ಕರಾವಳಿ ಜಿಲ್ಲೆಗಳಿಗೆ ಆಗಬೇಕಾಗಿರುವುದೇನು?

Update: 2023-04-03 07:20 GMT

►► ಸರಣಿ-9 | ಭಾಗ- 01

ಕರ್ನಾಟಕದ ಬೇರೆ ಭಾಗಗಳಿಗೆ ಹೋಲಿಸಿದರೆ, ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ಕರಾವಳಿಯ ಉಭಯ ಜಿಲ್ಲೆಗಳು (ಉತ್ತರ ಕನ್ನಡ ಹೊರತುಪಡಿಸಿ) ಒಂದು ಗುಲುಗುಂಜಿ ತೂಕ ಹೆಚ್ಚೇ ತೂಗುತ್ತವೆ. ಇದರ ಅರ್ಥ, ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ನೂರಕ್ಕೆ ನೂರು ಆಗಿದೆ ಎಂದೇನಲ್ಲ. ಕರಾವಳಿಯಲ್ಲಿ ಹೊಸದಾಗಿ ಆಗಬೇಕಿರುವುದಕ್ಕಿಂತ, ಈಗಾಗಲೇ ಆಗಿ ತಪ್ಪು ಹಾದಿಯಲ್ಲಿ ಕ್ರಮಿಸಿರುವ, ತಪ್ಪು ತಂಗುದಾಣಗಳನ್ನು ತಲುಪಿರುವ, ಊಟಕ್ಕಿಲ್ಲದ ಉಪ್ಪಿನಕಾಯಿ ಆಗಿರುವ ನೂರಾರು ಯೋಜನೆಗಳನ್ನು ಮತ್ತೆ ಸರಿಹಾದಿಗೆ ಏರಿಸುವ ಕೆಲಸ ಆದ್ಯತೆಯ ಮೇರೆಗೆ ಆಗಬೇಕಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡಗಳೆಂಬ ಒಟ್ಟು ೩೨೦ ಕಿ.ಮೀ. ಉದ್ದದ ಕರಾವಳಿಯನ್ನು ಹೊಂದಿರುವ ಮೂರು ಜಿಲ್ಲೆಗಳಲ್ಲಿ ಮುಂದಿನ ಐದು ವರ್ಷಗಳಲ್ಲಿ ತುರ್ತಾಗಿ ಆಗಬೇಕಿರುವುದು ಏನು ಎಂಬ ಬಗ್ಗೆ ರಾಜಕೀಯ ಪಕ್ಷಗಳ ಗಮನ ಸೆಳೆಯುವುದು ಮತ್ತು ಈ ಅಜೆಂಡಾಗಳಿಗೆ ಅವರ ರಾಜಕೀಯ ಪ್ರಣಾಳಿಕೆಗಳು ಮತ್ತು ಚರ್ಚೆಗಳಲ್ಲಿ ಜಾಗ ದೊರಕಿಸಿಕೊಡಲು ವಕೀಲಿ ಮಾಡುವುದು ಈ ಬರಹದ ಉದ್ದೇಶ.

