ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿಗೆ ಮತ್ತೆ ನಾಲ್ವರು ಬಲಿ

Update: 2023-04-05 02:59 GMT

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್-19 ಸೋಂಕಿನಿಂದ ಮತ್ತೆ ನಾಲ್ವರು ಮೃತಪಟ್ಟಿದ್ದಾರೆ. ಇದರಿಂದಾಗಿ ಮಾರ್ಚ್‌ನಿಂದೀಚೆಗೆ ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 28ನ್ನು ತಲುಪಿದೆ. ಸತಾರದಲ್ಲಿ ಇಬ್ಬರು, ಪಿಂಪ್ರಿ ಹಾಗೂ ರತ್ನಗಿರಿಯಲ್ಲಿ ತಲಾ ಒಬ್ಬ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸತಾರ ಜಿಲ್ಲೆಯಲ್ಲಿ ಮಾಸ್ಕ್ ಕಡ್ಡಾಯಪಡಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 3038 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 21179ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ದೇಶದ ಒಟ್ಟು ಸಕ್ರಿಯ ಪ್ರಕರಣಗಳು ಒಟ್ಟು ಸೋಂಕಿನ ಶೇಕಡ 0.05ರಷ್ಟಿದ್ದು, ಕೋವಿಡ್ ಚೇತರಿಗೆ ದರ 98.7ರಷ್ಟಿದೆ. ಕೋವಿಡ್ ಸೋಂಕಿನಿಂದಾದ ಸಾವಿನ ದರ ಶೇಕಡ 1.2 ಆಗಿದೆ.

ದೇಶದಲ್ಲಿ ಕಳೆದ ಕೆಲ ವಾರಗಳಿಂದ ವರದಿಯಾಗುತ್ತಿರುವ ಕೋವಿಡ್ ಪಾಸಿಟಿವ್ ಮಾದರಿಗಳನ್ನು ವಿಶ್ಲೇಷಿಸಿದಾಗ ಪತ್ತೆಯಾದ ಉಪಪ್ರಬೇಧಗಳಲ್ಲಿ ಶೇಕಡ 80 ರಿಂದ 90ರಷ್ಟು ಎಕ್ಸ್‌ಎಕ್ಸ್‌ಬಿ ಪ್ರಬೇಧದವು. ಅದರಲ್ಲೂ ಮುಖ್ಯವಾಗಿ ಎಕ್ಸ್‌ಎಕ್ಸ್‌ಬಿ.1.16 ಉಪಪ್ರಬೇಧಕ್ಕೆ ಸೇರಿವೆ ಎಂದು ಇಂಡಿಯನ್ ಸಾರ್ಸ್-ಕೋವ್-2 ಜೆನೋಮಿಕ್ಸ್ ಕನ್‌ಸ್ಟೋರಿಯಂ ಸಹ ಅಧ್ಯಕ್ಷ ಡಾ.ಎನ್.ಕೆ.ಅರೋರಾ ಹೇಳಿದ್ದಾರೆ.

Similar News