ಅಂಬೇಡ್ಕರ್ ಜಯಂತಿ ಕೈಬಿಟ್ಟಿಲ್ಲ: ಸಂಸ್ಕೃತಿ ಇಲಾಖೆ ಸ್ಪಷ್ಟನೆ

Update: 2023-04-05 18:28 GMT

ಬೆಂಗಳೂರು, ಎ. 5: ಸಮಾಜ ಸುಧಾರಕರು, ವಚನಕಾರರು, ಧಾರ್ಮಿಕ ಪುರುಷರು, ಪುರಾಣ ಪ್ರಸಿದ್ಧ ವ್ಯಕ್ತಿಗಳು, ಇತಿಹಾಸ ಪ್ರಸಿದ್ಧ ವ್ಯಕ್ತಿಗಳು ಹೀಗೆ ಸಮಾಜಕ್ಕೆ ತಮ್ಮ ತತ್ವಾದರ್ಶಗಳಿಂದ ಆದರ್ಶ ಪ್ರಾಯರಾದ ಮಹಾಪುರುಷರ/ಗಣ್ಯರ ಜೀವನ ಸಾಧನೆಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಿ, ಮಾರ್ಗದರ್ಶನ ನೀಡುವ ದೃಷ್ಟಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಒಟ್ಟು 32 ಮಹಾಪುರುಷರ ಜಯಂತಿಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಆ ಪೈಕಿ 2023ನೆ ಸಾಲಿನ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಆರು ಜಯಂತಿಗಳನ್ನು ಆಚರಿಸಬೇಕಿದ್ದು, ಆದರೆ ಮಾ. 29ರಿಂದ ಮೇ 15ರ ವರೆಗೆ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಸದರಿ ಆರು ಜಯಂತಿಗಳನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಣೆ ಮಾಡುವಂತೆ ಹಾಗೂ ಸದರಿ ಆಚರಣೆಗಳಿಗೆ ಪ್ರತಿ ಜಯಂತಿಗೆ ಜಿಲ್ಲಾ ಮಟ್ಟಕ್ಕೆ 3ಸಾವಿರ ರೂ.ಗಳು ಹಾಗೂ ತಾಲೂಕು ಮಟ್ಟಕ್ಕೆ 1,500 ರೂ.ಗಳಂತೆ ಇಲಾಖೆ ವತಿಯಿಂದ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಎಲ್ಲ್ಲ ಜಿಲ್ಲಾಧಿಕಾರಿಗಳಿಗೆ ಎ.1ರ ಪತ್ರದ ಮೂಲಕ ತಿಳಿಸಲಾಗಿರುತ್ತದೆ.

ಈ ಮಧ್ಯೆ ಹಲವು ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ, ಎ.1ರ ಪತ್ರವನ್ನು ಉಲ್ಲೇಖಿಸಿ, ಇದೇ ಎ.14ರಂದು ಆಚರಿಸಲಾಗುವ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಕೈಬಿಟ್ಟಿದೆ ಎಂಬ ಸುದ್ದಿಯನ್ನು ಹರಿಯಬಿಡಲಾಗಿದ್ದು, ಈ ಸುದ್ದಿಯು ವಾಸ್ತವಾಂಶಕ್ಕೆ ದೂರವಾಗಿರುತ್ತದೆ.

ವಾಸ್ತವವಾಗಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ ರಾಂ ರವರ ಜಯಂತಿಗಳನ್ನು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರತಿವರ್ಷ ಆಚರಿಸಲಾಗುತ್ತಿದ್ದು, ಈ 2 ಜಯಂತಿಗಳ ಆಚರಣೆಗೆ ಸಂಬಂಧಿಸಿದ ವಿಷಯಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ ಎಂಬ ಅಂಶವನ್ನು ಈ ಮೂಲಕ ಸ್ಪಷ್ಟಪಡಿಸಲಾಗಿದೆ ಎಂದು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Similar News