×
Ad

​ನಟ ಸುದೀಪ್‍ಗೆ ಬೆದರಿಕೆ ಪ್ರಕರಣ: ಸಿಸಿಬಿ ತನಿಖೆಗೆ ಆದೇಶ

Update: 2023-04-05 17:30 IST

ಬೆಂಗಳೂರು, ಎ.5: ಕನ್ನಡ ಚಿತ್ರರಂಗದ ನಟ ಕಿಚ್ಚ ಸುದೀಪ್‍ಗೆ ಬೆದರಿಕೆ ಪತ್ರಗಳನ್ನು ಬರೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಜವಾಬ್ದಾರಿ ಸಿಸಿಬಿಗೆ ವರ್ಗಾವಣೆಗೊಳಿಸಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಮಾ. 3ರಂದು ಬಂದ ಅನಾಮಧೇಯ ಪತ್ರಗಳಲ್ಲಿ ಸುದೀಪ್ ಮತ್ತು ಅವರ ಕುಟುಂಬ ಸದಸ್ಯರ ಹೆಸರುಗಳನ್ನ ಉಲ್ಲೇಖಿಸಿ ಬೆದರಿಕೆ ಹಾಕಲಾಗಿದೆ. ಖಾಸಗಿ ವಿಡಿಯೊ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಗೆ ಸುದೀಪ್ ಆಪ್ತ ಜಾಕ್ ಮಂಜು ದೂರು ನೀಡಿದ್ದರು.

ಸದ್ಯ ಸುದೀಪ್ ಮ್ಯಾನೇಜರ್ ಹಾಗೂ ಆಪ್ತರಾಗಿರುವ ಜಾಕ್ ಮಂಜು ನೀಡಿರುವ ದೂರಿನ ಅನ್ವಯ ಐಪಿಸಿ 504 (ಶಾಂತಿಭಂಗ ಹಾಗೂ ಪ್ರಚೋದನೆ), 506 (ಜೀವ ಬೆದರಿಕೆ) ಹಾಗೂ ಐಟಿ ಆ್ಯಕ್ಟ್ ಅಡಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜತೆಗೆ, ಬೆದರಿಕೆ ಪತ್ರ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆಗೊಳಿಸಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಪತ್ರದಲ್ಲೇನಿದೆ?: ಸುದೀಪ್‍ಗೆ ಅನಾಮಧ್ಯೇಯ ಪತ್ರಗಳ ಮೂಲಕ ಅವಾಚ್ಯವಾಗಿ ನಿಂದಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ. ಸುದೀಪ್ ಕುಟುಂಬವು ಸಮಾಜದಲ್ಲಿ ಗೌರವಾನ್ವಿತ ಕುಟುಂಬವಾಗಿದ್ದು, ಈ ರೀತಿ ಸಂಚು ರೂಪಿಸಿ ಬೆದರಿಕೆ ಪತ್ರಗಳನ್ನು ಕಳುಹಿಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಟರ ಆಪ್ತ ಜಾಕ್ ಮಂಜು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Similar News