ಇಂದು ಹೆಚ್ಚಿನ ಸರ್ಕಾರಿ ಯೋಜನೆಗಳನ್ನು ವಿನ್ಯಾಸ ಮಾಡುವಾಗಲೇ, ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಅದರಲ್ಲಿ ತಮ್ಮ ಭ್ರಷ್ಟ ಪಾಲು ಎಲ್ಲೆಲ್ಲಿ ಸಿಗಬೇಕು ಎಂಬ ದೃಷ್ಟಿಕೋನ ಇಟ್ಟುಕೊಂಡು ವಿನ್ಯಾಸ ಮಾಡಿರುತ್ತಾರೆ. ಜನರ ಅವಶ್ಯಕತೆಗಳು ಕ್ರಮೇಣ ಬೇಡಿಕೆಗಳಾಗಿ ಬೆಳೆದು, ಬೇರು ಮಟ್ಟದಿಂದ ಮೇಲೆ ಹರಿದು ಹೋಗಿ ಯೋಜನೆಯೊಂದು ರೂಪುಗೊಳ್ಳುವ ಕಾಲ ಇದಲ್ಲ. ಮೇಲೇ ನಿರ್ಧಾರವಾಗಿ ಧುತ್ತೆಂದು ಒಂದು ದಿನ ಎದುರು ಬಂದುನಿಂತು ಅಚ್ಚರಿಗೆ ನೂಕುವ ಯೋಜನೆಗಳೇ ಹೆಚ್ಚೀಗ. ಅದರಲ್ಲೂ ಉದಾರೀಕರಣ ಬಂದ ಬಳಿಕ, ಅಲ್ಲಲ್ಲಿ ಚುಕ್ಕೆ ಹಾಕುತ್ತಾ ಹೋದ ಯೋಜನೆಗಳೆಲ್ಲ ಒಂದು ಚಿತ್ರವಾಗಿ ನಿಂತಾಗಲೇ ಜನಸಾಮಾನ್ಯರಿಗೆ ಅಭಿವೃದ್ಧಿಯ ಹೆಸರಲ್ಲಿ ಏನಾಗುತ್ತಿದೆ ಎಂದು ಅರ್ಥವಾಗುವುದು. ಆದರೆ ಆ ಹೊತ್ತಿಗೆ ಸಮಯ ಮೀರಿ ಹೋಗಿರುವುದೇ ಹೆಚ್ಚು. ಜಗತ್ತು ಅಂಗೈಯಗಲ ಆದದ್ದರ ನಿಜ ಪರಿಣಾಮ ಇದು. ಇದು ನಮ್ಮ ಈಗಿನ ವಿಕಾಸದ ಮಾಡೆಲ್. ಹಾಗಾಗಿ ಇಂದಿನ ಅಭಿವೃದ್ಧಿಯ ಹಾದಿ ಯಾವತ್ತಿಗೂ ಜನಸಾಮಾನ್ಯನಿಗೆ ತಳಮಟ್ಟದಲ್ಲಿ ಪ್ರತ್ಯಕ್ಷವಾಗಿ ಕಾಣಿಸುವುದೇ ಇಲ್ಲ.

ಈ ಟಿಪ್ಪಣಿಯನ್ನು ಮನಸ್ಸಿನಲ್ಲಿ ಇರಿಸಿಕೊಂಡು, ಈ ಲೇಖನದ ಮುಂದಿನ ಭಾಗವನ್ನು ಓದಿದರೆ, ನಾನೇನು ಹೇಳುತ್ತಿದ್ದೇನೆ ಎಂಬುದು ಸ್ಪಷ್ಟವಾಗುತ್ತದೆ.

ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ರಹಿತ, ಸಾರ್ವಜನಿಕ ನೈತಿಕತೆಗಳ ತಳಹದಿಯಲ್ಲಿ ಅಭಿವೃದ್ಧಿ ನಡೆದಾಗ ಮಾತ್ರ ಅದು ಜನಪರವಾದ ಅಭಿವೃದ್ಧಿ ಅನ್ನಿಸಿಕೊ ಳ್ಳುತ್ತದೆ. ಹಾಗಿದ್ದಾಗ ಮಾತ್ರ, ಯಾವುದೇ ಯೋಜನೆಗಳನ್ನು ರೂಪಿಸುವಾಗ ಜನರ ಬೇಡಿಕೆಗಳನ್ನು ಪಾರದರ್ಶಕವಾಗಿ ಪರಿಗಣಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಈ ಮೂಲಪಾಠವನ್ನು ಮರೆತು ವಿಕಾಸ ಸಾಧನೆ ಸಾಧ್ಯವಿಲ್ಲ. ಇಲ್ಲಿ ಕೆಳಗೆ ಕರಾವಳಿ ಜಿಲ್ಲೆಗಳಲ್ಲಿ ರಾಜ್ಯ ಸರಕಾರದ ಇಲಾಖಾವಾರು ಮುಂದಿನ ಐದು ವರ್ಷಗಳಲ್ಲಿ ಏನೇನು ಆಗಬೇಕೆಂಬುದನ್ನು ವಿವರಿಸಲಾಗಿದೆ. ಇಲ್ಲಿ ಹೇಳಲಾಗಿರುವ ಹಲವು ಅಂಶಗಳು ಕರಾವಳಿಯಿಂದ ಹೊರಗೆ ಉಳಿದ ಜಿಲ್ಲೆಗಳಿಗೂ ಪ್ರಸ್ತುತವಾಗಿರಬಹುದು.

