ಬ್ಯಾಂಕ್‍ಗಳು ಅಂತರರಾಷ್ಟ್ರೀಯ ಮೌಲ್ಯಮಾಪನ ಮಾನದಂಡಗಳಿಗೆ ಬದ್ಧವಾಗಿರಬೇಕು: ರಾಮಪ್ರಸಾದ್ ಪ್ರಜಾಪತಿ

Update: 2023-04-04 15:09 GMT

ಬೆಂಗಳೂರು, ಎ. 4: ಬ್ಯಾಂಕ್ ಸೇರಿದಂತೆ ಹಣಕಾಸು ಸಂಸ್ಥೆಗಳು ಅಂತರ ರಾಷ್ಟ್ರೀಯ ಮೌಲ್ಯಮಾಪನ ಮಾನಂದಂಡಗಳ ಮಂಡಳಿ ನಿಗದಿಪಡಿಸಿದ ಮೌಲ್ಯಮಾಪನ ಮಾನದಂಡಗಳಿಗೆ ಬದ್ಧವಾಗಿರಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‍ಬಿಐ) ಪ್ರಾದೇಶಿಕ ವ್ಯವಸ್ಥಾಪಕ ರಾಮಪ್ರಸಾದ್ ಪ್ರಜಾಪತಿ ಹೇಳಿದ್ದಾರೆ.

ಮಂಗಳವಾರ ಹುಬ್ಬಳ್ಳಿ ಕೇಂದ್ರದ ಮೌಲ್ಯಮಾಪಕರ ಸಂಸ್ಥೆಯು(ಐವಿಎಸ್) ವಿಜಯಪುರದ ಬಿಎಲ್‍ಡಿಇಎ ಎಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ‘ಐವಿಎಸ್ ಅನುಸರಣೆಯ ಪ್ರಕಾರ ಬ್ಯಾಂಕಿಂಗ್ ಮೌಲ್ಯಮಾಪನ’ದ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

‘ಅಂತರರಾಷ್ಟ್ರೀಯ ಮೌಲ್ಯಮಾಪನ ಮಾನದಂಡಗಳಿಗೆ ಬ್ಯಾಂಕ್‍ಗಳು ಬದ್ಧವಾಗಿದ್ದರೆ ಸಾರ್ವಜನಿಕರಿಗೆ ಸಾಲ ನೀಡಲು ಸಹಾಯಕವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಬ್ಯಾಂಕ್‍ಗಳು ಗಮನಹರಿಸಬೇಕು ಎಂದು ಅವರು ತಿಳಿಸಿದರು.

ಬಿಎಲ್‍ಡಿಇ ವಿಭಾಗ ಮುಖ್ಯಸ್ಥ ಡಾ.ನವೀನ್ ದೇಸಾಯಿ, ಬಿಎಲ್‍ಡಿಇ ಅಸೋಸಿಯೇಷನ್ ಮತ್ತು ಎಂಜಿನಿಯರ್ ಗಳ ನಡುವಿನ ಬಾಂಧವ್ಯದ ಕುರಿತು ವಿವರಿಸಿದರು. ಐಓವಿ ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ಮೋಹನ್ ಚೆಬ್ಬಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್.ಕೆ.ರಾಜ್‍ಕುಮಾರ್ ಮತ್ತು ಎಚ್.ಎಂ. ಕುಮಾರ್ ಐವಿಎಸ್ ಅನುಸರಣೆಯ ಸ್ವರೂಪವನ್ನು ಉದಾಹರಣೆಗಳೊಂದಿಗೆ ವಿವರಿಸಿದರು.

ಹುಬ್ಬಳ್ಳಿ ಶಾಖೆಯ ಕಾರ್ಯದರ್ಶಿ ರಾಜು ಕೆ.ಗೌಡ, ಉಪಾಧ್ಯಕ್ಷರಾದ ಮಂಜುನಾಥ ಜಾಲವಾದಿ, ಎಸ್.ಎಸ್.ಹಿರೇಮಠ, ಜಂಟಿ ಕಾರ್ಯದರ್ಶಿ ಶಿವಪ್ರಸಾದ್ ಲಕಮನಹಳ್ಳಿ, ಸಂಕಿರಣ ಸಂಯೋಜಕರಾದ ಸುಧೀರ್ ಪಿ. ಟಂಕಸಾಲಿ, ರಾಜಶೇಖರ್ ಎನ್.ಟೋಪಗಿ ಸೇರಿದಂತೆ ವಿಜಯಪುರ, ಹುಬ್ಬಳ್ಳಿ, ಕಲಬುರಗಿ, ಬಾಗಲಕೋಟೆ ಮತ್ತು ಬೀದರ್ ನ ಮೌಲ್ಯಮಾಪಕರು ಭಾಗವಹಿಸಿದ್ದರು.

Similar News