ಸಾಮಾಜಿಕ ನ್ಯಾಯದ ಕೊಲೆಯಾಗುತ್ತಿದೆ: ಕರ್ನಾಟಕದ ಮೀಸಲಾತಿ ನೀತಿ ಟೀಕಿಸಿದ ಎಂ.ಕೆ.ಸ್ಟಾಲಿನ್

Update: 2023-04-04 07:57 GMT

ಚೆನ್ನೈ: ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಕೊಲೆಯಾಗುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ  ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್(MK Stalin) ಅವರು ಬಸವರಾಜ ಬೊಮ್ಮಾಯಿ ಸರಕಾರದ ಹೊಸ ಮೀಸಲಾತಿ ನೀತಿಯನ್ನು ತರಾಟೆಗೆ ತೆಗೆದುಕೊಂಡರು.

 ಸಾಮಾಜಿಕ ನ್ಯಾಯಕ್ಕಾಗಿ ಅಖಿಲ ಭಾರತ ಒಕ್ಕೂಟದ ಮೊದಲ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರಸ್ತುತ, ಬಿಜೆಪಿಗೆ ಯಾರು ಮತ ಹಾಕುತ್ತಾರೆ ಹಾಗೂ  ಯಾರು ಇಲ್ಲ ಎಂಬ ಆಧಾರದ ಮೇಲೆ ಹೆಚ್ಚು ಮೀಸಲಾತಿ ನೀಡಲಾಗುತ್ತಿದೆ ಎಂದು ಸ್ಟಾಲಿನ್  ಅಭಿಪ್ರಾಯಪಟ್ಟರು.

“ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕರ್ನಾಟಕದಲ್ಲಿ ಏನು ಮಾಡಲಾಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿರಬಹುದು. ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ಹಿಂಪಡೆಯಲಾಯಿತು. ಅವರನ್ನು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (ಇಡಬ್ಲ್ಯು ಎಸ್) ವರ್ಗಾಯಿಸಲಾಯಿತು. ಮುಸಲ್ಮಾನರಿಗೆ ಇದ್ದ ಮೀಸಲಾತಿಯನ್ನು ವಿಭಜಿಸಿ ಇನ್ನೆರಡು ಸಮುದಾಯಗಳಿಗೆ ನೀಡಿ ಅವರ ನಡುವೆ ಬಿರುಕು ಮೂಡಿಸಿದೆ. ಅಂತೆಯೇ, ಪರಿಶಿಷ್ಟ ಜಾತಿಗಳ ನಡುವೆಯೂ ಪಕ್ಷಪಾತವನ್ನು ತೋರಿಸಲಾಗಿದೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಾಡಲಾಗಿದೆ. ಬಿಜೆಪಿಗೆ ಮತ ಹಾಕುವವರು ಹಾಗೂ  ಮತ ಹಾಕದವರು ಎಂಬ ಕಾರಣಕ್ಕೆ ವರ್ಗೀಕರಣ ಮಾಡಲಾಗಿದೆ. ಕರ್ನಾಟಕದಲ್ಲಿ ಸ್ಪಷ್ಟವಾಗಿ ಸಾಮಾಜಿಕ ನ್ಯಾಯದ ಕೊಲೆಯಾಗುತ್ತಿದೆ’’ ಎಂದು ಸ್ಟಾಲಿನ್ ಹೇಳಿದ್ದಾರೆ.

"ಸಾಮಾಜಿಕ ನ್ಯಾಯವನ್ನು ಸಾಧಿಸುವ ಹೋರಾಟವು ಎಲ್ಲಾ ರಾಜ್ಯಗಳಿಗೆ ಸಂಬಂಧಿಸಿದೆ. ಪ್ರತಿಯೊಂದು ರಾಜ್ಯದಲ್ಲಿನ ವರ್ಗ ಹಾಗೂ ಜಾತಿಗಳ ಆಧಾರದ ಮೇಲೆ ಸಮಸ್ಯೆಗಳ ಮಟ್ಟದಲ್ಲಿ ವ್ಯತ್ಯಾಸಗಳಿರಬಹುದು. ಆದರೆ ಸಮಸ್ಯೆಯ ತಿರುಳು ಒಂದೇ ಆಗಿರುತ್ತದೆ.  ಅಧಿಕ ತಾರತಮ್ಯ, ಬಹಿಷ್ಕಾರ, ಅಸ್ಪೃಶ್ಯತೆ ಹಾಗೂ  ಗುಲಾಮಗಿರಿ, ಅನ್ಯಾಯ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲ ಈ ವಿಷಗಳನ್ನು ಗುಣಪಡಿಸುವ ಔಷಧವೆಂದರೆ ಸಾಮಾಜಿಕ ನ್ಯಾಯ" ಎಂದು ಸ್ಟಾಲಿನ್ ಹೇಳಿದರು.

Similar News