► ಬೃಹತ್ ಮತ್ತು ಮಧ್ಯಮ ನೀರಾವರಿ: 43 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮತ್ತು ಖಾಸಗಿ ಹಿತಾಸಕ್ತಿಗಳ ದಾಳಕ್ಕೆ ತುತ್ತಾಗಿ ಪೂರ್ಣಗೊಳ್ಳದೇ ಉಳಿದಿರುವ ವಾರಾಹಿ ನೀರಾವರಿ ಯೋಜನೆಯನ್ನು ಸಮಯಬದ್ಧವಾಗಿ ಅದರ ಲಾಜಿಕಲ್ ಅಂತ್ಯಕ್ಕೆ ತಲುಪಿಸಬೇಕು. ಅದರ ವಿಳಂಬಕ್ಕೆ ಮತ್ತು ಅಲ್ಲಿನ ಕಾಮಗಾರಿಗಳಲ್ಲಿ ಭ್ರಷ್ಟಾಚಾರಕ್ಕೆ ಕಾರಣರೆಂದು ಲೋಕಾಯುಕ್ತ ವರದಿ ಗುರುತಿಸಿ ರುವವರ (ಈ ವರದಿ ಈಗಾಗಲೇ ವಿಧಾನಮಂಡಲದಲ್ಲಿ ಮಂಡಿತವಾಗಿದೆ) ಮೇಲೆ ಕಾನೂನು ಕ್ರಮ ಜರುಗಬೇಕು.

ವಾರಾಹಿ ನೀರನ್ನು ಉಡುಪಿಗೆ ತರುವ ಯೋಜನೆಯನ್ನು ಕಾಲಬದ್ಧವಾಗಿ, ಪಾರದರ್ಶಕವಾಗಿ ಪೂರ್ಣಗೊಳಿಸಬೇಕು. ನೀರಾವರಿ ಯೋಜನೆಯನ್ನು ಪೂರ್ಣಗೊಳಿಸದೇ, ಅದರ ನೀರನ್ನು ಕುಡಿಯುವುದಕ್ಕೆಂದು ಸಿಕ್ಕಸಿಕ್ಕಲ್ಲಿಗೆ ಕೊಂಡೊಯ್ಯುವ ಅವೈಜ್ಞಾನಿಕ ಯೋಜನೆಗಳಿಗೆ ಕಡಿವಾಣ ಹಾಕಿ, ನೀರಿನ ಅಭಾವ ಇರುವಲ್ಲಿ ಸ್ಥಳೀಯ ಜಲಮೂಲಗಳ ಸಾಧ್ಯತೆಗಳನ್ನು ಪರಿಶೀಲಿಸಬೇಕು. (ಉದಾಹರಣೆಗೆ ಉಡುಪಿಯ ಆಸುಪಾಸಿನಲ್ಲೇ ಐದು ನದಿಗಳಿವೆ. ಆದರೂ ದೂರದ ವಾರಾಹಿಯ ನೀರು!)

 ಉಡುಪಿ ನಗರದಲ್ಲಿ ಮಾತ್ರವಲ್ಲದೆ ಉಡುಪಿ ಜಿಲ್ಲೆಯ ಬೇರೆ ಗ್ರಾಮ/ ಪಟ್ಟಣಗಳಲ್ಲಿ ಜಲಜೀವನ್ ಮಿಷನ್ ಯೋಜನೆಯ ಹೆಸರಿನಲ್ಲಿ ನೀರಿನ ದಾಸ್ತಾನು, ಮೂಲಗಳ ಬಗ್ಗೆ ಸ್ಪಷ್ಟ ಯೋಜನೆ ಇಲ್ಲದೇ, ಎಲ್ಲಕ್ಕಿಂತ ಮೊದಲು ಪೈಪ್‌ಲೈನ್ ಅಳವಡಿಸುವ ದುಡ್ಡು ಲೂಟಿ ಯೋಜನೆ ನಿಲ್ಲಬೇಕು. ಹಲವು ಕಡೆಗಳಲ್ಲಿ ಪೈಪ್‌ಲೈನ್ ಪೂರ್ಣಗೊಂಡು ವರ್ಷಗಳೇ ಕಳೆದಿವೆ. ಅಲ್ಲಿಗೆ ನೀರು ಎಲ್ಲಿಂದ ಬರಲಿದೆ ಎಂಬುದು ಇನ್ನೂ ಸ್ಪಷ್ಟವಿಲ್ಲ.

