ಸಾಮಾನ್ಯ ಶಾಲೆಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದೆ.
ಆಂಧ್ರಪ್ರದೇಶದ ಎನ್.ಪ್ರಕಾಶ ರಾವ್, ಕೊಮ್ಮು ರಮಣ ಮೂರ್ತಿ, ಗೋವಾದ ಎಲ್ವಿಸ್ ಗೊನ್ಸಾಲ್ವೆಸ್, ಕರ್ನಾಟಕದ ಬಾಬು ಮ್ಯಾಥ್ಯೂ, ನಿರಂಜನಾರಾಧ್ಯ ವಿ.ಪಿ. ತಿಮ್ಮಯ್ಯ ಪುರ್ಲೆ, ಕುಮಾರಸ್ವಾಮಿ, ಬಸವರಾಜ ಗುರಕಾರ್ ಸೇರಿದಂತೆ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು.