×
Ad

ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹತೆಗೆ ವಿದೇಶಗಳ ಸ್ಪಂದನೆ ಅನಗತ್ಯ: ಕೇಂದ್ರ ಸಚಿವ ಜೈಶಂಕರ್

Update: 2023-04-02 22:52 IST

ಬೆಂಗಳೂರು, ಎ.2: ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಹಿತಾಸಕ್ತಿಗೆ ಅನುಗುಣವಾದ ಅಭಿಪ್ರಾಯಗಳನ್ನು ಇತರ ದೇಶಗಳ ಮೇಲೆ ಹೇರುವುದನ್ನು ನಿಲ್ಲಿಸುವ ಅಗತ್ಯವಿದೆ ಎಂದು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಹೇಳಿದ್ದಾರೆ. 

ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನ ಅನರ್ಹಗೊಳಿಸಿರುವ ಬಗ್ಗೆ ಅಮೆರಿಕ ಮತ್ತು ಜರ್ಮನಿ ಸ್ಪಂದನೆ ಅನಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್ ನೇತೃತ್ವದಲ್ಲಿ ಕಬ್ಬನ್ ಪಾರ್ಕ್‍ನಲ್ಲಿ ಆಯೋಜಿಸಲಾಗಿದ್ದ ಮೀಟ್ ಅಂಡ್ ಗ್ರೀಟ್ ಸಂವಾದದಲ್ಲಿ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಪಾಲ್ಗೊಂಡರು.  

ಈ ವೇಳೆ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ಬಗ್ಗೆ ಅಮೆರಿಕ ಮತ್ತು ಜರ್ಮನಿ ನೀಡಿರುವ ಪ್ರತಿಕ್ರಿಯೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಜೈಶಂಕರ್ ಅವರು, ಪಾಶ್ಚಿಮಾತ್ಯ ರಾಷ್ಟ್ರಗಳು ಹಿಂದಿನಿಂದಲೂ ಬೇರೆ ದೇಶಗಳ ಸಾರ್ವಭೌಮತ್ವ, ಸಾಂವಿಧಾನಿಕ ಅಧಿಕಾರಿಗಳ ಕುರಿತಾದ ಆಂತರಿಕ ವಿಷಯಗಳ ಮೇಲೆ ತಮ್ಮ ಅಭಿಪ್ರಾಯವೇ ಶ್ರೇಷ್ಠ ಎಂಬ ಮನಸ್ಥಿತಿ ಹೊಂದಿವೆ. ಇದರಿಂದ ಆ ದೇಶಗಳು ಇನ್ನೂ ಹೊರಬಂದಿಲ್ಲ ಎಂದರು. 

ಇದೇ ಪರಿಸ್ಥಿತಿ ಮುಂದುವರೆದರೆ ಬೇರೆ ರಾಷ್ಟ್ರಗಳೂ ಕೂಡ ಪಶ್ಚಿಮದ ದೇಶಗಳ ಕುರಿತಾಗಿಯೂ ಸಮನಾದ ದೃಷ್ಟಿಕೋನದಿಂದ ಪ್ರತಿಕ್ರಿಯೆ ನೀಡಲು ಆರಂಭಿಸುತ್ತದೆ. ಹಿಂದೆಂದಿಗಿಂತಲೂ ಪ್ರಸ್ತುತ ಸಂದರ್ಭದಲ್ಲಿ ಇಂತಹ ಮನಸ್ಥಿತಿಯನ್ನು ವಿಶ್ವದಾದ್ಯಂತ ನಾವು ಕಾಣಬಹುದು ಎಂದು ಹೇಳಿದರು.

ಇನ್ನೊಂದು ಆಯಾಮದ ಮೂಲಕ ಗಮನಿಸಿದರೆ, ನಮ್ಮಲ್ಲಿಯೇ ಇರುವ ಕೆಲವರು ಪಶ್ಚಿಮದ ರಾಷ್ಟ್ರಗಳಿಗೆ ತೆರಳಿ ಭಾರತದ ಕುರಿತಾಗಿ ಅವಮಾನಕರ ಅಭಿಪ್ರಾಯಗಳನ್ನು ವಿವರಿಸುತ್ತಾರೆ. ಜೊತೆಗೆ ಇಂತಹ ರಾಷ್ಟ್ರಗಳಿಗೆ ಆಹ್ವಾನ ನೀಡಿರುವುದರ ಪರಿಣಾಮದಿಂದ ಮಾತ್ರ ಇಂತಹ ಹೇಳಿಕೆಗಳು ಅಲ್ಲಿಂದ ಬರಲು ಸಾಧ್ಯ. ಈ ರೀತಿಯ ಮನಸ್ಥಿತಿಯ ದೇಶದ ಒಳಗಿನ ಹಾಗೂ ಹೊರಗಿನ ಇಬ್ಬರಲ್ಲೂ ಇರುವ ಮೂಲ ಸಮಸ್ಯೆಯನ್ನು ಪರಿಹರಿಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು. ಸುಮಾರು 500ಕ್ಕೂ ಅಧಿಕ ಯುವ ಮತದಾರರು ಮತ್ತು ವಾಯು ವಿಹಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 

Similar News