ಸರಕಾರ ದ.ಕ. ಜಿಲ್ಲೆಯಲ್ಲಿ 446, ಉಡುಪಿ ಜಿಲ್ಲೆಯಲ್ಲಿ 424 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 466 ಕಿಂಡಿ ಅಣೆಕಟ್ಟುಗಳನ್ನು ರಚಿಸಲು ಹೊರಟಿದೆ. ಪ್ರತೀ ಕಿಂಡಿ ಅಣೆಕಟ್ಟಿಗೆ 60-70 ಎಕರೆ ಜಾಗ ಅಚ್ಚುಕಟ್ಟು ಪ್ರದೇಶ ಆಗಲಿರುವ ಈ ಗಂಡಾಂತರದ ಯೋಜನೆ ಕೇವಲ ಗುತ್ತಿಗೆದಾರರ ಕಿಸೆ ತುಂಬಿಸುವ, ಪರಿಸರಕ್ಕೆ ಮಾರಕವಾಗಲಿರುವ ಯೋಜನೆ ಆಗಿದ್ದು, ಇದನ್ನು ಕೈಬಿಡಬೇಕು ಮತ್ತು ಪ್ರತೀ
ಕಿಂಡಿ ಅಣೆಕಟ್ಟನ್ನು ಆ ಪ್ರದೇಶದ ಸ್ಥಳೀಯ ಬೇಡಿಕೆಗಳನ್ನು ಆಧರಿಸಿ ನಿರ್ಧರಿಸ ಬೇಕು. ಈಗಾಗಲೇ ಆಗಿರುವ ಎಲ್ಲ ಕಿಂಡಿ ಅಣೆಕಟ್ಟುಗಳ ಸಮಗ್ರ ತನಿಖೆ ಆಗಬೇಕು. ರಾಜ್ಯದಲ್ಲಿ ಇದು ಒಟ್ಟು 3986ಕೋಟಿ ರೂ.ಗಳ ಯೋಜನೆ.

► ಕಂದಾಯ: ಕುಮ್ಕಿ ಹಕ್ಕಿನ ಭೂಮಿಗಳ ಮಾಲಕತ್ವವನ್ನು ಸರಕಾರವೇ ಉಳಿಸಿಕೊಳ್ಳಬೇಕು ಮತ್ತು ಅದರ ನಿರ್ವಹಣೆಯ ಹಕ್ಕನ್ನು ಮಾತ್ರ ಹಿಂದಿನಂತೆ ಅನುಭೋಗದಾರರಿಗೆ ನೀಡಬೇಕು. ಆ ಭೂಮಿಯನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಶಾಶ್ವತವಾಗಿ ಪರಭಾರೆ ಮಾಡುವ ಪ್ರಯತ್ನಗಳು ಭೂಮಾಫಿಯಾದ ಕುಮ್ಮಕ್ಕಿನಿಂದ ನಡೆಯುತ್ತಿರುವ ಪ್ರಯತ್ನಗಳಾಗಿದ್ದು, ಅಂತಹ ಕ್ರಮಗಳು ಹಲವೆಡೆ ಭೂವ್ಯಾಜ್ಯಗಳಿಗೆ ಕಾರಣ ಆಗಬಹುದು. ಗ್ರಾಮೀಣ ಭೂಮಿಗಳ ಅಕ್ರಮ - ಸಕ್ರಮ ಯೋಜನೆಯಲ್ಲಿ ಅರ್ಜಿದಾರರ ಅರ್ಜಿಗಳನ್ನು ವರ್ಷಗಟ್ಟಲೆ ಕೊಳೆಹಾಕುತ್ತಿದ್ದು, ಡೀಮ್ ಅರಣ್ಯ ಪ್ರದೇಶದ ಹೆಸರಿನಲ್ಲಿ ಭೂಮಿಯ ಮಾಲಕತ್ವವನ್ನು ನಿರಾಕರಿಸಲಾಗುತ್ತಿದೆ. ಭೂನ್ಯಾಯ ಮಂಡಳಿಗಳೂ ಕೂಡ ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಗ್ರಾಮೀಣ ಭಾಗಗಳ ಪುರಾತನ ಭೂಮಸೂದೆ ಪ್ರಕರಣಗಳೂ ನೂರಾರು ಸಂಖ್ಯೆಯಲ್ಲಿ ವಿಲೇವಾರಿ ಆಗದೆ ಕೊಳೆಯುತ್ತಿವೆ.

