ಗೋರಕ್ಷಣೆಯ ಹೆಸರಿನಲ್ಲಿ ಕೊಲೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಎ.6ಕ್ಕೆ ರಾಜ್ಯಾದ್ಯಂತ ಸಿಪಿಎಂ ಧರಣಿ

Update: 2023-04-04 14:36 GMT

ಬೆಂಗಳೂರು, ಎ.4: ಗೋರಕ್ಷಕ ಹೆಸರಿನಲ್ಲಿನ ಕೊಲೆಗಡುಕ ಗೂಂಡಾ ಪಡೆಯೊಂದು ಇದ್ರೀಸ್ ಪಾಷಾ ಎಂಬ ಬಡ ಕಾರ್ಮಿಕನನ್ನು ಸಾತನೂರು ಬಳಿ ಚಿತ್ರಹಿಂಸೆ ನೀಡಿ ಕೊಲೆಗೈದಿದ್ದು, ಕೂಡಲೇ ಕೊಲೆಗಡುಕರನ್ನು ಬಂಧಿಸಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಎಲ್ಲ ತಾಲೂಕು ಕೇಂದ್ರಗಳಲ್ಲಿ ಎ.6ರಂದು ಧರಣಿಗಳನ್ನು ನಡೆಸಲು ಸಿಪಿಎಂ ತನ್ನ ಎಲ್ಲ ಘಟಕಗಳಿಗೆ ಕರೆ ನೀಡಿದೆ.

ಮಂಗಳವಾರ ಈ ಸಂಬಂಧ ಪ್ರಕಟನೆ ನೀಡಿರುವ ಸಿಪಿಎಂ ರಾಜ್ಯ ಕಾರ್ಯದರ್ಶಿ ಬಸವರಾಜು, ಕೊಲೆಗೀಡಾದ ಇದ್ರೀಷ್ ಪಾಷಾ ಕುಟುಂಬಕ್ಕೆ ರಾಜ್ಯ ಸರಕಾರ 25 ಲಕ್ಷ ರೂ. ಮತ್ತು ಒಂದು ಸರಕಾರಿ ಉದ್ಯೋಗ ಒದಗಿಸುವ ಪರಿಹಾರಗಳನ್ನು ಘೋಷಿಸಬೇಕು. ಮುಸ್ಲಿಮ್ ಸಮುದಾಯ ರಂಜಾನ್ ಹಬ್ಬದಲ್ಲಿ ತೊಡಗಿರುವ ವೇಳೆ ಅವರಿಗೆ ನೆರವಾಗುವಂತಹ ಉಡುಗೊರೆ ನೀಡುವ ಬದಲು, ಸರಕಾರ ಒಂದೆಡೆ ಸಮುದಾಯಕ್ಕೆ ನೀಡಲಾಗಿದ್ದ ಶೇ.4ರ ಮೀಸಲಾತಿಯನ್ನು ಕಿತ್ತುಕೊಂಡು ತಾರತಮ್ಯ ಮೆರೆದಿದೆ ಎಂದು ಟೀಕಿಸಿದ್ದಾರೆ.

ಇನ್ನೊಂದೆಡೆ ಹಿಂದೂ ಕೊಲೆಗಡುಕ ಮತಾಂಧರು ಕಾನೂನನ್ನು ಕೈಗೆತ್ತಿಕೊಂಡು ಅಮಾಯಕ ಬಡ ಮುಸ್ಲಿಮ್ ವ್ಯಕ್ತಿಯ ಕಗ್ಗೊಲೆಗೆ ಮುಂದಾಗಿದ್ದಾರೆ. ಈಚೆಗಿನ ಈ ಎರಡು ಘಟನೆಗಳು ಜಗತ್ತಿನ ಮುಂದೆ ನಾಗರಿಕ ಸಮಾಜ ತೀವ್ರ ನಾಚಿಕೆಯಿಂದ ತಲೆ ತಗ್ಗಿಸುವಂತಹ ಹೇಯ ದುಷ್ಕøತ್ಯಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ಕೊಲೆಗಡುಕ ದಾಳಿಗಳಿಗೆ ಬಿಜೆಪಿ ಹಾಗೂ ಆರೆಸ್ಸೆಸ್‍ಗಳ ಮುಸ್ಲಿಮ್ ದ್ವೇಷದ ರಾಜಕಾರಣವೇ ಪ್ರೇರಣೆಯಾಗಿದೆ. ರಾಜ್ಯ ಸರಕಾರ ಅಧಿಕಾರವನ್ನು ಬಳಸಿ ಪ್ರಜಾಪ್ರಭುತ್ವದ ವಿರೋಧಿಯಾಗಿ, ದಲಿತರು ಹಾಗೂ ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಆಹಾರದ ಹಕ್ಕನ್ನು ಕಸಿಯುತ್ತಿದೆ. ಹೈನೋದ್ಯಮ, ಚರ್ಮೋದ್ಯಮ ಹಾಗೂ ಮಾಂಸೋದ್ಯಮಗಳನ್ನು ಕಾರ್ಪೊರೇಟ್ ಕಂಪೆನಿಗಳ ಲೂಟಿಗೆ ತೆರೆಯುವ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020ನ್ನು ಅಂಗೀಕರಿಸಿ ಜಾರಿಯಲ್ಲಿಟ್ಟಿರುವುದು ಮತ್ತು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ಕಾಯ್ದೆಗೆ ಕ್ರಮವಹಿಸುತ್ತಿರುವುದು ಇಂತಹ ಬಡವರ ಮೇಲಿನ ದಾಳಿಗಳಿಗೆ ಕುಮ್ಮಕ್ಕು ನೀಡುತ್ತದೆ ಎಂದು ತಿಳಿಸಿದ್ದಾರೆ.

'ಕಾರ್ಪೊರೇಟ್ ಪರ ನೀತಿಗಳೇ ದಾಳಿಗಳ ಮೂಲ':

‘ದೇಶ ಹಾಗೂ ರಾಜ್ಯದಲ್ಲಿ ಜನತೆಯ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ದಾಳಿಗಳಿಗೆ ಹಾಗೂ ಮುಸ್ಲಿಮ್ ದ್ವೇಷಕ್ಕೆ ಲೂಟಿಕೋರ ಕಾರ್ಪೊರೇಟ್ ಸಂಸ್ಥೆಗಳ ಪರ ನೀತಿಗಳೇ ಕಾರಣ. ಇದರ ಭಾಗವಾಗಿ ಬಿಜೆಪಿ ನೇತೃತ್ವದ ಡಬಲ್ ಎಂಜಿನ್ ಸರಕಾರಗಳು ಲೂಟಿಕೋರ ಆರ್ಥಿಕ ನೀತಿಗಳಿಗೆ ಕ್ರಮವಹಿಸುತ್ತಿವೆ. ಜನತೆ ಇತ್ತ ಗಮನಹರಿಸದಂತೆ, ಬೇರೆಡೆ ಸೆಳೆಯಲು ಮತಾಂಧ ಮತ್ತು ಜಾತಿವಾದಿ ಶಕ್ತಿಗಳ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಿಪಿಎಂ ದೂರಿದೆ.

Similar News