ಮಾರ್ಚ್‌ನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ ಬೆಂಗಳೂರು ಮೆಟ್ರೋ ನಿಲ್ದಾಣ ಜಲಾವೃತ

Update: 2023-04-05 08:29 GMT

ಬೆಂಗಳೂರು(Bengaluru): ಮೆಟ್ರೊ (Metro) ಯೋಜನೆಯ ಎರಡನೆ ಹಂತದ 13.7 ಕಿಮೀ ಉದ್ಧ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಿದ ಕೆಲವೇ ದಿನಗಳಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ಸುರಿದ ಮಳೆಗೆ ನೆಲ್ಲೂರಹಳ್ಳಿ ಮೆಟ್ರೊ ನಿಲ್ದಾಣದ ಆವರಣ ಜಲಾವೃತವಾಗಿದೆ. 

ಈ ಕುರಿತು ಟ್ವೀಟ್ ಮಾಡಿರುವ ವೈಟ್‌ಫೀಲ್ಡ್ ರೈಸಿಂಗ್ ಎಂಬ ನಾಗರಿಕರ ವೇದಿಕೆಯು, "ಹೊಚ್ಚ ಹೊಸ ನೆಲ್ಲೂರಹಳ್ಳಿ ಮೆಟ್ರೊ ನಿಲ್ದಾಣದ ಅಂಕಣ ಹಾಗೂ ಟಿಕೆಟ್ ಕೌಂಟರ್‌ನಲ್ಲಿ ಮಳೆ ನೀರು ಶೇಖರಣೆಯಾಗಿದೆ. @pcronammametro, ಒಂದೇ ಮಳೆಗೆ ನಿಲ್ದಾಣದ ತುಂಬಾ ನೀರು ನಿಂತುಕೊಂಡಿದೆ" ಎಂದು ಹೇಳಿದೆ.

ಶನೋಜ್ ದೇವಸ್ಸಿ ಎಂಬ ಟ್ವಿಟರ್ ಬಳಕೆದಾರರು, "ಕಾಮಗಾರಿಗಳನ್ನು ಸಮರ್ಪಕವಾಗಿ ಪೂರೈಸದೆ ತರಾತುರಿಯಲ್ಲಿ ಮೆಟ್ರೊ ನಿಲ್ದಾಣವನ್ನು ತೆರೆದರೆ ಇದನ್ನು ಮಾತ್ರ ಯಾರಾದರೂ ನಿರೀಕ್ಷಿಸಲು ಸಾಧ್ಯ" ಎಂದು ಪೋಸ್ಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯದ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಅಪೂರ್ಣ ಕಾಮಗಾರಿಗಳನ್ನು ಪ್ರಧಾನಿಯೇಕೆ ಉದ್ಘಾಟಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು. ಪ್ರಧಾನಿ ಭೇಟಿಗೂ ಮುನ್ನ, "ಬೈಯಪ್ಪನಹಳ್ಳಿ ನಿಲ್ದಾಣ ಹಾಗೂ ಕೆ.ಆರ್‌.ಪುರ ನಿಲ್ದಾಣದ ನಡುವಿನ ಕಡ್ಡಾಯ ನಿರ್ಮಾಣ ಕಾಮಗಾರಿಗಳು ಸಂಪೂರ್ಣವಾಗುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿಯವರೇಕೆ ನೇರಳೆ ಮೆಟ್ರೊ ಮಾರ್ಗವನ್ನು ಉದ್ಘಾಟಿಸುತ್ತಿದ್ದಾರೆ? ವಿದ್ಯುದೀಕರಣಗೊಂಡ ರೈಲು ಮಾರ್ಗದ ಮೇಲೆ ಹಾದು ಹೋಗುವ ಈ ಮೆಟ್ರೊ ಸಂಪರ್ಕವು ಆರು ತಿಂಗಳಿಗಿಂತ ಹೆಚ್ಚು ಅವಧಿಯ ನಂತರ ಪೂರ್ಣಗೊಳ್ಳುವುದು ಸಮರ್ಪಕವಾದುದಲ್ಲ" ಎಂದು ಟೀಕಿಸಿದ್ದರು.

ಕೆ.ಆರ್.ಪುರ ನಿಲ್ದಾಣ ಹಾಗೂ ವೈಟ್‌ಫೀಲ್ಡ್ ನಿಲ್ದಾಣದ ನಡುವಿನ ಮೆಟ್ರೊ ಮಾರ್ಗವನ್ನು ಮಾರ್ಚ್ 25ರಂದು ಉದ್ಘಾಟಿಸಲಾಗಿತ್ತು.

ಇದನ್ನೂ ಓದಿ: ಆದಿವಾಸಿ ಯುವಕ ಮಧು ಹತ್ಯೆ ಪ್ರಕರಣ: ಸಂತ್ರಸ್ತ ಕುಟುಂಬಕ್ಕೆ ಕಾನೂನು ಸಹಾಯ ಒದಗಿಸಿದ್ದ ನಟ ಮಮ್ಮುಟ್ಟಿ

Similar News