► ಸಾರಿಗೆ: ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ಮತ್ತು ಜೀವಗಳನ್ನು ಉಳಿಸಲು ರಸ್ತೆ ಸುರಕ್ಷತೆಯನ್ನು ಸುಧಾರಿಸುವ, ಹೆದ್ದಾರಿ ರಸ್ತೆ ನಿಯಮಗಳ ಕುರಿತು ವಾಹನ ಚಾಲಕರಿಗೆ ತರಬೇತಿ ನಿಡುವ ಕೆಲಸ ನಡೆಯಬೇಕು.

 ತಾಲೂಕು ಕೇಂದ್ರಗಳಲ್ಲಿ ARTO ಕಚೇರಿಗಳನ್ನು ತೆರೆಯುವ ಮೂಲಕ ಜನರು ಜಿಲ್ಲಾ ಕೇಂದ್ರಗಳಿಗೆ ಓಡಾಡುವುದನ್ನು ತಪ್ಪಿಸಬೇಕು.

► ಸಮಾಜ ಕಲ್ಯಾಣ: ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿ ಹಾಸ್ಟೆಲ್ಗಳಲ್ಲಿ ಮೂಲಸೌಕರ್ಯಗಳ ಗುಣಮಟ್ಟ, ಆಹಾರದ ಗುಣಮಟ್ಟ ಉತ್ತಮ ಗೊಳ್ಳಬೇಕು. ಹೆಚ್ಚುವರಿ ಕೋಣೆಗಳು ಅಗತ್ಯ ಇರುವಲ್ಲಿ ಅವು ನಿರ್ಮಾಣ ಆಗಬೇಕು.

► ವಸತಿ-ಮೂಲ ಸೌಕರ್ಯಾಭಿವೃದ್ಧಿ: ವಸತಿ ಸಮುಚ್ಚಯಗಳಿಂದ ಹೊರಬ ರುವ ನೀರಿಗೆ ಸೂಕ್ತ ವಾದ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಅಂತರ್ಜಲ ಕಲುಷಿತವಾಗುವುದನ್ನು ತಡೆಯಲು ಉತ್ತಮ ಒಳಚರಂಡಿ ವ್ಯವಸ್ಥೆಯನ್ನು ರೂಪಿಸಬೇಕು.

► ಆಹಾರ ಮತ್ತು ನಾಗರಿಕ ಪೂರೈಕೆ: ಸ್ಥಳೀಯವಾಗಿ ಸಂಗ್ರಹಗೊಂಡ ಆಹಾರ ಧಾನ್ಯಗಳು ಆದ್ಯತೆಯ ಮೇರೆಗೆ ಸ್ಥಳೀಯವಾಗಿಯೇ ವಿತರಣಾ ವ್ಯವಸ್ಥೆಯ ಮೂಲಕ ವಿತರಣೆಗೊಳ್ಳಬೇಕು.

► ಅರಣ್ಯ: ಪಟ್ಟಾ ಭೂಮಿಗಳಲ್ಲಿರುವ ಒಂದೋ ಎರಡೋ ಮರವನ್ನು ಕಾನೂನು ಬದ್ಧವಾಗಿ ಪರ್ಮಿಟ್ ಪಡೆದು ಕಡಿಯಲು ಹೊರಟರೆ ಆರು ತಿಂಗಳಾದರೂ ಅದು ಸಾಧ್ಯವಾಗುವುದಿಲ್ಲ. ಭ್ರಷ್ಟಾಚಾರ, ಕಳ್ಳಾಟಗಳಿಗೆ ಹಾದಿ ಮಾಡಿಕೊಟ್ಟಿ ರುವ ಈ ಪರ್ಮಿಟ್ ವ್ಯವಸ್ಥೆ ಕಾಲಬದ್ಧ ಮತ್ತು ಪಾರದರ್ಶಕ ಆಗಬೇಕು.

Similar News