×
Ad

ಮಂಗಳೂರು: ಮತದಾನ ಜಾಗೃತಿಯ ವ್ಯಂಗ್ಯ ಚಿತ್ರಗಳ ಪ್ರದರ್ಶನ ಉದ್ಘಾಟನೆ

Update: 2023-04-03 11:24 IST

ಮಂಗಳೂರು, ಎ.3: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಪ್ರತಿಯೊಬ್ಬ ಮತದಾರರೂ ಮತ ಚಲಾಯಿಸುವ ಮೂಲಕ ಶೇ.100ರಷ್ಟು ಮತದಾನಕ್ಕೆ ನೆರವಾಗುವಂತೆ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಕರೆ ನೀಡಿದ್ದಾರೆ.

ನಗರದ ಸಂತ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಸ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಸಂತ ಅಲೋಶಿಯಸ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾದ ಮತದಾನ ಜಾಗೃತಿಯ ವ್ಯಂಗ್ಯ ಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭಾರತದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಸಂವಿಧಾನ ಮತ್ತು ಕೇಂದ್ರ ಚುನಾವಣಾ ಆಯೋಗವು ಅದ್ಭುತ ಶಕ್ತಿ ಮತ್ತು ಹಕ್ಕನ್ನು ನೀಡಿದ್ದು, ಮತದಾನದ ಹಕ್ಕು ಆಗಿದೆ ಎಂದರು.

ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ದ.ಕ.ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತಗಳಲ್ಲೂ ತಮ್ಮ ಇಚ್ಛೆಯ ಶಾಸಕರನ್ನು ಆಯ್ಕೆ ಮಾಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.

ಮತದಾನ ನನ್ನ ಹಕ್ಕು ಎಂಬ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಪ್ರತಿಯೊಬ್ಬ ಮತದಾರನೂ ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸುವ ಮೂಲಕ ಸಂವಿಧಾನವನ್ನು ಎತ್ತಿ ಹಿಡಿಯಬೇಕು ಎಂದರು.

ದ.ಕ. ಜಿಪಂ ಸಿಇಒ ಡಾ.ಕುಮಾರ, ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ.ಡಾ ಪ್ರವೀಣ್ ಮಾರ್ಟಿಸ್  ಎಸ್.ಜೆ. ಮಾತನಾಡಿದರು.

ಮನಪಾ ಆಯುಕ್ತ ಚನ್ನಬಸಪ್ಪ, ಸೆಕ್ಟರ್ ಆಫೀಸರ್ ರಘುಪತಿ ಕೇಕುಣ್ಣಾಯ, ವ್ಯಂಗ್ಯ ಚಿತ್ರ ಕಲಾವಿದ ಜಾನ್ ಚಂದ್ರನ್  ಉಪಸ್ಥಿತರಿದ್ದರು.

ಸಂತ ಅಲೋಶಿಯಸ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರೋಸ್ ವೀರ ಡಿಸೋಜ ಸ್ವಾಗತಿಸಿದರು. ಇಎಲ್ ಸಿ ಅಧ್ಯಕ್ಷ ಅಲ್ವಿನ್ ಡಿಸೋಜ ವಂದಿಸಿದರು.

Similar News