ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪಗೆ ಜಾಮೀನು ರಹಿತ ವಾರಂಟ್ ಆದೇಶ ಹೊರಡಿಸಿದ ಕೋರ್ಟ್
ಬೆಂಗಳೂರು, ಎ.3: ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ ಅವರಿಗೆ ನಗರದ 9ನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜಾಮೀನುರಹಿತ ವಾರಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ.
ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಹಲವು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ಇ.ಕೃಷ್ಣಪ್ಪ ಅವರು ಹಾಜರಾಗದ ಕಾರಣ ಬಂಧಿಸಿ ಕರೆತರುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಡಕಮಾರನಹಳ್ಳಿ ಗ್ರಾಮದ ಸರ್ವೇ ನಂಬರ್ 16/2ರಲ್ಲಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಟ್ಟಡ ಪಕ್ಕದಲ್ಲೇ ವಾಸವಾಗಿದ್ದ ಕೃಷ್ಣಪ್ಪ ಅವರು ಸರಕಾರಿ ಜಾಗ ಎಂದು ಗೊತ್ತಿದ್ದರೂ ರಾಜಕೀಯ ಪ್ರಭಾವ ಬಳಸಿ ಸರಕಾರಿ ಶಾಲೆಯ ಕಟ್ಟಡವನ್ನು ನೆಲಸಮಗೊಳಿಸಿ ಜಾಗವನ್ನ ಪರಭಾರೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಭಾಸ್ಕರ್ ಎಂಬುವರು ಲೋಕಾಯುಕ್ತ ಪೊಲೀಸರಿಗ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ತನಿಖೆಯಲ್ಲಿ 25 ಮಂದಿ ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷ್ಯಾಧಾರರ ಹೇಳಿಕೆ ಪಡೆದುಕೊಂಡಿದ್ದರು. ತನಿಖಾ ಕಾಲದಲ್ಲಿ ಇ.ಕೃಷ್ಣಪ್ಪ ಅವರು ಸರಕಾರಿ ಜಾಗವನ್ನು ಸ್ವಂತ ಬಳಕೆಗಾಗಿ ದುರುಪಯೋಗ ಪಡಿಸಿಕೊಂಡಿರುವುದಾಗಿ ಲೋಕಾಯುಕ್ತ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿತ್ತು. ಈ ಸಂಬಂಧ ನಿರ್ಮಾಪಕ ಕೃಷ್ಣಪ್ಪ ಅವರಿಗೆ ವಿಚಾರಣೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದ್ದರೂ ಗೈರಾಗಿದ್ದರು. ಹೀಗಾಗಿ ಅವರನ್ನು ಬಂಧಿಸಿ ವಿಚಾರಣೆ ಹಾಜರುಪಡಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿ ಎ.28ಕ್ಕೆ ವಿಚಾರಣೆ ಮುಂದೂಡಿದೆ.