×
Ad

ಬೆಂಗಳೂರು: ಹಾಡಿನ ಧ್ವನಿ ಕಡಿಮೆಗೊಳಿಸಿ ಎಂದಿದ್ದಕ್ಕೆ ವ್ಯಕ್ತಿಯ ಥಳಿಸಿ ಕೊಲೆ

Update: 2023-04-05 19:51 IST

ಬೆಂಗಳೂರು, ಎ. 5: ರಸ್ತೆಯಲ್ಲಿ ಜೋರಾಗಿ ಹಾಕಿದ್ದ ಹಾಡಿನ ಧ್ವನಿ ಕಡಿಮೆಗೊಳಿಸುವ ವಿಚಾರಕ್ಕೆ ಆರಂಭವಾದ ಜಗಳ ವ್ಯಕ್ತಿಯೊರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇಲ್ಲಿನ ಎಚ್‍ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ವಿಜ್ಞಾನ ನಗರದಲ್ಲಿ ಈ ಘಟನೆ ನಡೆದಿದ್ದು, ಲಾಯೆಡ್ ನೇಮಯ್ಯ ಮೃತ ವ್ಯಕ್ತಿಯಾಗಿದ್ದು,  ಒಡಿಶಾ ಮೂಲದ ರಾಮ್ ಸಮಂತ್ರೆ, ಬಸುದೇವ್ ಸಮಂತ್ರೆ, ಅನಿರುದ್ಧ್ ಸೇರಿದಂತೆ ನಾಲ್ವರ ವಿರುದ್ಧ ಹತ್ಯೆಗೈದ ಆರೋಪದಡಿ ಪ್ರಕರಣ ದಾಖಲಾಗಿದೆ.

ಎ.2 ರಂದು ಬೆಳಗ್ಗಿನ ಜಾವ 4.30ರ ಸುಮಾರಿಗೆ ವಿಜ್ಞಾನ ನಗರದ ಖಾಸಗಿ ಅಪಾರ್ಟ್‍ಮೆಂಟ್ ಮುಂದಿನ ರಸ್ತೆಯಲ್ಲಿ ಜೋರಾದ ಧ್ವನಿಯಲ್ಲಿ ಹಾಡು ಕೇಳಿಬಂದಿದ್ದು, ಲಾಯೆಡ್‍ ನೇಮಯ್ಯ ಬಂದು ಸೌಂಡ್ ಕಡಿಮೆ ಮಾಡಿ, ಮನೆಯಲ್ಲಿ ವಯಸ್ಸಾದವರು ಇದ್ದಾರೆ ಎಂದು ಹೇಳಿದ್ದರು. ಈ ವೇಳೆ ಲಾಯೆಡ್ ಜೊತೆ ಗಲಾಟೆ ಮಾಡಿದ್ದ ಆರೋಪಿಗಳು ಆತನನ್ನು ಥಳಿಸಿ, ಕಲ್ಲು, ಚಪ್ಪಲಿಗಳಿಂದ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ಹಲ್ಲೆಗೊಳಗಾದ ಲಾಯೆಡ್ ಮತ್ತು ಆರೋಪಿಗಳು ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿತ್ತು.

ಗಲಾಟೆ ಬಳಿಕ ಅಸ್ಪತ್ರೆಯಲ್ಲಿ ದಾಖಲಾಗಿದ್ದ ಲಾಯೆಡ್ ನೇಮಯ್ಯ ತಡರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಎಚ್‍ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Similar News