ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಬೆದರಿಕೆ: ಭದ್ರತೆ ಕಲ್ಪಿಸಲು ಡಿಜಿಪಿಗೆ ಮುಖ್ಯಮಂತ್ರಿ ಸೂಚನೆ
ಬೆಂಗಳೂರು, ಎ. 3: ಕೂಡಲಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ಭದ್ರತೆ ಕಲ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಸೂಚಿಸಿದ್ದಾರೆ.
ಸೋಮವಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್, ‘ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಕೆಲ ನಾಯಕರು ಕುಡಿದು ಸ್ವಾಮೀಜಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಅವರಿಗೆ ಕೂಡಲೇ ಭದ್ರತೆ ಕಲ್ಪಿಸಬೇಕು. ಯಾರು ಬೆದರಿಕೆ ಹಾಕುತ್ತಿದ್ದಾರೆಂದು ಸಮುದಾಯಕ್ಕೆ ಗೊತ್ತಿದೆ. ಅಲ್ಲದೆ, ಸರಕಾರ ಕಲ್ಪಿಸಿರುವ ಮೀಸಲಾತಿಯ ವಿಚಾರದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ದೂರಿದರು.
‘ಮೀಸಲಾತಿ ವಿಚಾರದಲ್ಲಿ ರಾಜಕೀಯ ಮಾಡುವುದಕ್ಕೆ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಲಿಂಗಾಯತ ಪಂಚಮಸಾಲಿ, ಮರಾಠ, ಒಕ್ಕಲಿಗ ಸೇರಿದಂತೆ ಹಿಂದುಳಿದ ಸಮುದಾಯಗಳು ಮೀಸಲಾತಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆಗೆದುಕೊಂಡ ನಿರ್ಧಾರಗಳಿಂದ ಕಾಂಗ್ರೆಸ್ ಮುಖಂಡರ ನಿದ್ದೆಗೆಡಿಸಿದೆ. ಹೀಗಾಗಿ ಅಗೌರವ ಮಾಡುವ ಕೆಲಸ ಮಾಡಲಾಗುತ್ತಿದೆ’ ಎಂದು ಅವರು ಟೀಕಿಸಿದರು.
‘ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಭಾಗವಹಿಸಿದ್ದ ನಾಯಕರೇ ಸ್ವಾಮೀಜಿಗೆ ಕರೆ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಹೋರಾಟದಲ್ಲಿದ್ದ ಮೂರು-ನಾಲ್ಕು ನಾಯಕರೇ ಈ ರೀತಿ ಮಾಡುತ್ತಿದ್ದಾರೆ’ ಎಂದು ಅರವಿಂದ ಬೆಲ್ಲದ್, ಯಾರೊಬ್ಬರ ಹೆಸರನ್ನು ಉಲ್ಲೇಖಿಸದೆ, ವಿಜಯಾನಂದ ಕಾಶಪ್ಪನವರ್ ಹಾಗೂ ವಿನಯ್ ಕುಲಕರ್ಣಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀಗಳ ಸ್ಪಷ್ಟಣೆ: ಮೀಸಲಾತಿ ಹೋರಾಟದಿಂದ ಸಮುದಾಯದ ಜನ ನಿರಾಶರಾಗುವ ಅಗತ್ಯವಿಲ್ಲ. ನಾವು 2 ‘ಡಿ’ ಮೀಸಲಾತಿಯನ್ನು ಒಪ್ಪಿಕೊಂಡಿದ್ದೇವೆ. ಹೊಟ್ಟೆ ತುಂಬಾ ಊಟ ಕೊಡಿ ಎಂದು ಸರಕಾರಕ್ಕೆ ಮನವಿ ಮಾಡಿದ್ದೇವು. ಆದರೆ, ಸರಕಾರದಿಂದ ಅದು ಸಾಧ್ಯವಾಗಲಿಲ್ಲ, ಹಸಿವು ನೀಗಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಬಸವ ಜಯಮೃತ್ಯುಂಜಯ ಸ್ವಾಮಿ ವಿವರಣೆ ನೀಡಿದರು.
‘ಹೋರಾಟದಿಂದ ನಾವು ಒಂದು ಮೆಟ್ಟಿಲನ್ನು ಹತ್ತಿದ್ದೇವೆ. ಎರಡೂವರೆ ವರ್ಷದ ಹೋರಾಟದ ಫಲವಾಗಿ ಮೊದಲ ಹಂತದ ಜಯ ಸಿಕ್ಕಿದೆ. ನಮ್ಮ ಹೋರಾಟಕ್ಕೆ ಮಣಿದು ಶೇ.7ರಷ್ಟು ಮೀಸಲಾತಿ ಸರಕಾರ ನೀಡಿದೆ. ನಾವು ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ. ಸ್ವಲ್ಪ ಮಟ್ಟಿಗಾದರೂ ಮೀಸಲಾತಿ ಪಡೆದುಕೊಂಡಿರುವುದು ಖುಷಿ ಕೊಟ್ಟಿದೆ’ ಎಂದು ಅವರು ತಿಳಿಸಿದರು.
‘ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನ ನೀಡುವ ಬಗ್ಗೆ ಶಾಸಕಾಂಗ ಸಭೆ ನಿರ್ಧಾರ ಮಾಡಲಿದೆ. ನಮ್ಮದು ರಾಷ್ಟ್ರೀಯ ಪಕ್ಷ, ಹೈಕಮಾಂಡ್ ಇದೆ ಅವರು ನಿರ್ಧಾರ ಮಾಡಲಿದ್ದಾರೆ. ಸಧ್ಯ ನಾವು ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿದ್ದೇವೆ. ಚುನಾವಣೆಯಲ್ಲಿ ಗೆಲ್ಲುತ್ತೇವೆ. ಇದೀಗ ಚುನಾವಣೆ ಎದುರಿಸುವುದಷ್ಟೇ ನಮ್ಮ ಮುಂದಿರುವ ಗುರಿ’
-ಸಿ.ಸಿ.ಪಾಟೀಲ್ ಲೋಕೋಪಯೋಗಿ ಸಚಿವ